ಅದು ಜೋಳ, ತೆಂಗು, ಹಲಸು ಸೇರಿದಂತೆ ವಿವಿಧ ಬೆಳೆಗಳಿಂದ ಕಂಗೊಳಿಸುತ್ತಿರುವ ಫಲವತ್ತಾದ ಭೂಮಿ. ರೈತ ಕುಟುಂಬಕ್ಕೆ ಆ ಭೂಮಿಯೇ ಆಧಾರ. ಆದ್ರೆ ಆ ಭೂಮಿಯನ್ನು 19 ವರ್ಷಗಳ ಹಿಂದೆ ನೋಟಿಫಿಕೇಶನ್ ಮಾಡಲಾಗಿದೆ ಎಂದು ಕೆಐಎಡಿಬಿ ಅಧಿಕಾರಿಗಳು (Karnataka Industrial Area Development Board) ಇದೀಗ ವಶಕ್ಕೆ ಮುಂದಾಗಿದ್ದು, ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟಕ್ಕೂ ಕೆಐಎಡಿಬಿ ಅಧಿಕಾರಿಗಳು ಹೀಗೆ ರೈತರಿಗೆ ಕಿರುಕುಳ ನೀಡುತ್ತಿರುವುದಾದರೂ ಎಲ್ಲಿ ಅಂತೀರಾ, ಈ ಸ್ಟೋರಿ ನೋಡಿ. ಪೊಲೀಸರ ಸರ್ಪಗಾವಲಿನಲ್ಲಿ ಕೆಐಎಡಿಬಿ ಅಧಿಕಾರಿಗಳ ದಂಡು, ಅದೇ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ. ಈ ಎಲ್ಲ ವಿದ್ಯಮಾನಗಳು ಕಂಡು ಬಂದಿದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ (Anekal KIADB) ಇಗ್ಗಲೂರು ಬಳಿ. ಇಗ್ಗಲೂರು ಗ್ರಾಮದ ಸರ್ವೆ 83/4 ರಲ್ಲಿನ 1ಎಕರೆ 36 ಗುಂಟೆ ಜಮೀನು ಜಯರಾಮ್ ಕುಟುಂಬಕ್ಕೆ ಪಿತ್ರಾರ್ಜಿತವಾಗಿ ಬಂದ ಸ್ವತ್ತು. ಆದ್ರೆ 1996 ರಲ್ಲಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ನೋಟಿಫೈ ಮಾಡಿತ್ತು.
ಆದ್ರೆ ಅಂದಿನಿಂದ ರೈತ ಜಯರಾಮ್ ಕುಟುಂಬ ಭೂ ಸ್ವಾಧೀನ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿತ್ತು. ಆದರೂ ನ್ಯಾಯಾಲಯದಲ್ಲಿ ದಾವೆ ಇರುವಾಗಲೇ 2005 ರಲ್ಲಿ ಕೆಐಎಡಿಬಿ ಫೈನಲ್ ನೋಟಿಫಿಕೇಶನ್ ಮಾಡಿತ್ತು. ಛಲ ಬಿಡದ ರೈತಾಪಿ ಕುಟುಂಬ ಕಾನೂನು ಹೋರಾಟ ಮುಂದುವರಿಸಿತ್ತು. ಜೊತೆಗೆ ಜಮೀನಿನಲ್ಲಿ ಅನುಭವದಲ್ಲಿದ್ದುಕೊಂಡು ಕೃಷಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿತ್ತು. ಆದ್ರೆ ಇದೀಗ ನ್ಯಾಯಾಲಯದಲ್ಲಿ ರೈತರ ಅರ್ಜಿ ವಜಾ ಆಗಿದೆ ಎಂದು ಬರೋಬ್ಬರಿ 20 ವರ್ಷಗಳ ಬಳಿಕ ಕೆಐಎಡಿಬಿ ಅಧಿಕಾರಿಗಳು ಜಮೀನು ವಶಕ್ಕೆ ಆಗಮಿಸಿದ್ದಾರೆ.
ಆದರೆ ಕೆಐಎಡಿಬಿ ಅಧಿಕಾರಿಗಳು ಫಲವತ್ತಾದ ಜಮೀನುಗಳ ಮೇಲೆ ಕಣ್ಣು ಹಾಕಿ ಪ್ರಭಾವಿಗಳಿಗೆ ಕಸಿದು ಕೊಡುತ್ತಿದ್ದಾರೆ. ಇಗ್ಗಲೂರು ಸರ್ವೆ ನಂ 83/4 ರಲ್ಲಿನ ,1ಎಕರೆ 36 ಗುಂಟೆ ಸದ್ಯ ಐದು ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಜಮೀನು. ಆದ್ರೆ 1 ಲಕ್ಷ 30 ಸಾವಿರಕ್ಕೆ ರೈತರ ಒಪ್ಪಿಗೆ ಪಡೆಯದೇ 2005 ರಲ್ಲಿ ಕೆಐಎಡಿಬಿಯಿಂದ ಭೂ ಸ್ವಾಧೀನಕ್ಕೆ ನೋಟೀಫೈ ಮಾಡಿತ್ತು.
