ಬೈಕ್ ಟ್ಯಾಕ್ಸಿ ಕಂಪನಿ ವಿರುದ್ಧ ದೂರು: ಒಂದು ವಾರ ಗಡುವು ನೀಡಿದ ಖಾಸಗಿ ಸಾರಿಗೆ ಸಂಘಟನೆಗಳು
ಹೈಕೋರ್ಟ್‌ನಿಂದ ಬೈಕ್ ಟ್ಯಾಕ್ಸಿಗಳ ಮೇಲೆ ನಿಷೇಧ ಹೇರಲ್ಪಟ್ಟಿದ್ದರೂ, ಉಬರ್ ಮತ್ತು ರ‍್ಯಾಪಿಡೋ ಕಂಪನಿಗಳು ತಮ್ಮ ಸೇವೆಯನ್ನು ಮುಂದುವರೆಸಿರುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳು ಆರೋಪಿಸಿವೆ. ಸದ್ಯ ಈ ವಿಚಾರವಾಗಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ದೂರು ನೀಡಲಾಗಿದ್ದು, ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಲು ಏಳು ದಿನ ಗಡುವು ನೀಡಲಾಗಿದೆ.

ಬೆಂಗಳೂರು, ಆಗಸ್ಟ್ 30: ರಾಜ್ಯದಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿ ಸಂಚಾರಕ್ಕೆ (Bike taxi services) ಹೈಕೋರ್ಟ್ ನಿಷೇಧ ಹೇರಿದೆ. ಹೀಗಿದ್ದರೂ ರ‍್ಯಾಪಿಡೋ, ಉಬರ್ ಬೈಕ್ ಟ್ಯಾಕ್ಸಿ ಕಂಪನಿಗಳು ಮಾತ್ರ ಇಂದಿಗೂ ತಮ್ಮ ಸೇವೆಯನ್ನು ಮುಂದುವರೆಸಿರುವ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ ಖಾಸಗಿ ಸಾರಿಗೆ ಸಂಘಟನೆಗಳು ದೂರು (complaint) ನೀಡಿದ್ದು, ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಲು ಒಂದು ವಾರ ಗಡುವು ನೀಡಿದೆ.
ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿಲ್ಲ ಎಂದು ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ನಿಷೇಧ ವಿಚಾರವಾಗಿ ಉಂಟಾಗಿದ್ದ ಕೆಲ ಗೊಂದಲಗಳಿಗೆ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ತೆರೆ ಎಳೆದಿತ್ತು. ಇದರ ಬೆನ್ನಲ್ಲೇ ಬೈಕ್ ಟ್ಯಾಕ್ಸಿ ಮಾತ್ರ ನಿರಂತರವಾಗಿ ತಮ್ಮ ಸೇವೆಯನ್ನು ಮುಂದುವರೆಸಿರುವುದಾಗಿ ಖಾಸಗಿ ಸಾರಿಗೆ ಸಂಘಟನೆಗಳು ಆರೋಪಿಸಿವೆ.
ಟ್ಯಾಕ್ಸ್ ಕಟ್ಟಲ್ಲ ಎಂದ ಆಟೋ ಚಾಲಕರು
ಬೈಕ್ ಟ್ಯಾಕ್ಸಿ ಸೇವೆ ನಿಲ್ಲಿಸಲು ಖಾಸಗಿ ಸಾರಿಗೆ ಸಂಘಟನೆಗಳು ಸಾರಿಗೆ ಇಲಾಖೆಗೆ ಏಳು ದಿನಗಳ ಕಾಲ ಗಡುವು ನೀಡಿದೆ. ಸಾರಿಗೆ ಇಲಾಖೆ ಬೈಕ್ ಟ್ಯಾಕ್ಸಿ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳದಿದ್ದರೆ, ಎಲ್ಲಾ ಆಟೋ, ಬಸ್, ಟ್ಯಾಕ್ಸಿಗಳನ್ನು ವೈಟ್ ಬೋರ್ಡ್ ಮಾಡಿ ಓಡಿಸುತ್ತೇವೆ. ಯಾವುದೇ ಟ್ಯಾಕ್ಸ್ ಕಟ್ಟಲ್ಲ ಎಂದು ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ಇದೆಯಾ? ಗೊಂದಲಗಳಿಗೆ ತೆರೆ ಎಳೆದ ಕರ್ನಾಟಕ ಹೈಕೋರ್ಟ್
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ನಿಷೇಧವಿದ್ದರೂ ಬೈಕ್ ಟ್ಯಾಕ್ಸಿ ಆಪರೇಟರ್ಗಳ ಕಾರ್ಯಾಚರಣೆ ಆಗ್ತಿದ್ದು ಈ ಬಗ್ಗೆ ಹೈಕೋರ್ಟ್ಗೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಮಾಹಿತಿ ನೀಡಿದ್ದರು. ಈ ವೇಳೆ ಸಿಜೆ ವಿಭು ಬಕ್ರು, ನ್ಯಾ. ಸಿ.ಎಂ. ಜೋಶಿ ಅವರಿದ್ದ ಪೀಠ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿ ಹೈಕೋರ್ಟ್ ಆದೇಶಿಸಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದಲ್ಲಿ ಇಂದಿನಿಂದ ಬೈಕ್ ಟ್ಯಾಕ್ಸಿ ಸೇವೆ ಪುನಾರಂಭ
ಬೈಕ್ ಟ್ಯಾಕ್ಸಿ ಪ್ರಸ್ತಾವನೆ ಬಗ್ಗೆ ಸರ್ಕಾರ ಪರಿಶೀಲಿಸುತ್ತಿರುವ ಹಿನ್ನೆಲೆ ಬೈಕ್ ಟ್ಯಾಕ್ಸಿ ಮಾಲೀಕರು, ಚಾಲಕರ ಮೇಲೆ ಕ್ರಮ ಬೇಡವೆಂದು ಹೇಳಿದ್ದೆವು. ಬೈಕ್ ಟ್ಯಾಕ್ಸಿ ಅಗ್ರಿಗೇಟರ್ ಕಂಪನಿಗಳ ಬಗ್ಗೆ ನಾವು ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಬಳಿಕ ಬೈಕ್ ಟ್ಯಾಕ್ಸಿ ಬಗ್ಗೆ ನಿಲುವು ತಿಳಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದ್ದು, 4 ವಾರಗಳ ಕಾಲಾವಕಾಶ ನೀಡಿ ಸೆ.22ಕ್ಕೆ ವಿಚಾರಣೆ ನಿಗದಿಪಡಿಸಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



