ಮೊದಲ ಕಾರ್ಯಚರಣೆಯಲ್ಲೇ ಬೆಂಗಳೂರು ರೌಡಿಗಳ ನಡುಗಿಸಿದ ಆ್ಯಂಟಿ ರೌಡಿ ಸ್ಕ್ವಾಡ್: 7 ಮಂದಿ ಬಂಧನ

ಬೆಂಗಳೂರಿನಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್ ಪೊಲೀಸರು ಬುಧವಾರ ರಾತ್ರಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಏಳು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 9, 11 ಮತ್ತು 28 ಪ್ರಕರಣಗಳಲ್ಲಿ ಶಾಮೀಲಾಗಿದ್ದ ಆರೋಪಿಗಳೂ ಇದ್ದಾರೆ. ಕಾರ್ಯಾಚರಣೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ.

ಮೊದಲ ಕಾರ್ಯಚರಣೆಯಲ್ಲೇ ಬೆಂಗಳೂರು ರೌಡಿಗಳ ನಡುಗಿಸಿದ ಆ್ಯಂಟಿ ರೌಡಿ ಸ್ಕ್ವಾಡ್: 7 ಮಂದಿ ಬಂಧನ
ಆ್ಯಂಟಿ ರೌಡಿ ಸ್ಕ್ವಾಡ್ ಬಂಧಿಸಿದ ರೌಡಿಗಳು
Edited By:

Updated on: Nov 26, 2026 | 3:24 PM

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದ ದಾಳಿ
  • ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಏಳು ಮಂದಿ ಬಂಧನ
  • 28 ಪ್ರಕರಣಗಳಲ್ಲಿ ಶಾಮೀಲಾಗಿದ್ದ ಕರಿಯ ರಾಜು ಬಂಧನ

ಬೆಂಗಳೂರು, ನವೆಂಬರ್ 26: ಬೆಂಗಳೂರು ನಗರದಲ್ಲಿ ರೌಡಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆ್ಯಂಟಿ ರೌಡಿ ಸ್ಕ್ವಾಡ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿದ್ದ ರೌಡಿಗಳನ್ನು ಮೊದಲ ಕಾರ್ಯಾಚರಣೆಯಲ್ಲೇ ಬಂಧಿಸಿದ್ದಾರೆ. ಬುಧವಾರ ರಾತ್ರಿ ನಗರದ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಪೊಲೀಸರು, ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಏಳು ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಜೆಜೆನಗರದ ಅವೆಜ್ ಅಲಿಯಾಸ್ ಮೊಹಮ್ಮದ್ ಅಲಿ ಇದ್ದಾನೆ. ಕೊಲೆಯತ್ನ, ದರೋಡೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳಲ್ಲಿ ಶಾಮೀಲಾಗಿದ್ದ ಈತನ ವಿರುದ್ಧ ಒಟ್ಟು ಒಂಬತ್ತು ಪ್ರಕರಣಗಳಿವೆ.

Loading...

ಮಣಿರಾಜ್ ಅಲಿಯಾಸ್ ಮಣಿ ಕೂಡ ಬಂಧಿತನಾಗಿದ್ದು, ಜೆಜೆನಗರ ಮತ್ತು ಮಾಗಡಿ ರಸ್ತೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.

ಪೀಣ್ಯ ಪೊಲೀಸ್ ಠಾಣೆಯ ರೌಡಿಶೀಟರ್ ಶಶಿಕುಮಾರ್ ಅಲಿಯಾಸ್ ಶಶಿ ಕೊಲೆಯತ್ನ ಪ್ರಕರಣದಲ್ಲಿ ಶಾಮೀಲಾಗಿದ್ದ ಆರೋಪಿಯಾಗಿದ್ದಾನೆ. ಇದೇ ಠಾಣೆಯ ರೌಡಿಶೀಟರ್ ಪ್ರಭು ಅಲಿಯಾಸ್ ತಮಿಳ್ ಪ್ರಭು ಎರಡು ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ. ಆ್ಯಂಟಿ ರೌಡಿ ಸ್ವಾಡ್ ಪೊಲೀಸರು ಈ ಇಬ್ಬರನ್ನೂ ಬಂಧಿಸಿದ್ದಾರೆ.

ರೌಡಿಶೀಟರ್ ಆಯುಬ್ ಖಾನ್ ಬಂಧನ

ರಾಜಗೋಪಾಲ್ ನಗರದ ರೌಡಿಶೀಟರ್ ಆಯುಬ್ ಖಾನ್ ಕೊಲೆಯತ್ನ, ದರೋಡೆ ಮತ್ತು ಡಕಾಯಿತಿ ಸೇರಿದಂತೆ ಒಟ್ಟು ಒಂಬತ್ತು ಪ್ರಕರಣಗಳಲ್ಲಿ ಬೇಕಾಗಿದ್ದ. ಆತನನ್ನು ರಾಜಗೋಪಾಲ್ ನಗರದಲ್ಲಿ ಪೊಲೀಸರು ವಶಕ್ಕೆ ಪಡೆದು ಬಂಧಿಸಿದ್ದಾರೆ. ಇದೇ ಪ್ರದೇಶದಲ್ಲಿ 28 ಪ್ರಕರಣಗಳಲ್ಲಿ ಶಾಮೀಲಾಗಿದ್ದ ರೌಡಿಶೀಟರ್ ರಾಜು ಅಲಿಯಾಸ್ ಕರಿಯ ರಾಜುನನ್ನೂ ಆ್ಯಂಟಿ ರೌಡಿ ಸ್ವಾಡ್ ಅಧಿಕಾರಿಗಳು ಬಂಧಿಸಿದ್ದಾರೆ.

11 ಕೇಸ್​​ನಲ್ಲಿ ಶಾಮೀಲಾಗಿದ್ದ ರೌಡಿಶೀಟರ್ ಸತೀಶ್ ಕುಮಾರ್ ಅರೆಸ್ಟ್

ಇನ್ನು ಕೋಣನಕುಂಟೆಯ ರೌಡಿಶೀಟರ್ ಸತೀಶ್ ಕುಮಾರ್ ವಿರುದ್ಧ ಒಟ್ಟು 11 ಪ್ರಕರಣಗಳಿವೆ. ಬೆಂಗಳೂರಿನ ಏಳು ಪೊಲೀಸ್ ಠಾಣೆಗಳು ಹಾಗೂ ಹಾಸನ ಜಿಲ್ಲೆಯ ಹಿರಿಸೇವೆ ಸೇರಿದಂತೆ ಒಟ್ಟು ಒಂಬತ್ತು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಹಲ್ಲೆ, ಲೈಂಗಿಕ ದೌರ್ಜನ್ಯ ಮತ್ತು ವಂಚನೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸತೀಶ್ ಕುಮಾರ್‌ನನ್ನೂ ಬಂಧಿಸಲಾಗಿದೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಂದು ತುಂಡು ತುಂಡಾಗಿ ಮೃತದೇಹ ಕತ್ತರಿಸಿ ಎಸೆದ ದುರುಳರು!

ನಗರದ ಹಲವು ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳಲ್ಲಿ ಶಾಮೀಲಾಗಿ ತಲೆಮರೆಸಿಕೊಂಡಿದ್ದ ಆರೋಪಿಗಳ ವಿರುದ್ಧ ಆ್ಯಂಟಿ ರೌಡಿ ಸ್ಕ್ವಾಡ್ ನಡೆಸಿದ ಈ ಕಾರ್ಯಾಚರಣೆ ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us