ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್‌ಗಳಿಗೆ ಕ್ಲಾಸ್

ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿ ರಸ್ತೆ, ಫುಟ್‌ಪಾತ್ ಒತ್ತುವರಿ ಹಾಗೂ ಚರಂಡಿ ಅವ್ಯವಸ್ಥೆ ಪರಿಶೀಲಿಸಲು ನಗರಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ರಾತ್ರಿ ವೇಳೆ ದಿಢೀರ್ ರೌಂಡ್ಸ್ ಕೈಗೊಂಡರು. ಇದೇ ವೇಳೆ ಫುಟ್‌ಪಾತ್ ಒತ್ತುವರಿ ತೆರವನ್ನು ಬಲವಾಗಿ ಸಮರ್ಥಿಸಿಕೊಂಡ ಅವರು, ಫುಟ್‌ಪಾತ್ ಸಮಸ್ಯೆಯಿಂದಾಗಿ ನಗರದಲ್ಲಿ ವರ್ಷಕ್ಕೆ 300 ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಆಘಾತಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಕೃಷ್ಣಭೈರೇಗೌಡ ನೈಟ್ ರೌಂಡ್ಸ್: ಇಂಜಿನಿಯರ್‌ಗಳಿಗೆ ಕ್ಲಾಸ್
ಕೃಷ್ಣಭೈರೇಗೌಡರಿಂದ ತಡರಾತ್ರಿ ದಿಢೀರ್ ಸಿಟಿ ರೌಂಡ್ಸ್
Image Credit source: tv9

Updated on: Jul 03, 2026 | 7:06 AM

ಮುಖ್ಯಾಂಶಗಳು

  • ಸಚಿವ ಕೃಷ್ಣಭೈರೇಗೌಡರಿಂದ ತಡರಾತ್ರಿ ದಿಢೀರ್ ರೌಂಡ್ಸ್
  • ರಸ್ತೆ ಅಗೆದ ಇಂಜಿನಿಯರ್‌ಗಳಿಗೆ ತರಾಟೆ
  • ಮುಖ್ಯ ರಸ್ತೆಗಳ ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಬೆಂಗಳೂರು, ಜುಲೈ 3: ಬೆಂಗಳೂರಿನ (Bengaluru) ಔಟರ್ ರಿಂಗ್ ರೋಡ್ (ORR) ಭಾಗದಲ್ಲಿ ರಸ್ತೆ ಗುಂಡಿ, ಧೂಳು ಮತ್ತು ಚರಂಡಿಗಳ ಅವ್ಯವಸ್ಥೆಗೆ ಬ್ರೇಕ್ ಹಾಕಲು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (Krishna Byregowda) ಖುದ್ದು ಕಣಕ್ಕಿಳಿದಿದ್ದಾರೆ. ಗುರುವಾರ ತಡರಾತ್ರಿ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಕೈಗೊಂಡ ಸಚಿವರು, ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ವರೆಗಿನ ರಸ್ತೆ ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ ಇತ್ತೀಚೆಗೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಕಟ್ಟುನಿಟ್ಟಾಗಿ ಸಮರ್ಥಿಸಿಕೊಂಡ ಅವರು, ಫುಟ್‌ಪಾತ್‌ಗಳ ಅವ್ಯವಸ್ಥೆಯಿಂದಾಗಿ ನಗರದಲ್ಲಿ ಪ್ರತಿವರ್ಷ 300 ಅಮಾಯಕರು ರಸ್ತೆ ಅಪಘಾತಗಳಲ್ಲಿ ಮೃತಪಡುತ್ತಿದ್ದಾರೆ ಎಂದು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ರಸ್ತೆ ಅಗೆದಿದ್ದಕ್ಕೆ ಕೆಂಡಾಮಂಡಲ: ಅಧಿಕಾರಿಗಳಿಗೆ ಕ್ಲಾಸ್

