ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ದೋಖಾ: ಕೇರಳದಲ್ಲಿ ಸಿಕ್ಕಿಬಿದ್ರು ತಾಯಿ, ಮಗ!

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ತಾಯಿ-ಮಗನನ್ನು ಆಡುಗೋಡಿ ಪೊಲೀಸರು ಕೇರಳದ ವಯನಾಡಿನಲ್ಲಿ ಬಂಧಿಸಿದ್ದಾರೆ. ಶ್ರೀಮಂತನೆಂದು ಬಿಲ್ಡಪ್ ನೀಡಿ 10ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ ಆರೋಪಿ ಪ್ರದೀಪ್ ಜೋಸೆಫ್ ಮತ್ತು ಆತನ ತಾಯಿ ಕಲಾವತಿಯನ್ನು ಬೆಂಗಳೂರಿಗೆ ಕರೆತರಲಾಗಿದ್ದು, ತನಿಖೆ ಕಾಯ್ದುಕೊಳ್ಳಲಾಗಿದೆ.

ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ದೋಖಾ: ಕೇರಳದಲ್ಲಿ ಸಿಕ್ಕಿಬಿದ್ರು ತಾಯಿ, ಮಗ!
ಆರೋಪಿಗಳು
Edited By:

Updated on: Aug 26, 2026 | 9:22 AM

ಮುಖ್ಯಾಂಶಗಳು

  • ಮ್ಯಾಟ್ರಿಮೋನಿಯಲ್ ಮೂಲಕ ಮದುವೆಯಾಗುವುದಾಗಿ ನಂಬಿಸಿ ವಂಚಿಸುತ್ತಿದ್ದ ತಾಯಿ-ಮಗ ಆಡುಗೋಡಿ ಪೊಲೀಸರಿಗೆ ಲಾಕ್
  • ಬೆಂಗಳೂರು ಕುಟುಂಬಕ್ಕೆ 20 ಲಕ್ಷ ವಂಚಿಸಿದ್ದ ಆರೋಪಿಗಳು ಕೇರಳದ ವಯನಾಡಿನಲ್ಲಿ ಬಂಧನ.
  • ಪಿಎಚ್‌ಡಿ ಪದವೀಧರನೆಂದು ನಂಬಿಸಿ 10ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು, ಆಗಸ್ಟ್ 26: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ವರನ ಹುಡುಕಾಟದಲ್ಲಿದ್ದ ಕುಟುಂಬಗಳನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಖತರ್ನಾಕ್ ತಾಯಿ-ಮಗ ಕೊನೆಗೂ ಆಡುಗೋಡಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ತಮ್ಮನ್ನು ಡಾ. ಪ್ರದೀಪ್ ಜೋಸೆಫ್ ಮತ್ತು ಕಲಾವತಿ ಎಂದು ಪರಿಚಯಿಸಿಕೊಳ್ಳುತ್ತಿದ್ದ ಈ ಆಸಾಮಿಗಳನ್ನು ಕಳೆದ ಮೂರು ತಿಂಗಳಿನಿಂದ ತಲೆಮರೆಸಿಕೊಂಡಿದ್ದಾಗ ಕೇರಳದ ವಯನಾಡಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.

ಶ್ರೀಮಂತನ ಸೋಗಿನಲ್ಲಿ ಕೋಟ್ಯಂತರ ರೂಪಾಯಿ ವಂಚನೆ!

ಮೂಲತಃ ಮೈಸೂರಿನವರಾದ ಈ ತಾಯಿ-ಮಗ, ಶಾದಿ ಡಾಟ್ ಕಾಂನಂತಹ ವೆಬ್‌ಸೈಟ್‌ಗಳಲ್ಲಿ ಪ್ರೊಫೈಲ್ ಸೃಷ್ಟಿಸಿ ತಮ್ಮನ್ನು ಶ್ರೀಮಂತರೆಂದು ಬಿಂಬಿಸಿಕೊಳ್ಳುತ್ತಿದ್ದರು. ಪ್ರದೀಪ್ ಜೋಸೆಫ್ ತಾನು ಪಿಎಚ್‌ಡಿ ಮಾಡಿರುವ ಡಾಕ್ಟರೇಟ್ ಪದವೀಧರ ಎಂದು ನಂಬಿಸಿ, ಮೈಸೂರಿನ ಬಾಡಿಗೆ ಬಂಗಲೆಯನ್ನು ತನ್ನದೇ ಎಂದು ಬಿಲ್ಡಪ್ ನೀಡುತ್ತಿದ್ದ. ಮದುವೆ ಮಾತುಕತೆ ನಡೆದು ಸಂಬಂಧ ಕುದುರಿದ ನಂತರ, “ತುರ್ತಾಗಿ ಹಣದ ಅಗತ್ಯವಿದೆ” ಎಂದು ವಧುವಿನ ಕಡೆಯವರಿಂದ ಲಕ್ಷಾಂತರ ರೂಪಾಯಿ ಪಡೆದು ಪರಾರಿಯಾಗುವುದನ್ನೇ ಪ್ರೊಫೆಷನ್ ಮಾಡಿಕೊಂಡಿದ್ದರು.

ಬೆಂಗಳೂರಿನ ಕುಟುಂಬಕ್ಕೆ 20 ಲಕ್ಷ ರೂ. ಮೋಸ!

ಬೆಂಗಳೂರು ಮೂಲದ ಕುಟುಂಬವೊಂದು ತಮ್ಮ ಮಗಳ ಮದುವೆಗೆ ಇವನ ಬಣ್ಣದ ಮಾತುಗಳನ್ನು ನಂಬಿ ಮದುವೆಗೆ ಸಿದ್ಧತೆ ಮಾಡಿಕೊಂಡಿತ್ತು. ಅಷ್ಟೇ ಅಲ್ಲದೆ, ಬಂಧು-ಮಿತ್ರರಿಗೆ ಆಹ್ವಾನ ಪತ್ರಿಕೆಯನ್ನೂ ಹಂಚಿ ಮುಗಿಸಿತ್ತು. ಈ ಹಂತದಲ್ಲಿ ಮೈಸೂರು ಮೂಲದ ವ್ಯಕ್ತಿಯೊಬ್ಬರು ಸಾಕ್ಷಿ ಸಮೇತ ಈತನ ಅಸಲಿಯತ್ತನ್ನು ವಧುವಿನ ಕುಟುಂಬಕ್ಕೆ ತಿಳಿಸಿದಾಗ ಆಘಾತಕಾರಿ ಸತ್ಯ ಹೊರಬಿದ್ದಿದೆ. ಈ ಇಬ್ಬರೂ ಈಗಾಗಲೇ 10ಕ್ಕೂ ಹೆಚ್ಚು ಮಹಿಳೆಯರಿಗೆ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ವಧುವಿನ ಕುಟುಂಬ ನೀಡಿದ ದೂರಿನನ್ವಯ ಆಡುಗೋಡಿ ಪೊಲೀಸರು ಮೈಸೂರಿಗೆ ದಾಳಿ ನಡೆಸಿದಾಗ, ಆರೋಪಿಗಳು ಕಾರಿನಲ್ಲಿ ಎಸ್ಕೇಪ್ ಆಗಿದ್ದರು. ಕೊನೆಗೂ ತಾಂತ್ರಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ವಯನಾಡಿನಲ್ಲಿ ಇಬ್ಬರನ್ನೂ ಲಾಕ್ ಮಾಡಿದ್ದಾರೆ. ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿ ವಧು-ವರರ ಹುಡುಕಾಟ ನಡೆಸುವವರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಎಚ್ಚರಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us