ಬೆಂಗಳೂರು ಸ್ಟಾರ್ ಹೋಟೆಲ್‌ಗಳ ಬಂಡವಾಳ ಬಯಲು: 26 ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ

ಬೆಂಗಳೂರಿನ 26 ಪ್ರಮುಖ ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಯಾಗಿರುವುದು ಇಂದಿನ ದಾಳಿಯಲ್ಲೂ ಪತ್ತೆಯಾಗಿದೆ. ಅವಧಿ ಮೀರಿದ ಆಹಾರ, ಕಳಪೆ ಮಾಂಸ, ಮೀನು, ತರಕಾರಿ, ಅಶುಚಿ ಹಾಗೂ FSSAI ನಿಯಮಬಾಹಿರ ಲೇಬಲಿಂಗ್ ಕಂಡುಬಂದಿದೆ. ಅಧಿಕಾರಿಗಳು ಆಹಾರ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಿ, ತಪ್ಪಿತಸ್ಥ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ.

ಬೆಂಗಳೂರು ಸ್ಟಾರ್ ಹೋಟೆಲ್‌ಗಳ ಬಂಡವಾಳ ಬಯಲು: 26 ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ
ಹೋಟೆಲ್​ಗಳ ಮೇಲೆ ದಾಳಿ ಸಂದರ್ಭದ ಚಿತ್ರ
Image Credit source: tv9
Edited By:

Updated on: Aug 08, 2026 | 12:13 PM

ಬೆಂಗಳೂರು, ಆಗಸ್ಟ್ 8: ಬೆಂಗಳೂರಿನ (Bengaluru) ಪಂಚತಾರಾ ಹಾಗೂ ಪ್ರಮುಖ ಸ್ಟಾರ್ ಹೋಟೆಲ್‌ಗಳ (Five Star Hotels) ಮೇಲೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ತಪಾಸಣೆಯ ಮುಂದುವರಿದ ಭಾಗವಾಗಿ, 26 ಪ್ರಮುಖ ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆ ಆಗಿರುವುದು ಪತ್ತೆಯಾಗಿದೆ. ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಮಾಂಸ, ತರಕಾರಿ, ಮೀನು ಹಾಗೂ ಅಸ್ವಚ್ಛ ಅಡುಗೆಮನೆಗಳು ತಪಾಸಣೆ ವೇಳೆ ಪತ್ತೆಯಾಗಿವೆ. ಹೋಟೆಲ್‌ಗಳ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳಿಗೆ ಅನುಗುಣವಾಗಿರದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಮಾಂಸಾಹಾರ ಪದಾರ್ಥಗಳನ್ನು ಸಮರ್ಪಕವಾಗಿ ಪ್ರತ್ಯೇಕವಾಗಿ ಸಂಗ್ರಹಿಸದಿರುವುದು, ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳು ಹಾಗೂ ಶಿಲೀಂಧ್ರ ಬಾಧಿತ ತರಕಾರಿ ಮತ್ತು ಇತರ ಆಹಾರ ಪದಾರ್ಥಗಳೂ ಪತ್ತೆಯಾಗಿವೆ.

ಲೇಬಲಿಂಗ್ ಇಲ್ಲದ ಆಹಾರೋತ್ಪನ್ನಗಳು ಪತ್ತೆ

ಇದರ ಜೊತೆಗೆ ಪ್ಯಾಕೇಜ್ಡ್ ಆಹಾರ ಉತ್ಪನ್ನಗಳಲ್ಲಿ FSSAI ನಿಯಮಾನುಸಾರ ಕಡ್ಡಾಯವಾಗಿರುವ ಲೇಬಲಿಂಗ್ ಇಲ್ಲದಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಪಾಸಣೆಯ ವೇಳೆ ವಶಪಡಿಸಿಕೊಂಡ ಆಹಾರ ಪದಾರ್ಥಗಳ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಯಾವ ಹೋಟೆಲ್‌ನಲ್ಲಿ ಏನೆಲ್ಲ ವಶ?

  • ದಿ ಲಲಿತ್ ಅಶೋಕ್: 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಹಾಗೂ 32 ಲೀಟರ್ ಅವಧಿ ಮೀರಿದ ಹಾಲು ವಶಪಡಿಸಿಕೊಳ್ಳಲಾಗಿದೆ.
  • ಶಾಂಗ್ರಿಲಾ: 15 ಕೆ.ಜಿ. ಮಾಂಸ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ.
  • ಫೋರ್ ಸೀಸನ್ಸ್ ಹೋಟೆಲ್: 19 ಕೆ.ಜಿ. ಮಾಂಸ ವಶಪಡಿಸಿಕೊಳ್ಳಲಾಗಿದೆ.
  • ತಾಜ್ ವಿವಂತಾ ಬೆಂಗಳೂರು ವೈಟ್​ಫೀಲ್ಡ್: 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನಗಳು ಪತ್ತೆಯಾಗಿವೆ.
  • ತಾಜ್ ಯಶವಂತಪುರ್: 72 ಕೆ.ಜಿ. ಮಾಂಸ ಹಾಗೂ ಸಾಲ್ಮನ್ ಮೀನು ವಶಪಡಿಸಿಕೊಳ್ಳಲಾಗಿದೆ.
  • ಹೋಟೆಲ್ ಅತ್ರಿಯಾ: ಒಟ್ಟು 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಇದರಲ್ಲಿ 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ. ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿದೆ.

ಪತ್ತೆಯಾದ ಆಹಾರ ಪದಾರ್ಥಗಳ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ನಿಯಮ ಉಲ್ಲಂಘಿಸಿರುವ ಹೋಟೆಲ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಹಾರ ಸುರಕ್ಷತಾ ಇಲಾಖೆ ಮುಂದಾಗಿದೆ.

ಮುಂದುವರಿದ ತನಿಖೆ

ಬೆಂಗಳೂರಿನ ಸ್ಟಾರ್ ಹೋಟೆಲ್‌ಗಳಲ್ಲಿ ಆಹಾರದ ಗುಣಮಟ್ಟ, ಸಂಸ್ಕರಣೆ, ಸಂಗ್ರಹಣೆ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಲು ಆಹಾರ ಸುರಕ್ಷತಾ ಅಧಿಕಾರಿಗಳು ಶುಕ್ರವಾರ ವ್ಯಾಪಕ ತಪಾಸಣೆ ನಡೆಸಿದ್ದರು. ಈ ವೇಳೆ ಕೆಲವು ಹೋಟೆಲ್‌ಗಳಲ್ಲಿ ಕೊಳೆತ ಈರುಳ್ಳಿ, ಆಲೂಗಡ್ಡೆ ಸೇರಿದಂತೆ ಕಳಪೆ ಗುಣಮಟ್ಟದ ತರಕಾರಿಗಳು ಪತ್ತೆಯಾಗಿದ್ದವು. ಅವುಗಳ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್​ಗಳ ಮೇಲೆ ದಿಢೀರ್ ರೇಡ್: ಕಳಪೆ ಗುಣಮಟ್ಟದ ತರಕಾರಿ, ಕೊಳೆತ ಮಾಂಸ ಪತ್ತೆ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us