ಬಿ-ಸ್ಮೈಲ್ ವತಿಯಿಂದ ಸಿಲ್ಕ್ ಬೋರ್ಡ್‌ನಿಂದ ಬೈಯ್ಯಪ್ಪನಹಳ್ಳಿವರೆಗಿನ 17.1 ಕಿ.ಮೀ ಉದ್ದದ ರಸ್ತೆಯನ್ನು ಜಾಗತಿಕ ಮಟ್ಟದ ವಿನ್ಯಾಸಕ್ಕೆ ಅಭಿವೃದ್ಧಿಪಡಿಸಲು 400 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಇದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಲೌರಿ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಖುದ್ದು ಪರಿಸ್ಥಿತಿ ಅವಲೋಕಿಸಿದ ಸಚಿವರು, ನೇತಾಡುತ್ತಿದ್ದ ಬೆಸ್ಕಾಂ ತಂತಿಗಳು ಹಾಗೂ ಹಾಳಾದ ಸರ್ವೀಸ್ ರಸ್ತೆಗಳನ್ನು ಕಂಡು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಯಾವುದೇ ರಾಜಿ ಇಲ್ಲದೆ ಒಂದೇ ಮಾದರಿಯ ವಿನ್ಯಾಸ ರೂಪಿಸಲು ಆದೇಶಿಸಿದರು.

ಹೊಸದಾಗಿ ಡಾಂಬರ್ ಹಾಕಿದ್ದ ರಸ್ತೆ ಅಗೆದಿದ್ದಕ್ಕೆ ಸಚಿವರಿಂದ ಕ್ಲಾಸ್

Minister Krishna Byre Gowda Held Overnight Bengaluru City Rounds To Oversee Footpath Clearance Drive
ಇದೇ ವೇಳೆ ದೊಡ್ಡಾನೆಕ್ಕುಂದಿ ಜಂಕ್ಷನ್‌ನಲ್ಲಿ ಹೊಸದಾಗಿ ಡಾಂಬರು ಹಾಕಿದ್ದ ರಸ್ತೆಯನ್ನೇ ಮತ್ತೆ ಅಗೆದಿರುವುದನ್ನು ಕಂಡು ತೀವ್ರ ಆಕ್ರೋಶ ಹೊರಹಾಕಿದ ಸಚಿವರು, ‘ರಾತ್ರೋರಾತ್ರಿ ರಸ್ತೆ ಅಗೆದವರು ಯಾರು?’ ಎಂದು ಸ್ಥಳದಲ್ಲಿದ್ದ ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಫುಟ್​ಪಾತ್​ನಲ್ಲಿ ವ್ಯಾಪಾರ ಮಾಡಬೇಡಿ ಎಂದಿಲ್ಲ: ಕೃಷ್ಣಭೈರೇಗೌಡ

ಫುಟ್‌ಪಾತ್ ತೆರವು ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಸಚಿವರು, ‘ನಾವು ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಬೇಡಿ ಎಂದು ಹೇಳುತ್ತಿಲ್ಲ. ಆದರೆ ಮುಖ್ಯ ರಸ್ತೆಗಳ ಫುಟ್‌ಪಾತ್‌ಗಳನ್ನು ಒತ್ತುವರಿ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡಬೇಡಿ ಎಂದು ಹೇಳುತ್ತಿದ್ದೇವೆ. ಫುಟ್‌ಪಾತ್ ಇಲ್ಲದೆ ಜನರು ರಸ್ತೆಗೆ ಇಳಿದು ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ಇದರಿಂದ ಪ್ರತಿ ವರ್ಷ 300 ಜನ ಮೃತಪಡುತ್ತಿದ್ದಾರೆ. ಇದಕ್ಕೆ ಯಾರು ಉತ್ತರ ಕೊಡುತ್ತಾರೆ? ನಿಮ್ಮ ಮನೆಯವರು ಯಾರಾದರೂ ಹೀಗೆ ಮೃತಪಟ್ಟರೆ ಏನು ಮಾಡುತ್ತೀರಿ? ಅದಕ್ಕಾಗಿಯೇ ಮುಖ್ಯ ರಸ್ತೆಗಳ ಫುಟ್‌ಪಾತ್ ಬಿಟ್ಟು, ಪಕ್ಕದ ರಸ್ತೆಗಳಲ್ಲಿ ವ್ಯಾಪಾರ ಮಾಡಿದರೆ ನಮ್ಮದೇನು ಅಡ್ಡಿಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

ಮಳೆಗಾಲ ಆದ್ದರಿಂದ ರಾಜಕಾಲುವೆಗಳ ಅಭಿವೃದ್ಧಿ ಮತ್ತು ನೀರು ನಿಲ್ಲದಂತೆ ತಡೆಯುವ ವ್ಯವಸ್ಥೆಗೂ ಆದ್ಯತೆ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:58 am, Fri, 3 July 26

Follow Us