
ಬೆಂಗಳೂರು, (ಸೆಪ್ಟೆಂಬರ್ 02): 14 ವರ್ಷಗಳ ವಾಹನ ಸವಾರರ ಕಾಯುವಿಕೆಗೆ ಶೀಘ್ರದಲ್ಲೇ ಮುಕ್ತಿ ಸಿಗುವ ಸಾಧ್ಯತೆ ಇದೆ. ಹೌದು.. ಬೆಂಗಳೂರಿನ ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉತ್ತರ ನಗರ ಪಾಲಿಕೆ ವತಿಯಿಂದ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿಯ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗುತ್ತಿವೆ. ರೈಲ್ವೆ ಇಲಾಖೆ ಅರ್ಧಕ್ಕೆ ಬಿಟ್ಟುಹೋಗಿದ್ದ ಈ ಯೋಜನೆ ಇದೀಗ ಮತ್ತೆ ಸಾಕಾರಗೊಳ್ಳುವ ಹಂತಕ್ಕೆ ತಲುಪಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ವಾಹನ ಸವಾರರ ಸುದೀರ್ಘ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಗಲಿದೆ.
ಮೇಲ್ಸೇತುವೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಲೋಡ್ ಪರೀಕ್ಷೆ ಹಾಗೂ ರಸ್ತೆ ಮಾರ್ಕಿಂಗ್ ಕೆಲಸಗಳು ಮಾತ್ರ ಬಾಕಿ ಉಳಿದಿವೆ. ಈ ಎರಡೂ ಪ್ರಮುಖ ಕಾರ್ಯಗಳು ಪೂರ್ಣಗೊಂಡ ಬಳಿಕ ಸೇತುವೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಹಲವು ವರ್ಷಗಳಿಂದ ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲುಗಳ ಸಂಚಾರಕ್ಕಾಗಿ ಕಾಯುತ್ತ ಸಮಯ ವ್ಯರ್ಥ ಮಾಡುತ್ತಿದ್ದ ವಾಹನ ಸವಾರರಿಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾದರೆ ದೊಡ್ಡ ಮಟ್ಟದ ರಿಲೀಫ್ ಸಿಗಲಿದೆ.
ಜಕ್ಕೂರು ಮಾರ್ಗವಾಗಿ ಪ್ರತಿನಿತ್ಯ ಓಡಾಟ ನಡೆಸುವ ವಾಹನ ಸವಾರರು ಕಾಮಗಾರಿ ಪೂರ್ಣಗೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮೇಲ್ಸೇತುವೆ ಬಳಕೆಗೆ ಬಂದ ಬಳಿಕ ಯಲಹಂಕ, ಹೆಬ್ಬಾಳ, ಹೆಗ್ಗಡೆ ನಗರ ಹಾಗೂ ಸಂಪಿಗೆಹಳ್ಳಿ ಭಾಗಗಳ ನಡುವಿನ ಸಂಚಾರ ಮತ್ತಷ್ಟು ಸುಗಮವಾಗುವ ನಿರೀಕ್ಷೆಯಿದೆ. 14 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆ ಕೊನೆಗೂ ಪೂರ್ಣಗೊಳ್ಳುತ್ತಿರುವುದು ಈ ಭಾಗದ ಜನರಿಗೆ ದೊಡ್ಡ ನಿರಾಳತೆಯನ್ನು ನೀಡಿದ್ದು, ಶೀಘ್ರದಲ್ಲೇ ಸೇತುವೆ ಉದ್ಘಾಟನೆಯಾಗಿ ವಾಹನ ಸಂಚಾರ ಆರಂಭವಾಗಲಿ ಎಂಬುದು ಸ್ಥಳೀಯರ ಆಶಯವಾಗಿದೆ.
2019ರ ಆಗಸ್ಟ್ 23ರಂದು ಜಕ್ಕೂರಿನ ಈ ಸೇತುವೆ ನಿರ್ಮಾಣವನ್ನು ಪೂರ್ಣಗೊಳಿಸಲು ಸ್ಥಳೀಯ ನಿವಾಸಿಗಳು ಸಹಿ ಅಭಿಯಾನವನ್ನು ಆರಂಭ ಮಾಡಿದ್ದರು. ಈ ವೇಳೆ ಸ್ಥಳೀಯರು ಕಳೆದ ಒಂದು ದಶಕದಿಂದ ಭೂಸ್ವಾಧಿನ ಸಮಸ್ಯೆಯಿಂದ ಕಾಮಗಾರಿ ಕುಂಟುತ್ತಾ ಸಾಗುತ್ತಿರುವ ಕಾರಣ ಸಮಸ್ಯೆಯಾಗಿತ್ತು ಎಂದು ಅಧಿಕಾರಿಗಳ ಗಮನ ಸೆಳೆದಿದ್ದರು. ಇದರ ನಡುವೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಂಜಿನಿಯರ್‌ಗಳು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಗಮನಿಸಬೇಕು ಎಂದು ಒತ್ತಾಯ ಮಾಡಿದ್ದರು.
ಈ ರೈಲ್ವೆ ಬ್ರಿಡ್ಜ್ ಪೂರ್ಣಗೊಂಡು ಸಾರ್ವಜನಿಕರ ಸೇವೆ ಲಭ್ಯವಾದರೆ, ಚಾಲಕರು ಯಾವುದೇ ಸಮಸ್ಯೆ ಇಲ್ಲದೆ ಯಲಹಂಕ ತಲುಪಲು ವರದಾನವಾಗಲಿದೆ. ಈಗ ಈ ಮಾರ್ಗದಲ್ಲಿ ಪ್ರಯಾಣಿಸಲು ವಾಹನ ಸವಾರರು ಐದು ಕಿಲೋ ಮೀಟರ್ ಸುತ್ತಿ ಬಳಸಿ ಪ್ರಯಾಣ ಮಾಡಬೇಕಿದೆ. ರೈಲ್ವೆ ಬ್ರಿಡ್ಜ್ ಪೂರ್ಣಗೊಂಡದರೆ, ಸವಾರರಿಗೆ ಮೂರು ಕಿಲೋ ಮೀಟರ್ ದೂರ ಉಳಿತಾಯವಾಗಲಿದೆ.
ಇನ್ನು ಈ ಬಗ್ಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಟ್ವೀಟ್ ಮಾಡಿದ್ದು, ಜಕ್ಕೂರು ಆರ್‌ಒಬಿ ಅಂತಿಮ ಹಂತದ ಕೆಲಸದಲ್ಲಿದೆ. ಈ ನಿರ್ಣಾಯಕ ಸಂಪರ್ಕಕ್ಕಾಗಿ ಸಾವಿರಾರು ಪ್ರಯಾಣಿಕರು ಕಾಯುತ್ತಿದ್ದಾರೆ. ಹೀಗಾಗಿ ನಾವು ಆದಷ್ಟು ಬೇಗ ಸಿದ್ಧಪಡಿಸಲು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.