ಪೊಲೀಸ್ ಜೀಪ್‌ನಲ್ಲೇ ಬಂದು ದರೋಡೆ! ಕೇರಳ ಉದ್ಯಮಿಗಳಿಗೆ 20 ಲಕ್ಷ ರೂ. ಪಂಗನಾಮ ಹಾಕಿದ ಸಿಐಡಿ ಇನ್ಸ್‌ಪೆಕ್ಟರ್

ಬೆಂಗಳೂರಿನ ಮಡಿವಾಳದಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲೇ ಐವರು ದರೋಡೆಕೋರರ ಗ್ಯಾಂಗ್, ಕೇರಳ ಮೂಲದ ಉದ್ಯಮಿಗಳಿಗೆ ಬೆದರಿಸಿ 20 ಲಕ್ಷ ರೂಪಾಯಿ ದರೋಡೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿವಾಳ ಪೊಲೀಸರು ಇಲಾಖೆಯ ಜೀಪ್ ಹಾಗೂ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ನಾಲ್ವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.

ಪೊಲೀಸ್ ಜೀಪ್‌ನಲ್ಲೇ ಬಂದು ದರೋಡೆ! ಕೇರಳ ಉದ್ಯಮಿಗಳಿಗೆ 20 ಲಕ್ಷ ರೂ. ಪಂಗನಾಮ ಹಾಕಿದ ಸಿಐಡಿ ಇನ್ಸ್‌ಪೆಕ್ಟರ್
ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಪೊಲೀಸ್ ಜೀಪ್
Image Credit source: tv9
Edited By:

Updated on: Jun 19, 2026 | 3:14 PM

ಬೆಂಗಳೂರು, ಜೂನ್ 19: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ರಕ್ಷಕರೇ ಭಕ್ಷಕರಾದ ಆಘಾತಕಾರಿ ಘಟನೆಯೊಂದು ನಡೆದಿದೆ. ಸಿಐಡಿ (CID) ವಿಭಾಗದ ಇನ್ಸ್‌ಪೆಕ್ಟರ್ ಒಬ್ಬರು ಸ್ವತಃ ತಾವೇ ಗ್ಯಾಂಗ್ ಕಟ್ಟಿಕೊಂಡು, ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಕೇರಳ ಮೂಲದ ವ್ಯಕ್ತಿಗಳನ್ನು ಬೆದರಿಸಿ ಬರೋಬ್ಬರಿ 20 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ. ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಈ ಇಡೀ ದರೋಡೆಯ ಮಾಸ್ಟರ್ ಮೈಂಡ್ ಆಗಿದ್ದು, ಸದ್ಯ ಪೊಲೀಸರ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆಯೇ ಎಸ್ಕೇಪ್ ಆಗಿದ್ದಾರೆ.

ಮುಖ್ಯಾಂಶಗಳು

  • ಖಾಕಿ ಜೀಪ್‌ನಲ್ಲೇ ಬಂದು ಭರ್ಜರಿ ದರೋಡೆ.
  • ಸಿಐಡಿ ಇನ್ಸ್‌ಪೆಕ್ಟರ್‌ನಿಂದಲೇ ಕ್ರಿಮಿನಲ್ ಸ್ಕೆಚ್.
  • ಗ್ಯಾಂಗ್‌ನ ಓರ್ವ ಆರೋಪಿ ಸದ್ಯ ಸೆರೆ.

