
ಬೆಂಗಳೂರು, ಆಗಸ್ಟ್ 04: ಬ್ಯಾಡರಹಳ್ಳಿಯಲ್ಲಿ ಒಂಟಿ ಚಿರತೆಯ ಕಣ್ಣಾಮುಚ್ಚಾಲೆ ಆಟ ಮುಂದುವರಿದಿದ್ದು, ಇಡೀ ಏರಿಯಾದ ಜನರು ಭಯದಿಂದ ದಿನ ದೂಡುವಂತಾಗಿದೆ. ಕಳೆದ ಹಲವು ದಿನಗಳಿಂದ ಸಾರ್ವಜನಿಕ ನಿದ್ರೆ ಗೆಡಿಸಿರುವ ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ. ಅಧಿಕಾರಿಗಳ ಈ ಉದಾಸೀನತೆ ಹಾಗೂ ನಿರ್ಲಕ್ಷ್ಯದಿಂದ ಎಚ್ಚೆತ್ತ ಬ್ಯಾಡರಹಳ್ಳಿಯ ಸ್ಥಳೀಯರೇ ಈಗ ಸ್ವತಃ ಅಖಾಡಕ್ಕಿಳಿದಿದ್ದು, ‘ಚಿರತೆ ಟಾಸ್ಕ್ ಫೋರ್ಸ್’ ರಚಿಸಿಕೊಂಡು ಕಾರ್ಯಾಚರಣೆಗೆ ಧುಮುಕಿದ್ದಾರೆ!
ಅರಣ್ಯ ಇಲಾಖೆಯನ್ನು ನಂಬಿ ಕೂತರೆ ಜೀವಕ್ಕೇ ಕಂಟಕ ಎಂಬ ತೀರ್ಮಾನಕ್ಕೆ ಬಂದಿರುವ ಸಾರ್ವಜನಿಕರು, ಚಿರತೆ ಸಂಚರಿಸುವ 6 ಪ್ರಮುಖ ಡೇಂಜರ್ ಜೋನ್‌ಗಳನ್ನು ಗುರುತಿಸಿದ್ದಾರೆ. ಪ್ರಿಯದರ್ಶಿನಿ ಲೇಔಟ್ ಹಿಂಭಾಗ, ಆಯುರ್ ಆಶ್ರಮ, ಪಾವನಿ ಚಾಟ್ಸ್ ಜಂಕ್ಷನ್, ಗೋಶಾಲೆ, ಬಾಲಾಜಿ ಲೇಔಟ್ ಹಾಗೂ ದ್ವಾರಕಾವಾಸ ರಸ್ತೆಗಳಲ್ಲಿ ಇಂಚಿಂಚೂ ಜಾಗವನ್ನು ತನಿಖೆ ಮಾಡಲು ಪ್ಲಾನ್ ರೂಪಿಸಲಾಗಿದೆ.
ರಾತ್ರಿ 11:00 ರಿಂದ ಬೆಳಗಿನ ಜಾವ 5:30 ರವರೆಗೆ ಮುಚ್ಚಿದ ವಾಹನಗಳಲ್ಲಿ ಕನಿಷ್ಠ ನಾಲ್ಕೈದು ಜನರ ತಂಡ ಸ್ಥಳೀಯವಾಗಿ ‘ನೈಟ್ ಬೀಟ್’ ನಡೆಸಲಿದ್ದು, ಪ್ರತಿ ಪಾಯಿಂಟ್‌ನಲ್ಲಿ 10-15 ನಿಮಿಷ ತಂಗಿ ಪರಿಶೀಲಿಸಲಿದೆ. ಚಿರತೆಯ ಚಲನವಲನ ಕಂಡುಬಂದ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ರವಾನಿಸಲು ಸ್ಥಳೀಯರು ಸಿದ್ಧರಾಗಿದ್ದಾರೆ.
“ನಾವು ದಿನವೂ ಭಯದಲ್ಲೇ ಬದುಕುತ್ತಿದ್ದೇವೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿಯೇ ನಾವೇ ಸ್ವತಃ ನೈಟ್ ಬೀಟ್ ಮಾಡಲು ನಿರ್ಧರಿಸಿದ್ದೇವೆ” ಎಂದು ಸ್ಥಳೀಯ ನಿವಾಸಿಗಳಾದ ಶಂಭು ಶೇಖರ್ ಹಾಗೂ ಸಿ.ಡಿ. ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಸರ್ಕಾರಿ ಯಂತ್ರದ ವೈಫಲ್ಯಕ್ಕೆ ಸೆಡ್ಡು ಹೊಡೆದು ಬ್ಯಾಡರಹಳ್ಳಿ ಜನರೇ ಅಖಾಡಕ್ಕಿಳಿದಿದ್ದು, ಸ್ಥಳೀಯರ ಈ ಬಿಗ್ ಆಪರೇಷನ್‌ಗೆ ಕಿಲಾಡಿ ಚಿರತೆ ಲಾಕ್ ಆಗುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