ಬಿಬಿಎಂಪಿ ಆಸ್ತಿ ತೆರಿಗೆ: ವಿಧಾನಸೌಧ, ರಾಜ ಭವನ ಸೇರಿ 258 ಸರ್ಕಾರಿ ಕಚೇರಿಗಳಿಗೂ ನೋಟಿಸ್!
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ವಿರುದ್ಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈಗಾಗಲೇ ಕಠಿಣ ಕ್ರಮಕ್ಕೆ ಮುಂದಾಗಿದೆ. ಖಾಸಗಿ ಆಸ್ತಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ. ಆದರೆ ವಿಧಾನಸೌಧ, ರಾಜ ಭವನ ಸೇರಿದಂತೆ ಸುಮಾರು 258 ಸರ್ಕಾರಿ ಕಚೇರಿಗಳೇ ತೆರಿಗೆ ಪಾವತಿ ಮಾಡಿಲ್ಲ ಎಂಬ ವಿಚಾರ ಬಳಕೆ ಬಂದಿದೆ.

ಬೆಂಗಳೂರು, ಮಾರ್ಚ್ 3: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಮಹಾನಗರ ಪಾಲಿಕೆ (BBMP) ಇದೀಗ ನಾಗರಿಕರಿಗೆ ನೋಟಿಸ್ ನೀಡುವ ಮೂಲಕ ಕಠಿಣ ಕ್ರಮಕ್ಕೆ ಮುಂದಾಗಿದೆ. ಅಚ್ಚರಿ ಎಂದರೆ, ಬಿಬಿಎಂಪಿ ನೋಟಿಸ್ ನೀಡಿರುವ ಪೈಕಿ ವಿಧಾನಸೌಧ, ವಿಕಾಸ ಸೌಧ, ರಾಜಭವನ ಸೇರಿದಂತೆ 258 ಸರ್ಕಾರಿ ಕಚೇರಿಗಳು ಕೂಡ ಒಳಗೊಂಡಿವೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ಆಸ್ತಿಗಳಿಗೆ ನೀಡುವಂತೆಯೇ ಸರ್ಕಾರಿ ಆಸ್ತಿಗಳಿಗೂ ಕೂಡ ತೆರಿಗೆ ಬಾಕಿ ಪಾವತಿಗೆ ನೋಟಿಸ್ ನೀಡಲಾಗುತ್ತಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದು, ತೆರಿಗೆ ಬಾಕಿ ಮುಂದುವರಿಯುತ್ತಲೇ ಇದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ವಿದ್ಯುತ್ ಕಚೇರಿಗಳು ಮತ್ತು ಸರ್ಕಾರಿ ಕಚೇರಿಗಳು ಬಾಕಿ ಇರಿಸಿಕೊಂಡಿರುವ ಆಸ್ತಿ ತೆರಿಗೆಯ ಒಟ್ಟು ಮೊತ್ತದ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ, ವರ್ಷಗಳಿಂದ ತೆರಿಗೆಗಳು ಪಾವತಿಯಾಗದೆ ಒಟ್ಟು ಮೊತ್ತವು ಕೋಟಿಗಳಷ್ಟಿದೆ ಎಂದು ಮೂಲಗಳು ಅಂದಾಜಿಸಿವೆ.
ವನ್ ಟೈಂ ಸೆಟಲ್ಮೆಂಟ್ ಪ್ರಯೋಜನ ಪಡೆಯದ ಸರ್ಕಾರಿ ಕಚೇರಿಗಳು
ಬಾಕಿ ಮೇಲಿನ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಮತ್ತು ದಂಡವನ್ನು 50% ರಷ್ಟು ಕಡಿಮೆ ಮಾಡುವ ಮೂಲಕ ಪರಿಹಾರವನ್ನು ನೀಡುವ ಒಂದು ಬಾರಿ ಇತ್ಯರ್ಥ (ವನ್ ಟೈಂ ಸೆಟಲ್ಮೆಂಟ್) ಯೋಜನೆಯು ಸರ್ಕಾರಿ ಕಚೇರಿಗಳಿಗೂ ಮುಕ್ತವಾಗಿತ್ತು. ಆದಾಗ್ಯೂ, ಇದರ ಪ್ರಯೋಜನವನ್ನು ಪಡೆಯಲಿಲ್ಲ ಮತ್ತು ವನ್ ಟೈಂ ಸೆಟಲ್ಮೆಂಟ್ ಯೋಜನೆಯು ಈಗ ಕೊನೆಗೊಂಡಿದೆ.
ಬಿಬಿಎಂಪಿಯು ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಲು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಜ್ಞಾಪನೆ ಪತ್ರಗಳನ್ನು ಕಳುಹಿಸುತ್ತಿದೆ. ಬಿಬಿಎಂಪಿಯ ಎಂಟು ವಲಯಗಳಲ್ಲಿ ಹೆಚ್ಚಿನ ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಯಾರಾದ್ರೂ ರೇಪ್ ಮಾಡಿ ಬಿಸಾಕಿದ್ರಾ: ರಜೆ ಹಾಕಿದ ಮಹಿಳಾ ಸಿಬ್ಬಂದಿಗೆ ಬಿಬಿಎಂಪಿ ಅಧಿಕಾರಿ ಲೈಂಗಿಕ ನಿಂದನೆ ಆರೋಪ
ಸ್ಥಿರಾಸ್ತಿಯ ಹರಾಜಿನ ಮೂಲಕ (ವಸತಿ ಮತ್ತು ವಸತಿಯೇತರ ಆಸ್ತಿಗಳು) ತೆರಿಗೆ ಬಾಕಿ ವಸೂಲಿಗೆ ಖಾಸಗಿ ಆಸ್ತಿ ಮಾಲೀಕರ ವಿರುದ್ಧ ಬಿಬಿಎಂಪಿ ಈಗಾಗಲೇ ಕ್ರಮಕ್ಕೆ ಮುಂದಾಗಿದೆ. ಆದರೆ, ಸರ್ಕಾರಿ ಕಚೇರಿಗಳ ವಿರುದ್ಧ ಇನ್ನೂ ಅಂತಹ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ, ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈವರೆಗೆ ಅಧಿಕೃತ ಹೇಳಿಕೆಯನ್ನಾಗಲೀ ಪ್ರತಿಕ್ರಿಯೆಯನ್ನಾಗಲೀ ನೀಡಿಲ್ಲ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:55 am, Mon, 3 March 25