ಬೆಂಗಳೂರು: ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ, 5 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ
ಡ್ರಗ್ಸ್ ಮಾಫಿಯಾ ವಿರುದ್ಧ ಸಿಸಿಬಿ ಪೊಲೀಸರ ಕಾರ್ಯಾಚರಣೆ ಮುಂದುವರಿದಿದೆ. ಬೆಂಗಳೂರು ನಗರದಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿರುವ ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ಬಂಧಿಸಿದ್ದು, ಒಟ್ಟಾರೆಯಾಗಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ನಗರದ ಹಲವು ಕಾಲೇಜುಗಳಿಗೆ ಪೂರೈಕೆ ಮಾಡಲು ಡ್ರಗ್ಸ್ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಬೆಂಗಳೂರು, ಏಪ್ರಿಲ್ 15: ಸಿಸಿಬಿ (CCB) ಮಾದಕವಸ್ತು ನಿಗ್ರಹದಳ ಬೆಂಗಳೂರಿನಲ್ಲಿ (Bengaluru) ನಡೆಸಿದ ಕಾರ್ಯಾಚರಣೆಯಲ್ಲಿ 5 ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಜಪ್ತಿ ಮಾಡಲಾಗಿದೆ. ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಒಂದು ಪ್ರಕರಣದಲ್ಲಿ 3.5 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದ್ದು, ಬಂಧಿತನ ಬಳಿಯಿದ್ದ 30 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಜತೆಗೆ, ಮತ್ತೊಂದು ಪ್ರಕರಣದಲ್ಲಿ 1.5 ಕೋಟಿ ರೂ. ಮೌಲ್ಯದ ಸುಮಾರು 1 ಕೆಜಿ ಎಂಡಿಎಂಎ ಡ್ರಗ್ ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆ ಈಗಲ್ ಟನ್ ರೆಸಾರ್ಟ್ನಲ್ಲಿ ಅರೆಸ್ಟ್ ಆಗಿದ್ದ ಪೆಡ್ಲರ್ನಿಂದಲೇ ಮತ್ತೆ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರು ನಗರದ ಹಲವು ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲು ಡ್ರಗ್ಸ್ ಸಾಗಾಟ ಮಾಡಲಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ವೀಸಾ ಅವಧಿ ಮುಗಿದಿದ್ದ ವಿದೇಶಿ ವ್ಯಕ್ತಿಯಿಂದ ಕೃತ್ಯ
ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ ಸಿಸಿಬಿ ಬಂಧಿಸಿರುವ ಇಬ್ಬರು ವ್ಯಕ್ತಿಗಳ ಪೈಕಿ ಒಬ್ಬಾತ ವಿದೇಶಿ ಪ್ರಜೆ ಎಂಬುದು ತಿಳಿದುಬಂದಿದೆ. ನಂಬಲರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸಿಸಿಬಿ ಅಧಿಕಾರಿಗಳು ಕ್ಷಿಪ್ರ ದಾಳಿ ನಡೆಸಿ ಶಂಕಿತನನ್ನು ಡ್ರಗ್ಸ್ ಸಹಿತ ಬಂಧಿಸಿದ್ದಾರೆ. ಆತನಿಂದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ‘ಬುರ್ಖಾ ತೆಗೆ, ನಿನ್ನ ಹೆಸರೇನು ಹೇಳು’: ಬೆಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ಕೃತ್ಯ
ಮಾದಕ ವಸ್ತುಗಳ ಜೊತೆಗೆ, ಎಲೆಕ್ಟ್ರಾನಿಕ್ ತೂಕದ ಮಾಪಕ, ಮೊಬೈಲ್ ಫೋನ್, ಮಾದಕ ವಸ್ತುಗಳ ವಿತರಣೆಯಲ್ಲಿ ಬಳಸಲಾದ ದ್ವಿಚಕ್ರ ವಾಹನ ಮತ್ತು ಇತರ ವಸ್ತುಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. 2012 ರಲ್ಲಿ ಉದ್ಯಮ ವೀಸಾದ ಮೇಲೆ ಭಾರತಕ್ಕೆ ಪ್ರವೇಶಿಸಿದ ಆರೋಪಿಯು ಬೆಂಗಳೂರಿನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯಿಂದ ಕಡಿಮೆ ಬೆಲೆಗೆ ಎಂಡಿಎಂಎ ಹರಳುಗಳನ್ನು ಪಡೆಯುತ್ತಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನಂತರ ನಗರದ ಐಟಿ ಮತ್ತು ಬಿಟಿ ವಲಯದ ಕಾಲೇಜು ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ಗುರಿಯಾಗಿಸಿಕೊಂಡು ಪ್ರತಿ ಗ್ರಾಂಗೆ 20,000 ರೂ. ವರೆಗಿನ ಬೆಲೆಯಲ್ಲಿ ಮಾದಕ ದ್ರವ್ಯವನ್ನು ಮಾರಾಟ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:04 am, Tue, 15 April 25