ಬೆಂಗಳೂರಿನಲ್ಲಿನ ಫ್ಲೈಓವರ್, ಅಂಡರ್ ಪಾಸ್ಗಳಲ್ಲಿ ಉರಿಯುತ್ತಿಲ್ಲ ಬೀದಿ ದೀಪಗಳು
ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿರುವ ನಗರ. ಬೆಂಗಳೂರಿಗೆ ಪ್ರತಿದಿನ ಸಾವಿರಾರು ಜನರು ಬಂದು ಹೋಗುತ್ತಾರೆ. ದೇಶ-ವಿದೇಶ ಪ್ರಜೆಗಳು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದರೆ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳೆ ಕುಂಠಿತವಾಗುತ್ತಿವೆ. ರಸ್ತೆಯಲ್ಲಿ ಸಂಚರಿಸುವಾ ಬೀದಿ ದೀಪಗಳಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಬೆಂಗಳೂರು, ಮೇ 31: ಬೆಂಗಳೂರು (Bengaluru) ಸಾಕಷ್ಟು ಫ್ಲೈಓವರ್ ಮತ್ತು ಅಂಡರ್ ಪಾಸ್ನಲ್ಲಿ ಬೀದಿ ದೀಪಗಳೇ (Street Light) ಉರಿಯುತ್ತಿಲ್ಲ. ಕೆಲವೊಂದು ಕಡೆ ಬೀದಿ ದೀಪಗಳಿದ್ದರೂ ಅವು ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ರಾತ್ರಿ ವೇಳೆಯಲ್ಲಿ ಸಂಚಾರ ಮಾಡಲು ವಾಹನ ಸವಾರರು ಭಯ ಬೀಳುತ್ತಿದ್ದಾರೆ.
ಬೆಂಗಳೂರಿನ ಹೃದಯಭಾಗದ ಬಸವೇಶ್ವರನಗರ ಫ್ಲೈಓವರ್ ಮೇಲೆ ಕತ್ತಲಾಗುತ್ತಿದ್ದಂತೆ ಕಗ್ಗತ್ತಲೆ ಪರಿಸ್ಥಿತಿ ನಿರ್ಮಾಣವಾಗುತ್ತೆ. ವಾಹನ ಸವಾರರು ಈ ಕಗ್ಗತ್ತಲೆ ಫ್ಲೈಓವರ್ ಮೇಲೆ ಸಂಚಾರ ಮಾಡಲು ಪರದಾಡುತ್ತಿದ್ದಾರೆ. ಏನಾಗಿತ್ತೋ ಅನ್ನೋ ಆತಂಕದಲ್ಲಿ ಸಂಚಾರ ಮಾಡುತ್ತಾರೆ. ವಿಜಯನಗರ ಮತ್ತು ಮಹಾಲಕ್ಷ್ಮಿ ಲೇಔಟ್, ಇಸ್ಕಾನ್ ಟೆಂಪಲ್ ಹಾಗೂ ತುಮಕೂರು ರೋಡ್ ಸಂಪರ್ಕಿಸುವ ಈ ಫ್ಲೈ ಓವರ್ ಮೇಲಿನ ಎರಡೂ ಬದಿಗಳಲ್ಲಿ ಸಾಲಾಗಿ ವಿದ್ಯುತ್ ಕಂಬಗಳಿದ್ದರೂ ಒಂದೇ ಒಂದು ಲೈಟ್ ಸಹ ಆನ್ ಇರಲ್ಲ.
