ಆನೇಕಲ್‌ನಲ್ಲಿ ದೇಶದ 2ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ
ಬೆಂಗಳೂರಿನ ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ನಿರ್ಮಾಣವಾಗಲಿರುವ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಅಧಿಕೃತವಾಗಿ ಭೂಮಿಪೂಜೆ ನೆರವೇರಿಸುತ್ತಿದ್ದಾರೆ. ಬರೋಬ್ಬರಿ 80,000 ಆಸನ ಸಾಮರ್ಥ್ಯದ ಈ ಬೃಹತ್ ಕ್ರೀಡಾಂಗಣವು ಭಾರತದ ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ತಲೆಯೆತ್ತಲಿದೆ.

ಆನೆಕಲ್, ಮೇ 23: ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಇಂಡ್ಲವಾಡಿ ಗ್ರಾಮದಲ್ಲಿ ನಿರ್ಮಾಣವಾಗಲಿರುವ ದೇಶದ 2ನೇ ಅತಿ ದೊಡ್ಡ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ (International Stadium) ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಭವ್ಯ ಶಂಕುಸ್ಥಾಪನೆ ನೆರವೇರಿಸಿದರು. ಈ ಐತಿಹಾಸಿಕ ಯೋಜನೆಯ ಭೂಮಿ ಪೂಜೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಸ್ಥಳೀಯ ಶಾಸಕ ಆನೇಕಲ್ ಶಿವಣ್ಣ ಅವರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ‘ಬೆಳ್ಳಿ ಗದೆ’ಯನ್ನು ಉಡುಗೊರೆಯಾಗಿ ನೀಡಿ, ಅಭಿನಂದಿಸಿ ಗೌರವಿಸಿದರು.
ಮುಖ್ಯಾಂಶಗಳು
- ಆನೇಕಲ್‌ನ ಇಂಡ್ಲವಾಡಿಯಲ್ಲಿ 900 ಕೋಟಿ ವೆಚ್ಚದ ಕ್ರಿಕೆಟ್ ಕ್ರೀಡಾಂಗಣಕ್ಕೆ ಭೂಮಿಪೂಜೆ ನಡೆದಿದೆ.
- ಶಾಸಕ ಆನೇಕಲ್ ಶಿವಣ್ಣ ಸಿಎಂ, ಡಿಸಿಎಂ ಅವರಿಗೆ ಬೆಳ್ಳಿ ಗದೆ ನೀಡಿ ಅಭಿನಂದಿಸಿದರು.
- ಸೂರ್ಯನಗರದಲ್ಲಿ 80 ಸಾವಿರ ಆಸನ ಸಾಮರ್ಥ್ಯದ ದೇಶದ ಎರಡನೇ ದೊಡ್ಡ ಸ್ಟೇಡಿಯಂ ನಿರ್ಮಾಣವಾಗಲಿದೆ.
ಇನ್ನೆರಡು ವರ್ಷಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣ
ಕರ್ನಾಟಕ ಗೃಹ ಮಂಡಳಿ (KHB) ವತಿಯಿಂದ ಬರೋಬ್ಬರಿ 100 ಎಕರೆ ಜಾಗದಲ್ಲಿ, ಸುಮಾರು 900 ಕೋಟಿ ರೂಪಾಯಿ ಭಾರಿ ವೆಚ್ಚದಲ್ಲಿ ಈ ಅತ್ಯಾಧುನಿಕ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. 80,000 ಆಸನಗಳ ಬೃಹತ್ ಸಾಮರ್ಥ್ಯ ಹೊಂದಲಿರುವ ಈ ಕ್ರೀಡಾಂಗಣವು ಕೇವಲ 2 ರಿಂದ 3 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಬೃಹತ್ ಗಾತ್ರದ ಆಪಲ್ ಹಾರ ಹಾಗೂ ಮಹಿಳೆಯರ ಪೂರ್ಣಕುಂಭ ಕಲಶ ಮತ್ತು ಸಾಂಪ್ರದಾಯಿಕ ಕಲಾತಂಡಗಳ ವೈಭವದೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಈ ಐತಿಹಾಸಿಕ ಸಮಾರಂಭದಲ್ಲಿ ಗೃಹಸಚಿವ ಡಾ. ಜಿ. ಪರಮೇಶ್ವರ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಸಿಎಂ ಕಾನೂನು ಸಲಹೆಗಾರ ಪೊನಣ್ಣ ಹಾಗೂ ಶಾಸಕ ಕೃಷ್ಣಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಇದನ್ನೂ ಓದಿ ಆನೇಕಲ್ ಬಳಿ ಹೊಸ ಕ್ರಿಕೆಟ್ ಸ್ಟೇಡಿಯಂಗೆ ನಾಳೆ ಗುದ್ದಲಿ ಪೂಜೆ: ಕ್ರೀಡಾಂಗಣದ ವಿಶೇಷತೆಗಳೇನು?
ಏನೆಲ್ಲಾ ಸೌಲಭ್ಯಗಳಿವೆ ಕ್ರೀಡಾಂಗಣದಲ್ಲಿ?
