BMCRI Museum: ಬಿಎಂಸಿಆರ್ಐನಲ್ಲಿ ಫೋರೆನ್ಸಿಕ್ ಸೈನ್ಸ್ ಮತ್ತು ಬ್ಯಾಲಿಸ್ಟಿಕ್ಸ್ ವಸ್ತುಸಂಗ್ರಹಾಲಯ
ಬೆಂಗಳೂರಿನ ಅತೀ ಪ್ರಾಚೀನ ವೈದ್ಯಕೀಯ ಕಾಲೇಜುಗಳಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಕೂಡ ಒಂದು. ಬಿಎಂಸಿಆರ್ಐ ತೊಂಬತ್ತರ ದಶಕದಲ್ಲೇ ಪ್ರಗತಿಪರ ಕಾಲೇಜಾಗಿತ್ತು. 1960 ರಲ್ಲೇ ಈ ಕಾಲೇಜು ವಿಧಿ ವಿಜ್ಞಾನ (Forensic Science) ವಿಭಾಗವನ್ನು ಹೊಂದಿತ್ತು.
ಬೆಂಗಳೂರು: ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಆರಂಭಿಸಲಾಗಿರುವ ಫೋರೆನ್ಸಿಕ್ ಸೈನ್ಸ್ ಮತ್ತು ಬ್ಯಾಲಿಸ್ಟಿಕ್ ವಸ್ತುಸಂಗ್ರಹಾಲಯವನ್ನು ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ (M.N Achyut) ಶುಕ್ರವಾರ (ಫೆಬ್ರವರಿ 10), ಅನಾವರಣಗೊಳಿಸಿದರು. ವಸ್ತುಸಂಗ್ರಹಾಲಯದಲ್ಲಿ ವಿಧಿವಿಜ್ಞಾನ ವಿಭಾಗವು (Forensic Science Department) ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಬಂದಿರುವ ವಿವಿಧ ರೀತಿಯ ಕ್ರಿಮಿನಲ್ ಕೇಸ್ ಉದಾಹರಣೆಗಳನ್ನು ಪ್ರದರ್ಶಿಸಲಾಗುತ್ತದೆ. ಇಲ್ಲಿ ನರಹತ್ಯೆಯಿಂದ ಆತ್ಮಹತ್ಯೆಯವರೆಗೆ ಅವುಗಳ ಕಾರಣಗಳನ್ನು ಗುರುತಿಸಲು ಬಳಸುವ ವಿಧಾನಗಳ ವಿವರಗಳನ್ನು ತೋರಿಸಲಾಗುತ್ತದೆ. ಅಲ್ಲದೆ ಈ ಮ್ಯೂಸಿಯಂನಲ್ಲಿ ಮಾರಣಾಂತಿಕ ಗಾಯಗಳಿಗೆ ಸಂಬಂಧಿಸಿದ, ಸಾವಿನ ಕಾರಣಗಳನ್ನು ಸೂಚಿಸುವ ದೇಹದ ಅಂಗಾಂಶಗಳು, ಮೂಳೆಗಳ ಮಾದರಿಗಳೂ ಕಾಣ ಸಿಗುತ್ತವೆ. ಬ್ಯಾಲಿಸ್ಟಿಕ್ಸ್ ವಸ್ತುಸಂಗ್ರಹಾಲಯವು ವೈದ್ಯಕೀಯ ವಿಧಿವಿಜ್ಞಾನ ವಿಭಾಗವು ಪರಿಶೀಲಿಸಿದ ವಿವಿಧ ಗುಂಡುಗಳು ಮತ್ತು ಬಂದೂಕುಗಳ ಮಾದರಿಗಳನ್ನು ಹೊಂದಿದೆ.
ಅಪರಾಧಗಳನ್ನು ಪರಿಹರಿಸುವಲ್ಲಿ ಫೋರೆನ್ಸಿಕ್ ಸೈನ್ಸ್ ಮತ್ತು ಟಾಕ್ಸಿಕಾಲಜಿ ಅಧ್ಯಯನಗಳ ಕೊಡುಗೆಗಳನ್ನು ಪ್ರದರ್ಶಿಸಲು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಇದೀಗ ತನ್ನ ಕ್ಯಾಂಪಸ್‌ನಲ್ಲಿ ಹೊಸ ವಿಧಿವಿಜ್ಞಾನ ಔಷಧ, ವಿಷಶಾಸ್ತ್ರ ಮತ್ತು ಬ್ಯಾಲಿಸ್ಟಿಕ್ಸ್ ಮ್ಯೂಸಿಯಂ ಅನ್ನು ಅನಾವರಣಗೊಳಿಸಿದೆ.
