ಎರಡನೇ ಹಂತದ ಪೆರಿಫೆರಲ್ ರಿಂಗ್ ರೋಡ್ಗಾಗಿ 1,427 ಎಕರೆ ಭೂಸ್ವಾಧೀನ: 1,126 ಭೂಮಾಲೀಕರಿಗೆ ಜಮೀನು ಕಳೆದುಕೊಳ್ಳುವ ಆತಂಕ
ಎರಡನೇ ಹಂತದ ಪೆರಿಫೆರಲ್ ರಿಂಗ್ ರೋಡ್ (PRR-2) ನಿರ್ಮಾಣಕ್ಕಾಗಿ ಬಿಡಿಎ 1,427 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಮಾರುಕಟ್ಟೆ ದರದ ಪರಿಹಾರಕ್ಕಾಗಿ 1,126 ಭೂಮಾಲೀಕರು ಪಟ್ಟು ಹಿಡಿಯುವ ಸಾಧ್ಯತೆಯಿದೆ. 52 ಕಿ.ಮೀ ಉದ್ದದ PRR ಪೈಕಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಸುಮಾರು 10 ಕಿ.ಮೀ ಉದ್ದದ 10 ಪಥಗಳ ರಸ್ತೆಯನ್ನು BDA ಈಗಾಗಲೇ ನಿರ್ಮಿಸಿದೆ. ಉಳಿದ ಸುಮಾರು 42 ಕಿ.ಮೀ ವ್ಯಾಪ್ತಿಗೆ ಇತ್ತೀಚಿನ ಅಂತಿಮ ಅಧಿಸೂಚನೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 09: ಎರಡನೇ ಹಂತದ ಪೆರಿಫೆರಲ್ ರಿಂಗ್ ರೋಡ್ (PRR-2) ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 1,427 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ಧತೆ ನಡೆಸಿದ್ದು, ಇದರಿಂದ ಸುಮಾರು 1,126 ಭೂಮಾಲೀಕರು ತಮ್ಮ ಆಸ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಹೊಸ PRR-2 ರಸ್ತೆಯು NICE ರಸ್ತೆಗೆ ಸಮಾನಾಂತರವಾಗಿ ಸಾಗಲಿದ್ದು, ಹೊಸೂರು, ಮೈಸೂರು ಹಾಗೂ ತುಮಕೂರು ರಸ್ತೆಗಳನ್ನು ಸಂಪರ್ಕಿಸಲಿದೆ. ಇದಲ್ಲದೆ, 52 ಕಿ.ಮೀ ಉದ್ದದ, 10 ಪಥಗಳ PRR-2 ಪ್ರಸ್ತಾವಿತ ಬಿಡದಿ ಟೌನ್‌ಶಿಪ್‌ಗೂ ಸಂಪರ್ಕ ಕಲ್ಪಿಸಲಿದೆ.
ಭೂಮಾಲೀಕರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆ
ಕಳೆದ ವಾರ ರಾಜ್ಯ ಸರ್ಕಾರವು PRR-2ಗಾಗಿ ಅತ್ತಿಬೆಲೆ, ಜಿಗಣಿ, ಬೇಗೂರು, ಉತ್ತರಹಳ್ಳಿ, ಕೆಂಗೇರಿ ಹಾಗೂ ದಾಸನಪುರ ಸೇರಿದಂತೆ 30 ಗ್ರಾಮಗಳ ವ್ಯಾಪ್ತಿಯಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. NICE ರಸ್ತೆಗೆ ಸಮಾನಾಂತರವಾಗಿ ಸಾಗುವ PRR ಯೋಜನೆಗೆ 2004ರಲ್ಲಿ ಅನುಮೋದನೆ ನೀಡಲಾಗಿತ್ತು. ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆಯನ್ನು 2005ರ ಡಿಸೆಂಬರ್‌ನಲ್ಲಿ ಹೊರಡಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ, ಸುಮಾರು ಎರಡು ದಶಕಗಳ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದರಿಂದ ಭೂಮಾಲೀಕರು ಭೂಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸುವ ಸಾಧ್ಯತೆಯಿದೆ. ಭೂಮಿಗೆ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ನೀಡದಿದ್ದರೆ ವಿರೋಧ ವ್ಯಕ್ತವಾಗುವುದು ಖಚಿತ. ಪರಿಹಾರದ ಮೊತ್ತದ ಬಗ್ಗೆ ಈವರೆಗೆ ಸ್ಪಷ್ಟತೆ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರಸ್ತೆ ಸ್ವಚ್ಛತೆಗೆ ಟೆಕ್ನಾಲಜಿ ಟಚ್ಗೆ ಪ್ಲಾನ್, ಟ್ರಯಲ್ ಮಾಡಿರೋ ಜಿಬಿಎ!
52 ಕಿ.ಮೀ ಉದ್ದದ PRR ಪೈಕಿ ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸುವ ಸುಮಾರು 10 ಕಿ.ಮೀ ಉದ್ದದ 10 ಪಥಗಳ ರಸ್ತೆಯನ್ನು BDA ಈಗಾಗಲೇ ನಿರ್ಮಿಸಿದೆ. ಉಳಿದ ಸುಮಾರು 42 ಕಿ.ಮೀ ವ್ಯಾಪ್ತಿಗೆ ಇತ್ತೀಚಿನ ಅಂತಿಮ ಅಧಿಸೂಚನೆ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯೋಜನೆಯ ಅಂದಾಜು ವೆಚ್ಚ 3,500 ಕೋಟಿ ರೂಪಾಯಿಗಳಾಗಿವೆ. ರಸ್ತೆಯ ಜೊತೆಗೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ ಹಾಗೂ ಹೊಸೂರು ರಸ್ತೆಗಳು ಪ್ರಸ್ತಾವಿತ PRR ಅನ್ನು ಸಂಪರ್ಕಿಸುವ ಸ್ಥಳಗಳಲ್ಲಿ ಕ್ಲೋವರ್‌ಲೀಫ್ ಜಂಕ್ಷನ್‌ಗಳನ್ನು ನಿರ್ಮಿಸಲು BDA ಪ್ರಸ್ತಾಪಿಸಿದೆ. ಈ ಜಂಕ್ಷನ್‌ಗಳಿಗೆ ಹೆಚ್ಚುವರಿ ಭೂಮಿ ಅಗತ್ಯವಾಗಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:07 pm, Wed, 9 September 26




