AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್‌ ನಡೆದಿರುವ ಶಂಕೆ: ಯಾವುದು ನಿಜ? ಯಾವುದು ಸುಳ್ಳು?

ಕರ್ನಾಟಕದ ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್‌ ನಡೆದಿರುವ ಬಗ್ಗೆ ವಿಪಕ್ಷ ನಾಯಕ ಆರ್. ಅಶೋಕ್ ಶಂಕೆ ವ್ಯಕ್ತಪಡಿಸಿದ್ದಾರೆ. ಶಕ್ತಿ ಮತ್ತು ಗೃಹಲಕ್ಷ್ಮಿ ಯೋಜನೆಗಳ ಫಲಾನುಭವಿಗಳು ಹಾಗೂ ವೆಚ್ಚದ ಕುರಿತು ಮುಖ್ಯಮಂತ್ರಿಗಳ ಹೇಳಿಕೆಗಳು, ಅಧಿಕೃತ ಪೋಸ್ಟ್‌ಗಳು ಮತ್ತು ಸಮಿತಿಯ ಅಂಕಿ-ಅಂಶಗಳಲ್ಲಿ ಭಾರಿ ವ್ಯತ್ಯಾಸವಿದೆ. ಈ ಗೊಂದಲ ನಿವಾರಿಸಲು ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸುವಂತೆ ಆಗ್ರಹಿಸಿದ್ದಾರೆ.

ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್‌ ನಡೆದಿರುವ ಶಂಕೆ: ಯಾವುದು ನಿಜ? ಯಾವುದು ಸುಳ್ಳು?
ಆರ್​​. ಅಶೋಕ್​, ಡಿಕೆ ಶಿವಕುಮಾರ್​Image Credit source: tv9 kannada
ಕಿರಣ್​ ಹನಿಯಡ್ಕ
| Edited By: |

Updated on:Aug 15, 2026 | 9:31 PM

Share

ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆಗಳಲ್ಲಿ ಗೋಲ್‌ಮಾಲ್‌ ನಡೆದಿರುವ ಶಂಕೆ
  • ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸುವಂತೆ ಅಶೋಕ್‌ ಆಗ್ರಹ
  • ಸಿಎಂ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಗೊಂದಲ ಮೂಡಿಸಿದ ಅಂಕಿ ಅಂಶ

ಬೆಂಗಳೂರು, ಆಗಸ್ಟ್​ 15: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ವೆಚ್ಚದ ಅಂಕಿ-ಅಂಶಗಳಲ್ಲಿ ಭಾರೀ ಗೋಲ್‌ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಆಗ್ರಹಿಸಿದ್ದಾರೆ. ಸಿಎಂ ಡಿಕೆ ಶಿವಕುಮಾರ್ (DK Shivakumar)​ ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ನೀಡಿರುವ ಅಂಕಿ-ಅಂಶಗಳಿಗೂ ಹಾಗೂ ಸರ್ಕಾರದ ಹಿಂದಿನ ಪ್ರಕಟಣೆಗಳಿಗೂ ಯಾವುದೇ ತಾಳೆಯಾಗುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ ಕಳೆ ಗಟ್ಟಿತ್ತು. ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಡಿಕೆ ಮುಖ್ಯಮಂತ್ರಿಯಾಗಿ ತಮ್ಮ ಚೊಚ್ಚಲ ಧ್ವಜಾರೋಹಣ ನೆರವೇರಿಸಿದರು. ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಡಿಕೆ ಶಿವಕುಮಾರ್​ ಅಭಿವೃದ್ಧಿಯೇ ನಮ್ಮ ಗುರಿ ಎಂದಿದ್ದರು. ಜೊತೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ನೀಡಿರುವ ಕೆಲ ಅಂಕಿ ಸಂಖ್ಯೆ ತಾಳೆ ಆಗುತ್ತಿಲ್ಲ ಎಂದು ಆರ್​ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.