“ಈ ವಸ್ತುಸಂಗ್ರಹಾಲಯವು ಫೋರೆನ್ಸಿಕ್ ಸೈನ್ಸ್ ಮತ್ತು ಬ್ಯಾಲಿಸ್ಟಿಕ್ ವಿಷಯಗಳ ಬಗ್ಗೆ ಆಳವಾದ ತಿಳಿವಳಿಕೆಯನ್ನು ನೀಡುತ್ತದೆ. ಮುಂದಿನ ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಲಿಯಲು ಅಮೂಲ್ಯವಾದ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಫೋರೆನ್ಸಿಕ್ ಪ್ರಕರಣಗಳ ವಿವರವಾದ ಮಾಹಿತಿ, ಸಂಶೋಧನೆಗಳು ಮತ್ತು ಅವಶೇಷಗಳನ್ನು ಒಂದೆಡೆ ಸಂಗ್ರಹಿಸಿ ಸಂರಕ್ಷಿಸಲು, ದಾಖಲಿಸಲು, ವಿಶ್ಲೇಷಿಸಲು ಮತ್ತು ಅರ್ಥೈಸಲು ಇದೊಂದು ವಿನಮ್ರ ಪ್ರಯತ್ನ” ಎಂದು ಫೋರೆನ್ಸಿಕ್ ಮೆಡಿಸಿನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ ಎಸ್.ವೆಂಕಟ ರಾಘವ (Dr S. Venkata Raghav) ಹೇಳಿದರು.
“ಆರು ದಶಕಗಳಿಂದ, ಇಲಾಖೆಯು ಸಾವಿರಾರು ಶವಪರೀಕ್ಷೆಗಳನ್ನು ನಡೆಸಿದೆ, ನೂರಾರು ಆರೋಪಿಗಳನ್ನು ಪರೀಕ್ಷಿಸಿದೆ, ಅಪರಾಧಗಳು ಮತ್ತು ಅಪರಾಧಿಗಳ ಪತ್ತೆಗೆ ಕಾರಣವಾಗುವ ತಜ್ಞರ ಅಭಿಪ್ರಾಯಗಳನ್ನು ನೀಡಿದೆ. ಸಂತ್ರಸ್ತರಿಗೆ ಮತ್ತು ನೊಂದವರಿಗೆ ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಪೋಲೀಸ್ ಮತ್ತು ನ್ಯಾಯಾಂಗಕ್ಕೆ ಸಹಾಯ ಮಾಡುತ್ತಿದೆ” ಎಂದು ಪ್ರಾಧ್ಯಾಪಕರು ತಿಳಿಸಿದರು.
ಇದನ್ನೂ ಓದಿ: ಪತ್ನಿಗೆ ಡೆತ್ ನೋಟ್ ಕಳುಹಿಸಿ, ರೈಲಿಗೆ ತಲೆಕೊಟ್ಟು ಐಟಿ ಇನ್ಸ್ಪೆಕ್ಟರ್ ಆತ್ಮಹತ್ಯೆ
“ವೈದ್ಯಕೀಯ ವಿದ್ಯಾರ್ಥಿಗಳು ಇಂದಿನ ಆಧುನಿಕ ತಂತ್ರಜ್ಞಾನದ ಬಗ್ಗೆ ಚಿರಪರಿಹಚಿತರಾಗಿರಬೇಕು. CT ಮತ್ತು MRI ಸ್ಕ್ಯಾನ್‌ಗಳನ್ನು ಬಳಸಿಕೊಂಡು ವರ್ಚುವಲ್ ಶವಪರೀಕ್ಷೆ ಮಾಡುವುದು, ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟರ್ ತಂತ್ರಜ್ಞಾನವನ್ನು ಬಳಸಿಕೊಂಡು ಸಿಕ್ಕ ಅವಶೇಷಗಳಿಂದ ಜನರನ್ನು ಗುರುತಿಸುವುದು, ವಿಧಿ ವಿಜ್ಞಾನ ಬಳಸಿಕೊಂಡು ಮುಖದ ಪುನರ್ನಿರ್ಮಾಣ ಮಾಡುವುದು ಹೀಗೆ ಹಲವು ಆಧುನಿಕ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ತಿಳಿದಿರಬೇಕು” ಎಂದು ಜಂಟಿ ಪೊಲೀಸ್ ಆಯುಕ್ತರು ಹೇಳಿದರು.
ಮೆಡಿಕಲ್ ಕಾಲೇಜಿಗೆ ಹೊಂದಿಕೊಂಡಿರುವ ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್‌ನಲ್ಲಿರುವ ಹಳೆಯ ವಸ್ತುಸಂಗ್ರಹಾಲಯವನ್ನು ಹೊಸ ವಸ್ತುಸಂಗ್ರಹಾಲಯವನ್ನಾಗಿ ಬದಲಾಯಿಸಲಾಗಿದೆ. ಬೆಂಗಳೂರಿನಲ್ಲಿರುವ ಅತ್ಯಂತ ಹಳೆಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾದ BMCRI, 1960 ರ ದಶಕದಿಂದಲೂ ಫೋರೆನ್ಸಿಕ್ ಮೆಡಿಸಿನ್ ವಿಭಾಗವನ್ನು ಹೊಂದಿತ್ತು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:41 am, Sat, 11 February 23