ಜಪಾನ್, ಡಚ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ತಮಿಳುನಾಡು ಡಿಸಿಎಂ ಹೆಸರು ಉಲ್ಲೇಖ

ಬೆಂಗಳೂರಿನ ಜಪಾನ್ ಮತ್ತು ಡಚ್ ರಾಯಭಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಕಳೆದ 10 ದಿನಗಳಲ್ಲಿ ದೂತವಾಸ ಕಚೇರಿಗಳಿಗೆ ಇದು ಎರಡನೇ ಬೆದರಿಕೆಯಾಗಿದ್ದು, ಶ್ವಾನದಳ ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಹುಸಿ ಬಾಂಬ್​​ ಕರೆ ಎಂದು ಸ್ಪಷ್ಟಪಡಿಸಿವೆ. ಈ ಹಿಂದೆ ನೆದರ್‌ಲ್ಯಾಂಡ್ ಮತ್ತು ಇಟಾಲಿ ಕಾನ್ಸುಲೇಟ್‌ಗಳಿಗೂ ಇದೇ ರೀತಿಯ ಬೆದರಿಕೆ ಬಂದಿತ್ತು ಎಂಬುದಿಲ್ಲಿ ಗಮನಾರ್ಹ.

ಜಪಾನ್, ಡಚ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ: ತಮಿಳುನಾಡು ಡಿಸಿಎಂ ಹೆಸರು ಉಲ್ಲೇಖ
ಸಾಂದರ್ಭಿಕ ಚಿತ್ರ
Image Credit source: Google
Edited By:

Updated on: Feb 09, 2026 | 5:18 PM

ಬೆಂಗಳೂರು, ಫೆಬ್ರವರಿ 09: ನಗರದಲ್ಲಿರುವ ಜಪಾನ್, ಡಚ್ ರಾಯಭಾರಿ ಕಚೇರಿಗಳಿಗೆ ಇ-ಮೇಲ್ ಮೂಲಕ ಹುಸಿ ಬಾಂಬ್​​ ಬೆದರಿಕೆ ಹಾಕಲಾಗಿದ್ದು, ಕಳೆದ 10 ದಿನಗಳ ಅಂತರದಲ್ಲಿ ದೂತವಾಸ ಕಚೇರಿಗಳಿಗೆ 2ನೇ ಬಾರಿಗೆ ಹಾಕಿರುವ ಬೆದರಿಕೆ ಇದಾಗಿದೆ. ಬೆಳಗ್ಗೆ 8.40ಕ್ಕೆ ರಾಯಭಾರ ಕಚೇರಿ ಮೇಲ್ ಐಡಿಗೆ ಬೆದರಿಕೆ ಇ-ಮೇಲ್ ಬಂದ ಹಿನ್ನೆಲೆ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಈ ವೇಳೆ ಯಾವುದೇ ಸ್ಫೋಟಕ ಸಾಮಗ್ರಿ ಪತ್ತೆಯಾಗದ ಕಾರಣ ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಇ-ಮೇಲ್​ನಲ್ಲಿ ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ

ಇನ್ನು ಬಾಂಬ್ ಬೆದರಿಕೆ ಇ-ಮೇಲ್​ನಲ್ಲಿ ಅಪರಿಚಿತರು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೆಸರು ಉಲ್ಲೇಖ ಮಾಡಿದ್ದಾರೆ. ಕೋರಮಂಡಲ್ ಹೋಟೆಲ್​ನ ಕೊಠಡಿ ಸಂಖ್ಯೆ 536ರಲ್ಲಿ ಸ್ಟಾಲಿನ್ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ್ದಾರೆ. ವಿಐಪಿ ಪರಿಚಯ ಮಾಡಿಸುತ್ತೇನೆಂದು ಹೋಟೆಲ್​ಗೆ ಕರೆಸಿ ಕೃತ್ಯ ಎಸಗಲಾಗಿದ್ದು, ಅರ್ಜುನ್ ದೊರೆ ರಾಜಶೇಖರ್ ಎಂಬಾತ ಮಹಿಳೆಯನ್ನು ಕರೆದೊಯ್ದಿದ್ದ. ಹೋಟೆಲ್​​ಗೆ ಹೋದಾಗ ಸ್ಟಾಲಿನ್ ಅರೆಬೆತ್ತಲಾಗಿ ಕುಳಿತಿದ್ದರು. ಈ ಬಗ್ಗೆ ದೂರು ನೀಡಿದ್ದರೂ ತಮಿಳುನಾಡು ಪೊಲೀಸರು ಕೇಸ್ ಹಾಕಿಲ್ಲ. ಪ್ರಕರಣ ದಾಖಲಿಸದ ಹಿನ್ನೆಲೆಯಲ್ಲಿ ಜಪಾನ್ ದೂತಾವಾಸದ ಶೌಚಾಲಯದಲ್ಲಿ 4 RDX, IED ಬಾಂಬ್ ಇಟ್ಟಿದ್ದೇವೆ ಎಂದು ಉಲ್ಲೇಖಿಸಿರೋದು ಕಂಡುಬಂದಿದೆ.

ಇದನ್ನೂ ಓದಿ: ಇಟಲಿ, ಜಪಾನ್ ಬಳಿಕ ನೆದರ್​​ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್​ ಬೆದರಿಕೆ ಸಂದೇಶ

ಇತ್ತೀಚೆಗಷ್ಟೇ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಆರ್​​ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ ರಾಯಭಾರಿ ಕಚೇರಿಗೆ ಜನವರಿ 29ರಂದು ಕಿಡಿಗೇಡಿಗಳು ಇ-ಮೇಲ್ ಕಳುಹಿಸಿ 5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು. ಈ ಕುರಿತು ರಾಯಭಾರಿ ಕಚೇರಿ ಅಧಿಕಾರಿ ಭಾಸ್ಕರ್ ಸುಬ್ರಹ್ಮಣಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಹಲಸೂರಿನಲ್ಲಿರುವ ಇಟಾಲಿಯನ್ ಕಾನ್ಸುಲೇಟ್ ಕಚೇರಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಕಾರಣ ಇಟಾಲಿಯನ್ ಕಾನ್ಸುಲೇಟ್ ಭದ್ರತಾ ವ್ಯವಸ್ಥಾಪಕ ಜಿಯೋಡೊಮೆನಿಕ್ ಒ ಮಿಲಾನೋ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Rachappaji Naik S

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us