ಇದೇನು ಒಂದೆರಡು ದಿನಗಳಿಂದ ಆಗಿರುವ ಸಮಸ್ಯೆಯಲ್ಲ. ಹಲವು ದಿನಗಳಿಂದ ಈ ಫ್ಲೈ ಓವರ್ ಮೇಲಿನ ವಿದ್ಯುತ್ ದೀಪಗಳು ಆನ್ ಆಗಿಲ್ಲ. ಯಾವ ಕಾರಣಕ್ಕೆ ಆನ್ ಆಗಿಲ್ಲ ಎಂಬುವುದನ್ನು ಅಧಿಕಾರಿಗಳೇ ತಿಳಿಸಬೇಕು. ಸಾವಿರಾರು ವಾಹನಗಳು ಸಂಚರಿಸುವ ಫ್ಲೈ ಓವರ್ ಅನ್ನು ಬಿಬಿಎಂಪಿ ಹಾಗೂ ಬೆಸ್ಕಾಂ ಯಾಕೆ ಈ ರೀತಿ ನಿರ್ಲಕ್ಷ್ಯ ಮಾಡಿದೆ ಗೊತ್ತಿಲ್ಲ.
ಇದನ್ನೂ ಓದಿ: ನಮ್ಮ ಮೆಟ್ರೋ ಹೊಸ ತಂತ್ರಜ್ಞಾನ ಬಳಕೆ; ಬಾಕ್ಸ್ ಆಕಾರದಲ್ಲಿ ಕಾಮಗಾರಿ
ಈ ಫ್ಲೈ ಓವರ್ ಜೊತೆಗೆ ಕೆ.ಆರ್ ಮಾರ್ಕೆಟ್ ಮೇಲಿನ ಮೈಸೂರು ರೋಡ್ ಸಂಪರ್ಕಿಸುವ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಫ್ಲೈ ಓವರ್ ಮೇಲೂ ಸರಿಯಾಗಿ ಲೈಟ್ ವ್ಯವಸ್ಥೆ ಇಲ್ಲ. ಒಂದೋ ಎರಡೋ ದೀಪಗಳು ಉರಿಯುತ್ತವೆ ಅಷ್ಟೆ. ಇದರ ಜೊತೆಗೆ ಯಶವಂತಪುರದಿಂದ ಮಲ್ಲೇಶ್ವರಂ ಸಂಪರ್ಕಿಸುವ ಡಾ. ಭಾರತ ರತ್ನ ಪ್ರೋ ಯುಎನ್ಆರ್ರಾವ್ ಅಂಡರ್ ಪಾಸ್ನಲ್ಲೂ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಇದರಿಂದ ನಡೆದುಕೊಂಡು ಹೋಗುವ ಪಾದಚಾರಿಗಳಿಗೆ ವಾಹನಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಇದೆ.
ಬಿಡಿಎ ಮುಖ್ಯ ಕಚೇರಿ ಮುಂಭಾದಲ್ಲಿರುವ ಬ್ರಿಡ್ಜ್ ಮೇಲೆ ಒಂದೇ ಒಂದು ಲೈಟ್ ಕೂಡ ರಾತ್ರಿ ವೇಳೆಯಲ್ಲಿ ಉರಿಯುತ್ತಿಲ್ಲ ಸಂಪೂರ್ಣವಾಗಿ ಕತ್ತಲೆಯಾಗಿರುತ್ತದೆ. ಇದರಿಂದ ವಾಹನ ಸವಾರರಿಗೆ ತುಂಬಾ ಸಮಸ್ಯೆ ಆಗುತ್ತಿದೆ ಎಂದು ವಾಹನ ಸವಾರ ಮಧು ಎಂಬುವರು ಹೇಳಿದರು.
ಒಟ್ಟಾರೆ ಕಗ್ಗತ್ತಲೆಯ ಫ್ಲೈ ಓವರ್ ಮತ್ತು ಅಂಡರ್ ಪಾಸ್ನಲ್ಲಿ ವಾಹನ ಸವಾರರು ರಾತ್ರಿ ವೇಳೆ ಸಂಚಾರ ಮಾಡಲು ಜೀವ ಕೈಯಲ್ಲಿಡಿದು ಓಡಾಡುವಂತಾಗಿದ್ದು, ಈ ಬಗ್ಗೆ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