ಕೆಆರ್ ಮಾರುಕಟ್ಟೆಯಿಂದ ಹೆಬ್ಬಾಳಕ್ಕೆ ಹೂವಿನ ಮಂಡಿ ಸ್ಥಳಾಂತರ? ಎಪಿಎಂಸಿ ನಡೆ ವಿರುದ್ಧ ವ್ಯಾಪಾರಸ್ಥರ ಕಿಡಿ
ಗ್ರಾಹಕರು, ವ್ಯಾಪಾರಿಗಳಿಂದ ನಿತ್ಯವೂ ಕೆಆರ್ ಮಾರುಕಟ್ಟೆ ಗಿಜುಗಿಡುತ್ತಿರುತ್ತದೆ. ಹೂವಿನ ಮಳಿಗೆಗಳ ಸುತ್ತ ಕಾಲಿಡುವುದಕ್ಕೂ ಜಾಗ ಇರುವುದಿಲ್ಲ. ಆ ಜನದಟ್ಟಣೆ ತಪ್ಪಿಸುವ ಮೂಲಕ ಸಮಸ್ಯೆ ಬಗೆಹರಿಸಲು ಎಪಿಎಂಸಿ ಒಂದು ಯೋಜನೆ ಹಾಕಿಕೊಂಡಿದೆ. ಅದುವೇ, ಹೂವಿನ ಮಂಡಿಯನ್ನು ಹೆಬ್ಬಾಳಕ್ಕೆ ಸ್ಥಳಾಂತರ ಮಾಡುವುದು. ಇದಕ್ಕೆ ಈಗ ವ್ಯಾಪಾರಸ್ಥರಿಂದ ವಿರೋಧ ವ್ಯಕ್ತವಾಗಿದೆ.

ಬೆಂಗಳೂರು, ಸೆಪ್ಟೆಂಬರ್ 3: ಹೂ ಕೊಳ್ಳುವವರು, ಹೂಗಳನ್ನು ಮಾರುವವರಿಂದ ಕೆಆರ್ ಮಾರುಕಟ್ಟೆ (KR Market) ಸದಾ ಲವಲವಿಕೆಯಿಂದಿರುತ್ತದೆ. ಬೆಳಗಿನ ಜಾವದಿಂದ ಸಂಜೆಯವರೆಗೂ ವ್ಯಾಪಾರ ಜೋರಾಗಿರುತ್ತದೆ. ಇಲ್ಲಿನ ದಟ್ಟಣೆ ಕಡಿಮೆ ಮಾಡಲು, ಹೂವಿನ ಮಂಡಿಯನ್ನೇ ಸ್ಥಳಾಂತರ ಮಾಡಲು ಈಗ ಎಪಿಎಂಸಿ (APMC) ತಯಾರಿ ನಡೆಸುತ್ತಿದೆ. ಹೆಬ್ಬಾಳದ (Hebbal) ಸಹಕಾರನಗರ ಬಳಿಯ ಜಿಕೆವಿಕೆಯಲ್ಲಿನ (GKVK) ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಆವರಣದ 5 ಎಕರೆ ಜಾಗದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಹರಾಜು ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ಮುಂದಾಗಿದೆ.
ಆದರೆ, ಎಪಿಎಂಸಿಯ ಈ ಯೋಜನೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. 130ಕ್ಕೂ ಹೆಚ್ಚು ವರ್ತಕರು ಹಲವು ದಶಕಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಮಾರ್ಕೆಟ್‌ನಲ್ಲಿ ಕುಡಿಯುವ ನೀರು, ಶೌಚಾಲಯದಂತಹ ಮೂಲಸೌಕರ್ಯಗಳಿಲ್ಲ. ಮಾರ್ಕೆಟ್‌ನ ಮೊದಲನೇ ಮಹಡಿಯಲ್ಲೇ ಸಾಕಷ್ಟು ಸ್ಥಳಾವಕಾಶವಿದೆ. ಅದನ್ನು ಸರಿಯಾಗಿ ಬಳಸಿದರೆ ಸಾಕು, ಸ್ಥಳಾಂತರ ಬೇಕಾಗಿಲ್ಲ. ಮಾರ್ಕೆಟ್‌ಗಿರುವ ಕನೆಕ್ಟಿವಿಟಿ ಜಿಕೆವಿಕೆಗೆ ಇಲ್ಲ ಎಂದು ಫ್ಲವರ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿಎಂ ದಿವಾಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: ಬಿಬಿಎಂಪಿ ಇನ್ನು ನೆನಪು ಮಾತ್ರ, ಕಚೇರಿಗೆ ಬಿತ್ತು ಗ್ರೇಟರ್ ಬೆಂಗಳೂರು ಬೋರ್ಡ್
ಜಿಕೆವಿಕೆ ಹೂವಿನ ಮಂಡಿ ಸ್ಥಳಾಂತರವಾಗಬೇಕಾದರೆ, 5 ಎಕರೆಯಲ್ಲಿರುವ 900ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಬೇಕಿದೆ. ಅಷ್ಟೊಂದು ಮರಗಳನ್ನು ಕಡಿಯುವುದಕ್ಕೆ ಪರಿಸರವಾದಿಗಳಿಂದಲೂ ವಿರೋಧ ವ್ಯಕ್ತವಾಗಿದೆ. ಹೀಗೆ ಹಲವು ವಿರೋಧಗಳ ನಡುವೆ ಹೂವಿನ ಮಂಡಿ ಸ್ಥಳಾಂತರ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿನರಸಿಂಹ, ಟಿವಿ9, ಬೆಂಗಳೂರು








