AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ದಾಸ್ತಾನು ಕೊರತೆ ಮುಚ್ಚಿಹಾಕಲು ಕಲಬೆರಕೆ ಪುಡಿ ತಂದಿದ್ದ ಆರೋಪಿಗಳು!

ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ದಾಸ್ತಾನು ಕೊರತೆ ಸರಿದೂಗಿಸಲು ಕಲಬೆರಕೆ ಹಾಲಿನಪುಡಿ ತಂದಿದ್ದ ಆರೋಪ ಕೇಳಿಬಂದಿದ್ದು, ಮನ್‌ಮುಲ್‌ನ ಹಾಲಿನಪುಡಿ ಬ್ಯಾಗ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್: ದಾಸ್ತಾನು ಕೊರತೆ ಮುಚ್ಚಿಹಾಕಲು ಕಲಬೆರಕೆ ಪುಡಿ ತಂದಿದ್ದ ಆರೋಪಿಗಳು!
ಮನ್‌ಮುಲ್ ಹಾಗೂ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪImage Credit source: tv9
ದಿಲೀಪ್​, ಚೌಡಹಳ್ಳಿ
| Edited By: |

Updated on:Oct 06, 2026 | 9:16 AM

Share

ಮಂಡ್ಯ, ಅಕ್ಟೋಬರ್ 6: ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ಮನ್‌ಮುಲ್‌ನಲ್ಲಿ ಉಂಟಾಗಿದ್ದ ಹಾಲಿನಪುಡಿ ದಾಸ್ತಾನು ಕೊರತೆಯನ್ನು ಸರಿದೂಗಿಸಲು ಕಲಬೆರಕೆ ಹಾಲಿನಪುಡಿ ತಂದು ಇಟ್ಟಿದ್ದ ಆರೋಪಿಗಳು, ಸಂಸ್ಥೆಯ ಹಾಲಿನಪುಡಿ ಬ್ಯಾಗ್‌ಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಮನ್‌ಮುಲ್‌ನ ಹಾಲಿನಪುಡಿ ಸಾಗಣೆ ವಾಹನಗಳ ಮೂಲಕವೇ ಖಾಸಗಿ ವ್ಯಕ್ತಿಗಳಿಗೆ ಪುಡಿ ಮಾರಾಟ ಮಾಡಲಾಗುತ್ತಿತ್ತು. ಈ ಮಾರಾಟದಿಂದ ಬಂದ ಹಣವನ್ನು ಮನ್‌ಮುಲ್‌ನ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಪ್ರದೀಪ್ ಜಾಧವ್ ಹಾಗೂ ಇತರರು ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಆಡಿಟ್ ವೇಳೆ ಬಯಲಿಗೆ ಬಂದಿದ್ದ ದಾಸ್ತಾನು ಕೊರತೆ

ಮನ್‌ಮುಲ್ ಮೇಲಧಿಕಾರಿಗಳ ಪರಿಶೀಲನೆ ವೇಳೆ ಹಾಲಿನಪುಡಿ ದಾಸ್ತಾನಿನಲ್ಲಿ ಭಾರೀ ಕೊರತೆ ಪತ್ತೆಯಾಗಿತ್ತು. ಆಡಿಟ್ ವೇಳೆ ಒಟ್ಟು 110.4 ಟನ್ ಹಾಲಿನಪುಡಿ ಕೊರತೆ ಕಂಡುಬಂದಿತ್ತು. ಈ ಕೊರತೆಯನ್ನು ಸರಿದೂಗಿಸಲು 54.9 ಟನ್ ಕಲಬೆರಕೆ ಹಾಲಿನಪುಡಿಯನ್ನು ಖರೀದಿಸಿ ದಾಸ್ತಾನಿನಲ್ಲಿ ಇರಿಸಲಾಗಿತ್ತು ಎಂಬ ಆರೋಪವಿದೆ. ಆದರೂ 55.5 ಟನ್ ಹಾಲಿನಪುಡಿ ಕೊರತೆಯಾಗಿದ್ದು, ಇದರಿಂದ ಮಂಡ್ಯ ಹಾಲು ಒಕ್ಕೂಟಕ್ಕೆ ಸುಮಾರು ₹2.88 ಕೋಟಿ ನಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್‌ಮುಲ್‌ನ ಮಾಜಿ ಅಧಿಕಾರಿ ಪ್ರದೀಪ್ ಜಾಧವ್, ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ, ಸಿಸ್ಟಮ್ ಆಪರೇಟರ್ ಶ್ರುತಿ, ಗೋಡೌನ್ ಮ್ಯಾನೇಜರ್ ರವಿ, ಉಸ್ತುವಾರಿ ಶ್ರೀನಿವಾಸ್, ಹಾಲಿನಪುಡಿ ಘಟಕದ ಮುಖ್ಯಾಧಿಕಾರಿ ಶ್ರೀನಿವಾಸಮೂರ್ತಿ ಹಾಗೂ ಶಿವಪ್ಪ ಅವರ ಆಪ್ತ ಸುರೇಶ್ ಸೇರಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೋರ್ವ ಆರೋಪಿ ನಿದೀಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ತಲೆಮರೆಸಿಕೊಂಡಿರುವ ಉಪ ವ್ಯವಸ್ಥಾಪಕ ರಾಮಕೃಷ್ಣಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಸದ್ಯ ಉಮ್ಮಡಹಳ್ಳಿ ಶಿವಪ್ಪರನ್ನು ಮದ್ದೂರು ಪೊಲೀಸರು ಐದು ದಿನಗಳ ಕಸ್ಟಡಿಗೆ ಪಡೆದಿದ್ದಾರೆ. ದಾಸ್ತಾನು, ಹಾಲಿನಪುಡಿ ಸಾಗಣೆ ಹಾಗೂ ಅಕ್ರಮ ಮಾರಾಟದ ಕುರಿತು ತನಿಖೆ ಮುಂದುವರಿದಿದೆ.

ಏನಿದು ಮನ್‌ಮುಲ್ ಹಾಲಿನಪುಡಿ ಕಲಬೆರಕೆ ಪ್ರಕರಣ?

ಮನ್‌ಮುಲ್‌ನ ಕೆನೆರಹಿತ ಹಾಲಿನಪುಡಿ ದಾಸ್ತಾನಿನಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಮನ್‌ಮುಲ್‌ನಿಂದ ಹಾಲಿನಪುಡಿ ಚೀಲಗಳನ್ನು ಅಕ್ರಮವಾಗಿ ಸಾಗಿಸಿ ಖಾಸಗಿ ಗೋದಾಮಿಗೆ ತಲುಪಿಸಿ, ಬಳಿಕ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿತ್ತು. ದಾಸ್ತಾನಿನಲ್ಲಿ ಉಂಟಾದ ಕೊರತೆಯನ್ನು ಮುಚ್ಚಿಹಾಕಲು ಕಲಬೆರಕೆ ಹಾಲಿನಪುಡಿಯನ್ನು ತಂದು ದಾಸ್ತಾನಿನಲ್ಲಿ ಇರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮನ್‌ಮುಲ್‌ಗೆ ಸುಮಾರು ₹2.88 ಕೋಟಿ ನಷ್ಟವಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

LIVE TV

ಆಗಸ್ಟ್ 30ರಂದು ಮನ್‌ಮುಲ್ ಗುಣಮಟ್ಟ ನಿಯಂತ್ರಣ ವಿಭಾಗದ ಸಹಾಯಕ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:02 am, Tue, 6 October 26

Follow Us
ದಿಲೀಪ್​, ಚೌಡಹಳ್ಳಿ
ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More