ಅಂದಿನಿಂದ ರೈತ ಜಯರಾಮ್ ಕುಟುಂಬ ಕಾನೂನು ಹೋರಾಟ ನಡೆಸಿದೆ. ಜಮೀನು ವಿವಾದ ನ್ಯಾಯಾಲಯದಲ್ಲಿದ್ದರು, ಕಾನೂನು ಉಲ್ಲಂಘಿಸಿ ಕೆಐಎಡಿಬಿಯಿಂದ ಬೇರೆ ಬೇರೆ ಕಂಪನಿಗಳಿಗೆ ಜಮೀನು ಅಲಾಟ್ಮೆಂಟ್ ಮಾಡಲಾಗಿತ್ತು. ನ್ಯಾಯಾಂಗ ನಿಂದನೆ ಹಿನ್ನೆಲೆ ಕೆಲ ಕಂಪನಿಗಳು ಜಮೀನು ತಿರಸ್ಕರಿಸಿದ್ದವು. ತಾವು ಪಾವತಿಸಿದ್ದ ಹಣ ವಾಪಸ್ ಪಡೆದಿದ್ದವು. ಕಂಪನಿಗಳು ಜಮೀನು ತಿರಸ್ಕಾರ ಮಾಡಿದ ಹಿನ್ನೆಲೆ ಕೆಐಎಡಿಬಿ ಅಧಿಕಾರಿಗಳು ಕೃಷಿಯೋಗ್ಯ ಭೂಮಿ ಎಂದು ಡಿನೋಟಿಫಿಕೇಶನ್ ಮಾಡುವುದಾಗಿ ತಿಳಿಸಿದ್ದರು. ನಾವು ಸಹ ಜಮೀನು ಉಳಿಯಿತು ಎಂದು ತೋಟ ಮಾಡಿಕೊಂಡಿದ್ದೆವು.
ಇದನ್ನೂ ಓದಿ: ಮಣ್ಣಿನ ಮೋಹಕ್ಕೆ ಹೊಲದಲ್ಲಿ ಕೊಲೆಯಾದ ಮಹಿಳೆ, ಡೇಟ್ ಫಿಕ್ಸ್ ಮಾಡಿ ಹೊಡಿತೀನಿ ಎಂದಿದ್ದ ಹಂತಕ! ಯಾಕೆ?
ಆದ್ರೆ ನ್ಯಾಯಾಲಯದಲ್ಲಿ ನಮ್ಮ ಅರ್ಜಿ ವಜಾ ಆಗಿದೆ ಎಂದು ಈಗ ಮರಳಿ ಬಂದಿದ್ದಾರೆ. ನ್ಯಾಯಾಲಯದ ಮುಂದೆ ಇನ್ನೊಂದು ಅರ್ಜಿ ಇದೆ. ಜೊತೆಗೆ ತಡೆಯಾಜ್ಞೆ ಸಹ ಇದ್ದರೂ ಒತ್ತಾಯಪೂರ್ವಕವಾಗಿ ಜಮೀನು ವಶಕ್ಕೆ ಬಂದಿದ್ದಾರೆ. ಇಡೀ ಕುಟುಂಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಮಾಧಿಗಳ ಜೊತೆಗೆ ಜಾಗವನ್ನ ಅಧಿಕಾರಿಗಳು ವಶಕ್ಕೆ ಪಡೆಯಲಿ, ಆದ್ರೆ ಜಮೀನು ಭೂ ಸ್ವಾಧೀನಕ್ಕೆ ಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ರೈತರ ಒಪ್ಪಿಗೆ ಪಡೆದು ಭೂ ಸ್ವಾಧೀನ ಮಾಡಬೇಕೆಂಬ ಕಾನೂನು ಇದೆ. ಆದರೆ ರೈತರಿಗೆ ಇಂದಿನವರೆಗೂ ಕೆಐಎಡಿಬಿಯಂತಹ ಸಂಸ್ಥೆಗಳಿಂದ ಕಿರುಕುಳ ತಪ್ಪಿದ್ದಲ್ಲ. ಇಂದೂ ಸಹ ಪೊಲೀಸರ ಸರ್ಪಗಾವಲಿನಲ್ಲಿ ಆಗಮಿಸಿದ್ದ ಕೆಐಎಡಿಬಿ ಅಧಿಕಾರಿಗಳಿಗೆ ರೈತ ಕುಟುಂಬ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದರಿಂದ ವಾಪಸ್ ಆಗಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