
ಬೆಂಗಳೂರು, ಸೆಪ್ಟೆಂಬರ್ 11): ಬೆಂಗಳೂರಿನ ಬನಶಂಕರಿ 5ನೇ ಹಂತದ 2ನೇ ಬ್ಲಾಕ್ ಹಾಗೂ 6ನೇ ಹಂತದ ಸುತ್ತಮುತ್ತ ಈಗ ಚಿರತೆಯದ್ದೇ ಸುದ್ದಿ. ನಿನ್ನೆ (ಸೆ.10) ಮುಂಜಾನೆ ಸರಿಯಾಗಿ 4 ಗಂಟೆಗೆ ಮನೆಯೊಂದರ ಮುಂದೆ ಒಂಟಿ ಚಿರತೆ ಓಡಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೇಶವ್ ಎಂಬುವವರ ಮನೆಯ ಮುಂದೆ ಹೆಜ್ಜೆ ಹಾಕಿದ ಚಿರತೆ, ಅಲ್ಲಿದ್ದ ನಾಯಿಗಳ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಆದರೆ, ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸುತ್ತಿದ್ದಂತೆ ಆತಂಕಗೊಂಡ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಬೆಳಗ್ಗೆ ಕೆಲಸಗಾರ ಬಂದು ಮನೆ ಮುಂಭಾಗದಲ್ಲಿ ಚಿರತೆಯ ಹೆಜ್ಜೆ ಗುರುತುಗಳನ್ನು ನೋಡಿ ಮಾಲೀಕ ಕೇಶವ್ ಅವರಿಗೆ ತಿಳಿಸಿದ್ದಾರೆ. ತಕ್ಷಣ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಚಿರತೆಯ ಓಡಾಟ ಸಾಬೀತಾಗಿದೆ.
ಇನ್ನೂ ಬನಶಂಕರಿ 5ನೇ ಹಂತದ ಜನರಿಗೆ ಇದು ಎರಡನೇ ಬಾರಿಯ ಆಘಾತ. ಜುಲೈ 25ರಂದು ಸಂಜೆ 7 ಗಂಟೆಗೆ ಇದೇ 2ನೇ ಬ್ಲಾಕ್‌ನಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಆ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಚಿರತೆಯನ್ನು ಕಾಡಿಗೆ ಅಟ್ಟಿದ್ದರು. ಆದರೆ, ಈಗ ಮತ್ತೆ ಅದೇ ಜಾಗದಲ್ಲಿ ಒಂಟಿ ಚಿರತೆ ಕಾಣಿಸಿಕೊಂಡಿರುವುದು ಜನರನ್ನು ಮನೆಯಿಂದ ಹೊರಬರದಂತೆ ಮಾಡಿದೆ. ಸಣ್ಣ ಮಕ್ಕಳನ್ನು ಇಟ್ಟುಕೊಂಡಿರುವ ಕುಟುಂಬಗಳು ತೀವ್ರ ಭೀತಿಯಲ್ಲಿ ದಿನ ಕಳೆಯುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ಕಾರ್ಯಾಚರಣೆಗಿಳಿಯಬೇಕೆಂದು ಒತ್ತಾಯಿಸುತ್ತಿದ್ದಾರೆ.
ಒಟ್ನಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಪಟಾಕಿ ಸೌಂಡ್‌ಗೆ ಕಾಡಿಗೆ ಓಡಿದ್ದ ಚಿರತೆ, ಈಗ ಮತ್ತೆ ಬನಶಂಕರಿಯಲ್ಲಿ ಪ್ರತ್ಯಕ್ಷವಾಗಿ ನಿವಾಸಿಗಳ ನಿದ್ದೆಗೆಡಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೇವಲ ಪರಿಶೀಲನೆಗೆಷ್ಟೇ ಸೀಮಿತವಾಗದೆ, ಬೋನು ಇಟ್ಟು ಈ ಒಂಟಿ ಚಿರತೆಯನ್ನು ತಕ್ಷಣವೇ ಸೆರೆಹಿಡಿಯಬೇಕಿದೆ.
Published On - 10:14 pm, Fri, 11 September 26