ಪೊಲೀಸ್ ಐಡಿ ಕಾರ್ಡ್ ತೋರಿಸಿ ಬೆದರಿಕೆ

ಟ್ರೇಡಿಂಗ್ (ವ್ಯಾಪಾರ) ಉದ್ದೇಶಗಳಿಗಾಗಿ ಹಣ ಹಿಡಿದುಕೊಂಡು ಕೇರಳದ ಉದ್ಯಮಿಗಳು ಮಡಿವಾಳದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ನಿಖರ ಮಾಹಿತಿ ಪಡೆದಿದ್ದ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ, ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಪ್ಲಾನ್ ಮಾಡಿದ್ದರು. ಯೋಜನೆಯಂತೆ ಹೋಟೆಲ್ ಮುಂಭಾಗ ಅಧಿಕೃತ ಸಿಐಡಿ ಪೊಲೀಸ್ ಜೀಪ್ ನಿಲ್ಲಿಸಿ ಇನ್ಸ್‌ಪೆಕ್ಟರ್ ಒಳಗೇ ಕುಳಿತಿದ್ದರು. ಅವರ ಗ್ಯಾಂಗ್‌ನ ಇಬ್ಬರು ಹೋಟೆಲ್ ಕೋಣೆಗೆ ನುಗ್ಗಿ, ತಾವು ಪೊಲೀಸರೆಂದು ಇನ್ಸ್‌ಪೆಕ್ಟರ್ ಅವರ ಅಧಿಕೃತ ಗುರುತಿನ ಚೀಟಿ (ID Card) ತೋರಿಸಿ, ‘ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ’ ಎಂದು ಉದ್ಯಮಿಗಳನ್ನು ತೀವ್ರವಾಗಿ ಬೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂಪಾಯಿ ನಗದನ್ನು ಕಸಿದುಕೊಂಡು, ಹೊರಗೆ ನಿಂತಿದ್ದ ಪೊಲೀಸ್ ಜೀಪ್‌ನಲ್ಲೇ ಇಡೀ ಗ್ಯಾಂಗ್ ಪರಾರಿಯಾಗಿದೆ.

ಠಾಣೆಗೆ ದೂರು ನೀಡುತ್ತಿದ್ದಂತೆ ಇನ್ಸ್‌ಪೆಕ್ಟರ್ ಎಸ್ಕೇಪ್

ಆರಂಭದಲ್ಲಿ ಹೆದರಿದ್ದ ಕೇರಳದ ವ್ಯಕ್ತಿಗಳಿಗೆ ನಂತರದ ಬೆಳವಣಿಗೆಗಳಿಂದ ದರೋಡೆಯ ಬಗ್ಗೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಅವರು ಮಡಿವಾಳ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಾಂಭೀರ್ಯತೆ ಅರಿತು ತಕ್ಷಣವೇ ತನಿಖೆಗೆ ಇಳಿದ ಮಡಿವಾಳ ಪೊಲೀಸರು, ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ದರೋಡೆ ಗ್ಯಾಂಗ್‌ನಲ್ಲಿದ್ದ ಕುಪೇಂದ್ರ ಎಂಬಾತನನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಯ ವಿಚಾರಣೆ ನಡೆಸಿದಾಗ ಇಡೀ ದರೋಡೆ ಪ್ರಕರಣದ ಅಸಲಿ ಕಿಂಗ್‌ಪಿನ್ ಸಿಐಡಿ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಆಘಾತಕಾರಿ ಸತ್ಯ ಬಾಯ್ಬಿಟ್ಟಿದ್ದಾನೆ.

ಕುಪೇಂದ್ರ ಅರೆಸ್ಟ್ ಆಗುತ್ತಿದ್ದಂತೆಯೇ ಇನ್ಸ್‌ಪೆಕ್ಟರ್ ಮಹೇಶ್ ಕನಕಗಿರಿ ಹಾಗೂ ಉಳಿದ ಮೂವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಸದ್ಯ ಪೊಲೀಸರು ಆರೋಪಿ ಕುಪೇಂದ್ರ ಮತ್ತು ದರೋಡೆಗೆ ಬಳಸಲಾಗಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಖಾಕಿ ಅಧಿಕಾರಿ ಸೇರಿದಂತೆ ನಾಲ್ವರಿಗಾಗಿ ಬಲೆ ಬೀಸಿದ್ದಾರೆ. ಮಹೇಶ್​​ ಕನಕಗಿರಿ ಸಿವಿಲ್​​ ಇನ್ಸ್​​ಪೆಕ್ಟರ್​​ ಆಗಿದ್ದು,  ಡೆಪ್ಯೂಟೇಶನ್​ ಮೇಲೆ ಸಿಐಡಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

 

ವರದಿ: ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:33 pm, Fri, 19 June 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us