ಬೆಂಗಳೂರಿನಲ್ಲಿ ಲಕ್ಷಾಂತರ ರೂ. ಕೊಟ್ಟು ಮನೆ ಲೀಸ್‌ಗೆ ಪಡೆಯುವ ಮುನ್ನ ಎಚ್ಚರ: ಹೀಗೂ ವಂಚಿಸುತ್ತಾರೆ!
ಬೆಂಗಳೂರಿನಲ್ಲಿ ಮಧ್ಯವರ್ತಿಗಳ ಅಥವಾ ಯಾವುದಾದರೂ ಕಂಪನಿಗಳ ಮೂಲಕ ಮನೆ ಲೀಸ್‌ಗೆ ಪಡೆಯುವವರು ಬಹಳಷ್ಟು ಎಚ್ಚರಿಕೆ ವಹಿಸಲೇಬೇಕಿದೆ. ಮನೆ ಲೀಸ್‌ಗೆ ಕೊಡಿಸುವ ಹೆಸರಿನಲ್ಲಿ ನೂರಾರು ಮಂದಿಗೆ ಒಟ್ಟಾಗಿ ಕೋಟ್ಯಂತರ ರೂ. ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಪರಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಎಫ್ಐಆರ್ಗಳು ದಾಖಲಾಗಿವೆ. ಸುಮಾರು 60 ಕೋಟಿ ರೂ. ವಂಚನೆ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಸಂತ್ರಸ್ತರು ಬೀದಿಗೆ ಬೀಳುವಂತಾಗಿದೆ.

ಬೆಂಗಳೂರು, ಸೆಪ್ಟೆಂಬರ್ 16: ಬೆಂಗಳೂರು (Bengaluru) ನಗರದಲ್ಲಿ ಮನೆ ಲೀಸ್ ಹೆಸರಿನಲ್ಲಿ ಹತ್ತಾರು ಜನರಿಗೆ ಭಾರೀ ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಖಾಸಗಿ ಕಂಪನಿ ಹೆಸರಿನಲ್ಲಿ ವ್ಯಕ್ತಿಯೊಬ್ಬ ಅನೇಕ ಕುಟುಂಬಗಳಿಂದ ಲಕ್ಷಾಂತರ ರೂಪಾಯಿಗಳನ್ನು ಪಡೆದು ನಾಪತ್ತೆಯಾಗಿದ್ದಾನೆ. ಇದೀಗ ಆರೋಪಿ ವಿವೇಕ್ ಕೇಶವನ್ ಹಾಗೂ ಆತನ ಸಹಚರರ ವಿರುದ್ಧ ಪರಪ್ಪನ ಅಗ್ರಹಾರ, ಹೆಬ್ಬಗೋಡಿ ಮತ್ತು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಗಳಲ್ಲಿ ವಿವಿಧ ಎಫ್ಐಆರ್ಗಳು ದಾಖಲಾಗಿವೆ.
ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಾಲೀಕ ವಿವೇಕ್ ಕೇಶವನ್, ವೆಬ್‌ಸೈಟ್ ಮುಖಾಂತರ ಮನೆ ಬಾಡಿಗೆಗೆ ಪಡೆದು ನಂತರ ಅದೇ ಮನೆಗಳನ್ನು ಲೀಸ್‌ಗೆ ನೀಡುವ ಮೂಲಕ ಜನರಿಂದ ಭಾರೀ ಮೊತ್ತವನ್ನು ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಪ್ರಾರಂಭದಲ್ಲಿ ಮನೆಯ ಮಾಲೀಕರಿಗೆ ಒಂದೆರಡು ತಿಂಗಳು ಬಾಡಿಗೆ ಪಾವತಿಸಿದ್ದರೂ, ಕಳೆದ ಆರು ತಿಂಗಳಿಂದ ಯಾವುದೇ ಬಾಡಿಗೆ ಹಣ ಪಾವತಿಸಿರಲಿಲ್ಲ. ಅಲ್ಲದೆ, ಕಂಪನಿ ಕಚೇರಿಯನ್ನು ರಾತ್ರೋರಾತ್ರಿ ಖಾಲಿ ಮಾಡಿ ಪರಾರಿಯಾದಿದ್ದಾನೆ ಎಂದು ವಂಚನೆಗೆ ಒಳಗಾದವರು ಆರೋಪಿಸಿದ್ದಾರೆ.
ಬೀದಿಗೆ ಬಿದ್ದ ಕುಟುಂಬಗಳು
ಮನೆ ಲೀಸ್‌ಗೆ ಪಡೆದ ನೂರಾರು ಕುಟುಂಬಗಳು ಇದೀಗ ಸಂಕಷ್ಟಕ್ಕೆ ಸಿಲುಕಿವೆ. ಮಾಲೀಕರು ಮನೆ ಖಾಲಿ ಮಾಡಬೇಕೆಂದು ಒತ್ತಡ ಹೇರುತ್ತಿದ್ದಾರೆ. ವಂಚನೆಗೆ ಒಳಗಾದವರು ತಮ್ಮ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡು ಮನೆ ಇಲ್ಲದೆ ಬೀದಿಗೆ ಬೀಳುವ ಸ್ಥಿತಿಗೆ ತಲುಪಿದ್ದಾರೆ.
60 ಕೋಟಿ ರೂಪಾಯಿಗೂ ಹೆಚ್ಚು ವಂಚನೆ ಶಂಕೆ
ಸುಮಾರು 60 ಕೋಟಿ ರೂಪಾಯಿಗೂ ಅಧಿಕ ವಂಚನೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಾರತ್ತಹಳ್ಳಿ, ಬಾಣಸವಾಡಿ, ಅಮೃತಹಳ್ಳಿ ಸೇರಿದಂತೆ ಬೆಂಗಳೂರಿನ ಅನೇಕ ಪ್ರದೇಶಗಳಲ್ಲಿ ಆರೋಪಿ ವಂಚನೆ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡ್ರಗ್ ಮಾಫಿಯಾಗೆ ಖಾಕಿ ಲಿಂಕ್: ಪೆಡ್ಲರ್ಗಳೊಂದಿಗೆ ಕೈಜೋಡಿಸಿದ್ದ ಇನ್ಸ್‌ಪೆಕ್ಟರ್ ಸೇರಿ 11 ಸಿಬ್ಬಂದಿ ಸಸ್ಪೆಂಡ್!
ವಂಚಕನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಆರೋಪಿಯು ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆಗೂ ಫೋಟೊ ತೆಗೆಸಿಕೊಂಡಿದ್ದ. ಅದನ್ನೂ ವಂಚನೆಗೆ ಬಳಸಿಕೊಂಡಿರುವ ಸಾಧ್ಯತೆ ಇದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:55 am, Tue, 16 September 25