1. ಒಳಾಂಗಣ ಕ್ರೀಡಾ ಸಂಕೀರ್ಣ (Indoor Sports Complex): ಈ ಹೈಟೆಕ್ ಒಳಾಂಗಣ ಕ್ರೀಡಾಂಗಣದಲ್ಲಿ ಒಟ್ಟು 11 ಪ್ರಮುಖ ಕ್ರೀಡೆಗಳಿಗೆ ಜಾಗತಿಕ ಮಟ್ಟದ ಅಖಾಡ ಸಿದ್ಧವಾಗಲಿದೆ. ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್, ಟೇಬಲ್ ಟೆನ್ನಿಸ್, ಸ್ಕ್ಯಾಷ್, ಕಬಡ್ಡಿ ಮತ್ತು ಖೋ-ಖೋ, ಜುಡೋ, ಟೈಕ್ವಾಂಡೋ, ಕುಸ್ತಿ, ಫೆನ್ಸಿಂಗ್ (ಕತ್ತಿವರಸೆ) ಮತ್ತು ವೇಟ್ ಲಿಫ್ಟಿಂಗ್ ಕ್ರೀಡೆಗಳಿಗೆ ಅವಕಾಶವಿದೆ.
2. ಹೊರಾಂಗಣ ಹಾಗೂ ಜಲಕ್ರೀಡಾ ಸೌಲಭ್ಯಗಳು (Outdoor & Aquatics): ಡಾಪಟುಗಳಿಗಾಗಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್, ಟೆನ್ನಿಸ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಹ್ಯಾಂಡ್‌ಬಾಲ್ ಕೋರ್ಟ್‌ಗಳು ಇವೆ. ಇದರೊಂದಿಗೆ ಇತ್ತೀಚಿನ ಟ್ರೆಂಡ್ ಆಗಿರುವ ಪಾಡೆಲ್ ಮತ್ತು ಪಿಕಲ್‌ಬಾಲ್ ಆಟಗಳಿಗೂ ಇಲ್ಲಿ ಅತ್ಯಾಧುನಿಕ ಅಂಕಣ ಇರಲಿದೆ. ಈಜುಪಟುಗಳಿಗಾಗಿ ಅಂತರಾಷ್ಟ್ರೀಯ ಗುಣಮಟ್ಟದ ಒಲಂಪಿಕ್ ಗಾತ್ರದ ಈಜುಕೊಳ, ಹೈ-ಡೈವಿಂಗ್ ಪೂಲ್ ಹಾಗೂ ಪ್ರತ್ಯೇಕ ಅಭ್ಯಾಸ ಕೊಳ ಇರಲಿದೆ.
ಅದಲ್ಲದೆ, ಏಕಕಾಲಕ್ಕೆ 500ಕ್ಕೂ ಹೆಚ್ಚು ವಾಹನಗಳನ್ನು ಪಾರ್ಕ್ ಮಾಡಬಹುದಾದ ಸುಸಜ್ಜಿತ ಬಹುಮಹಡಿ (Multilevel) ಪಾರ್ಕಿಂಗ್ ವ್ಯವಸ್ಥೆ ಇದೆ. ಕ್ರೀಡಾ ಪ್ರೇಮಿಗಳಿಗಾಗಿ ವಾಣಿಜ್ಯ ಮತ್ತು ಚಿಲ್ಲರೆ ವ್ಯಾಪಾರ ಮಳಿಗೆಗಳು, ಕ್ರೀಡಾ ಪರಿಕರಗಳ ಅಂಗಡಿ ಮತ್ತು ವಿಶಾಲವಾದ ಉಪಹಾರ ಗೃಹಗಳು ಇವೆ. ಆಟಗಾರರು, ಕೋಚ್‌ಗಳು ಹಾಗೂ ಕ್ರೀಡಾ ಸಿಬ್ಬಂದಿ ವಾಸ್ತವ್ಯ ಹೂಡಲು ಹೈಟೆಕ್ ವಸತಿ ಗೃಹಗಳು. ಗಣ್ಯರ ತುರ್ತು ಆಗಮನಕ್ಕಾಗಿ ಹೆಲಿಪ್ಯಾಡ್, ಸಾರ್ವಜನಿಕ ಪ್ಲಾಜಾ ಮತ್ತು ಸುತ್ತಲೂ ಆಕರ್ಷಕ ಹಸಿರು ವಲಯ (Green Zone) ಇರಲಿದೆ.
ಜಮೀರ್ ಅಹಮದ್ ಏನಂದ್ರು?
ಇದೇ ವೇಳೆ ಟಿವಿ9 ಗೆ ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ಸೂರ್ಯನಗರದಲ್ಲಿ ಕ್ರೀಡಾಂಗಣ ಮತ್ತು ಶಾಲೆ ನಿರ್ಮಿಸಬೇಕೆಂಬುದು ಜಾಗ ನೀಡಿದ ರೈತರ ಬಹಳ ದಿನಗಳ ಬೇಡಿಕೆಯಾಗಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಆರ್‌ಸಿಬಿ ಪಂದ್ಯದ ವೇಳೆ ಉಂಟಾದ ನೂಕುನುಗ್ಗಲು ಹಾಗೂ ದುರಂತದ ಪರಿಸ್ಥಿತಿಯ ಬಳಿಕ ಬೆಂಗಳೂರಿನ ಹೊರವಲಯದಲ್ಲಿ ಮತ್ತೊಂದು ಬೃಹತ್ ಕ್ರೀಡಾಂಗಣದ ಅವಶ್ಯಕತೆಯಿತ್ತು. ನಮ್ಮ ಸರ್ಕಾರದ ಅವಧಿಯಲ್ಲೇ ಈ ಯೋಜನೆ ಸಾಕಾರಗೊಳ್ಳುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Sat, 23 May 26