7 ಕೋಟಿ ಕನ್ನಡಿಗರಿಗೆ ಘೋರ ಅಪಮಾನ: ಡಿಕೆ ಶಿವಕುಮಾರ್​ ವಿರುದ್ಧ ಅಶೋಕ್​ ಕಿಡಿ

ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ‘ಸ್ವಾತಂತ್ರ್ಯ ದಿನಾಚರಣೆಯಂತಹ ಪವಿತ್ರ ವೇದಿಕೆಯಲ್ಲೂ ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡಿ, ಸುಳ್ಳು ಲೆಕ್ಕಗಳನ್ನು ನೀಡುವ ಮೂಲಕ ಡಿ.ಕೆ. ಶಿವಕುಮಾರ್ ಅವರು 7 ಕೋಟಿ ಕನ್ನಡಿಗರಿಗೆ ಘೋರ ಅಪಮಾನ ಮಾಡಿದ್ದಾರೆ’ ಎಂದಿದ್ದಾರೆ.

ಆರ್​​ ಅಶೋಕ್​ ಟ್ವೀಟ್​

ಶಕ್ತಿ ಯೋಜನೆಯ ವೆಚ್ಚದಲ್ಲಿ ಭಾರೀ ಗೊಂದಲವಿದೆ ಎಂದಿರುವ ಅಶೋಕ್, ‘ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸಿಎಂ ಅವರು 3.5 ಕೋಟಿ ಮಹಿಳೆಯರು 796 ಕೋಟಿ ಉಚಿತ ಪ್ರಯಾಣ ಮಾಡಿದ್ದು, ಮೂರು ವರ್ಷಗಳಲ್ಲಿ 14,875 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದಿದ್ದಾರೆ. ಆದರೆ ಜೂನ್ 11ರಂದು ಸಿಎಂ ಅಧಿಕೃತ ‘ಎಕ್ಸ್’ ಖಾತೆಯಲ್ಲಿ 753.7 ಕೋಟಿ ಪ್ರಯಾಣಕ್ಕೆ 19,771 ಕೋಟಿ ರೂ. ವೆಚ್ಚವಾಗಿದೆ ಎಂದು ಮತ್ತು ಮೇ 25ರ ಪೋಸ್ಟ್‌ನಲ್ಲಿ 726 ಕೋಟಿ ಪ್ರಯಾಣಕ್ಕೆ 18,943 ಕೋಟಿ ರೂ. ವ್ಯಯಿಸಲಾಗಿದೆ ಎಂದು ತಿಳಿಸಲಾಗಿತ್ತು. ಇವುಗಳನ್ನು ತಾಳೆ ನೋಡಿದರೆ ಸುಮಾರು 5 ರಿಂದ 6 ಸಾವಿರ ಕೋಟಿ ರೂ ವ್ಯತ್ಯಾಸ ಕಂಡುಬರುತ್ತಿದೆ. ಹಿಂದೆ ಹೆಚ್ಚಿದ್ದ ಒಟ್ಟು ಖರ್ಚು ಈಗ ದಿಢೀರನೆ ಕಡಿಮೆಯಾಗಿದ್ದು ಹೇಗೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು’ ಎಂದಿದ್ದಾರೆ.

ಯಾರ ಖಾತೆಗೆ ಹಣ ಹೋಗುತ್ತಿದೆ?

ಇದೇ ವೇಳೆ ಗೃಹಲಕ್ಷ್ಮಿ ಯೋಜನೆಯ ಅಂಕಿ-ಅಂಶಗಳ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ‘ನಿಮ್ಮದೇ ಸರ್ಕಾರ ಮತ್ತು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣ ಹಾಗೂ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ನೀಡಿರುವ ಅಧಿಕೃತ ಪ್ರಕಟಣೆಯಲ್ಲಿ ಫಲಾನುಭವಿಗಳ ಸಂಖ್ಯೆ 1.24 ಕೋಟಿ ಎಂದಿದೆ. ಕಾಂಗ್ರೆಸ್ ಸರ್ಕಾರ 3 ವರ್ಷ ಪೂರೈಸಿದ ಸಂದರ್ಭದಲ್ಲಿ ಮೇ 25, 2026ರಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕೃತ ಎಕ್ಸ್​ ಖಾತೆಯ ಪೋಸ್ಟ್ ಒಂದರಲ್ಲಿಯೂ ಸಹ ಫಲಾನುಭವಿಗಳ ಸಂಖ್ಯೆ 1.24 ಕೋಟಿ ಎಂದು ಹೇಳಲಾಗಿದೆ. ಆದರೆ, ಇಂದಿನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸಿಎಂ ಡಿ.ಕೆ.ಶಿವಕುಮಾರ್ ಅವರು 1.28 ಕೋಟಿ ಎಂದು ಹೇಳುತ್ತಾರೆ. ಈ 4 ಲಕ್ಷ ಹೆಚ್ಚುವರಿ ಫಲಾನುಭವಿಗಳು ಯಾರು? ಯಾರ ಖಾತೆಗೆ ಹಣ ಹೋಗುತ್ತಿದೆ’ ಎಂದು ಪ್ರಶ್ನಿಸಿದರು.

