
ಬೆಂಗಳೂರು, ನವೆಂಬರ್ 08: ಒಂದೇ ಕುಟುಂಬದ 7 ಜನರ ಬರ್ಬರ ಹತ್ಯೆ ಕೇಸ್ ಸಂಬಂಧ ರಾಜಾಜಿನಗರ ಪೊಲೀಸರು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತ್ತೆರಡು ಮೃತದೇಹಗಳನ್ನು ಪತ್ತೆ ಹಚ್ಚಿದ್ದಾರೆ. ಪತ್ತೆಯಾಗಿರುವ ಮೃತದೇಹಗಳು ಶಿವಕುಮಾರ್ ಮತ್ತು ದಿವ್ಯಾ ದಂಪತಿಯದ್ದು ಎನ್ನಲಾಗಿದೆ. ಆರೋಪಿ ಇಂದುಶೇಖರ್ನನ್ನು ಕರೆದೊಯ್ದು ಶವ ಪತ್ತೆ ಮಾಡಲಾಗಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಮೃತದೇಹ ಹೊರತೆಗೆಯುವ ಕಾರ್ಯ ನಡೆದಿದೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಪೊಲೀಸರು ಮೃತದೇಹವನ್ನು ಹಸ್ತಾಂತರಿಸಲಿದ್ದಾರೆ.
ಪ್ರಕರಣ ಸಂಬಂಧ ಈವರೆಗೆ ಐವರ ಮೃತದೇಹಗಳು ಸಿಕ್ಕಂತಾಗಿದ್ದು, ಈ ಹಿಂದೆ 7 ವರ್ಷದ ಬಾಲಕ ಪುನೀತ್ ಮೃತದೇಹವು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದ ತಪ್ಪಲಿನಲ್ಲಿ ಪತ್ತೆಯಾಗಿತ್ತು. ನಂತರ ಪೊಲೀಸರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆ ಬೆನ್ನಲ್ಲೇ ಸೇಲಂನಲ್ಲಿ ಸುನೀತಾ ಹಾಗೂ ರೂಪವತಿ ಮೃತದೇಹ ಕೂಡ ಸಿಕ್ಕಿತ್ತು. ಈಗ ಮತ್ತಿಬ್ಬರ ಶವಗಳು ಸಿಕ್ಕಿರುವ ಹಿನ್ನೆಲೆ ನಾಲ್ಕು ಮೃತದೇಹಗಳನ್ನ ಒಂದೇ ಕಡೆ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದಾರೆ. ಸದ್ಯ ಸೇಲಂನಲ್ಲಿ ಇಬ್ಬರ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದರೆ, ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳ ಮರಣೋತ್ತರ ಪರೀಕ್ಷೆ ಮೈಸೂರಲ್ಲಿ ನಡೆಯಲಿದೆ .
ಇದನ್ನೂ ಓದಿ: 7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್ ಮರ್ಡರ್ ಮಾಡಿ ಸೃಷ್ಟಿಸಿದ್ದ ಸಂಚಲನ!
ಮೃತಪಟ್ಟಿದ್ದ 7 ಜನರ ಪೈಕಿ ಶಂಕರ್ ಮತ್ತು ನಳಿನಿ ಶವಗಳು ಸಿಗಬೇಕಿದ್ದು, ಅವುಗಳಿಗಾಗಿ ಶೋಧ ಮುಂದುವರಿದಿದೆ. ಆರೋಪಿ ನೀಡಿರುವ ಮಾಹಿತಿ ಪ್ರಕಾರ ಇವರಿಬ್ಬರ ಮೃತದೇಹಗಳನ್ನು ಶಿರಾಡಿ ಘಾಟ್‌ನಲ್ಲಿ ಬಿಸಾಡಲಾಗಿದೆ. ಹೀಗಾಗಿ ಇಂದುಶೇಖರ್ ನೀಡಿದ ಮಾಹಿತಿ ಆಧರಿಸಿ ಶವ ಬಿಸಾಡಿರುವ ಜಾಗದಲ್ಲಿ ಪೊಲೀಸರಿಂದ ಹುಡುಕಾಟ ನಡೆಸಲಾಗುತ್ತಿದೆ. ಮತ್ತೊಂದೆಡೆ ಆರೋಪಿಯ ವಿಚಾರಣೆಯೂ ತೀವ್ರಗೊಂಡಿದ್ದು, ಕೊಲೆ ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿಗಳು ಬಯಲಾಗಬೇಕಿವೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.