ಇಷ್ಟಕ್ಕೂ ಇಲ್ಲಿ ಯಾರು ಹೇಳುತ್ತಿರುವುದು ಸತ್ಯ? ಯಾರು ಹೇಳುತ್ತಿರುವುದು ಸುಳ್ಳು?

‘ಮಾಜಿ ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಸುಳ್ಳಾ? ಹಾಲಿ ಸಿಎಂ ಡಿಕೆ ಶಿವಕುಮಾರ್​ ಹೇಳುತ್ತಿರುವುದು ಸುಳ್ಳಾ? ಅಥವಾ ಗ್ಯಾರೆಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೇಳುತ್ತಿರುವುದು ಸುಳ್ಳಾ? ಸಾರ್ವಜನಿಕರ ತೆರಿಗೆ ಹಣದಲ್ಲಿ ‘ಗ್ಯಾರಂಟಿ ಅನುಷ್ಠಾನ ಸಮಿತಿ’ ಎಂದು ಅಧ್ಯಕ್ಷರು, ಉಪಾಧ್ಯಕ್ಷರನ್ನು ನೇಮಿಸಿ, ಅವರಿಗೆ ಕಾರು, ಭತ್ಯೆ, ಆಡಂಬರದ ಸೌಲಭ್ಯಗಳನ್ನು ನೀಡಿದ್ದೀರಿ. ಸರ್ಕಾರಿ ಇಲಾಖೆಗಳು ಒಂದು ಲೆಕ್ಕ ನೀಡಿದರೆ, ಈ ಸಮಿತಿ ಇನ್ನೊಂದು ಲೆಕ್ಕ ಕೊಡುತ್ತದೆ, ಸಚಿವರು ಮತ್ತೊಂದು ಸುಳ್ಳು ಹೇಳುತ್ತಾರೆ. ಈ ಗೊಂದಲ ಸೃಷ್ಟಿಸಲೆಂದೇ ಅನುಷ್ಠಾನ ಸಮಿತಿಗಳನ್ನು ಮಾಡಿದ್ದೀರಾ’ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಯುವಜನತೆಗೆ ಎಐ ಶಿಕ್ಷಣದ ಕೊಡುಗೆ: 80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಘೋಷಣೆ

ಇನ್ನು ಮುಖ್ಯಮಂತ್ರಿಗಳಿಗೆ ನೇರ ಸವಾಲು ಹಾಕಿದ ಅಶೋಕ್​, ‘ಕನ್ನಡಿಗರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ತಕ್ಷಣವೇ ನಿಲ್ಲಿಸಿ. ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಸುಳ್ಳು ಲೆಕ್ಕ ನೀಡಿ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಕ್ಕಾಗಿ ಡಿ.ಕೆ. ಶಿವಕುಮಾರ್ ಅವರು ಕನ್ನಡಿಗರ ಕ್ಷಮೆ ಕೇಳಬೇಕು’. ಈ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಗ್ಯಾರಂಟಿ ಯೋಜನೆಗಳ ಪ್ರತಿಯೊಂದು ಪೈಸೆ ವೆಚ್ಚ ಹಾಗೂ ಫಲಾನುಭವಿಗಳ ನಿಜವಾದ ವಿವರಗಳನ್ನು ಒಳಗೊಂಡ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು’ ಎಂದು ಸವಾಲು ಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:30 pm, Sat, 15 August 26

Follow Us