
ಬೆಂಗಳೂರು, ಸೆಪ್ಟೆಂಬರ್ 7: ಕರ್ನಾಟಕ ಉದ್ಯಾನವನಗಳ ಸಂರಕ್ಷಣೆ ಮತ್ತು ಬಳಕೆಗೆ ಸಂಬಂಧಿಸಿದ ತಿದ್ದುಪಡಿ ವಿಧೇಯಕವನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಬೆನ್ನಲ್ಲೇ, ಬೆಂಗಳೂರಿನ ಉದ್ಯಾನವನಗಳ ಸ್ಥಿತಿ ಹಾಗೂ ಅವುಗಳ ಮೂಲ ಉದ್ದೇಶದ ಬದಲಾವಣೆ ಕುರಿತು ಪ್ರಶ್ನೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಬನಶಂಕರಿ 6ನೇ ಹಂತ, 2ನೇ ಬ್ಲಾಕ್‌ನ ನಿವಾಸಿ ಅರ್ಜುನ್ ಲಕ್ಷ್ಮೀನಾರಸಿಂಹ ಎಂಬವರು ತಮ್ಮ ಪ್ರದೇಶದಲ್ಲಿರುವ ಸಾರ್ವಜನಿಕ ಉದ್ಯಾನವನದ ಅನ್ಯ ಉದ್ದೇಶದ ಬಳಕೆ ಕುರಿತು ಹಲವು ಆರೋಪಗಳನ್ನು ಮಾಡಿದ್ದಾರೆ. ಸುಮಾರು 9,000 ಚದರ ಅಡಿ ವಿಸ್ತೀರ್ಣದ ಈ ಉದ್ಯಾನವನವು ಸುಮಾರು 2,500 ನಿವಾಸಿಗಳಿಗೆ ಸೇವೆ ನೀಡುತ್ತಿದೆ ಎಂದಿರುವ ಅವರು, ಅಲ್ಲಿ ನಿರ್ಮಾಣವಾಗಿರುವ ಕಟ್ಟೆವೊಂದರ ಸಂಬಂಧ ಆರೋಪಗಳನ್ನು ಮಾಡಿದ್ದಾರೆ.
ಅರ್ಜುನ್ ಲಕ್ಷ್ಮೀನಾರಸಿಂಹ ಅವರ ಪ್ರಕಾರ, ಬನಶಂಕರಿ 6ನೇ ಹಂತದಲ್ಲಿರುವ ಈ ಸ್ಥಳವನ್ನು ಬಿಡಿಎ ಹಾಗೂ ಸಂಬಂಧಿತ ನಾಗರಿಕ ಪ್ರಾಧಿಕಾರಗಳ ದಾಖಲೆಗಳಲ್ಲಿ ಅನುಮೋದಿತ ಲೇಔಟ್‌ನ ಉದ್ಯಾನವನವಾಗಿ ಗುರುತಿಸಲಾಗಿದೆ. ಆದರೆ, ಪ್ರಸ್ತುತ ಉದ್ಯಾನವನದೊಳಗೆ 600 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಮುಚ್ಚಿದ ಕಾಂಕ್ರೀಟ್ ಕಟ್ಟಡವಿದೆ. ಇದರ ಸುತ್ತಮುತ್ತಲಿನ ಗಮನಾರ್ಹ ಭಾಗವನ್ನು ಟೈಲ್ಸ್ ಹಾಕಿ ಗಟ್ಟಿಯಾದ ಮೇಲ್ಮೈಗಳಾಗಿ ಪರಿವರ್ತಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಉದ್ಯಾನವನದ ಶಾಶ್ವತ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಾಖಲೆಗಳಲ್ಲಿ ಸ್ಪಷ್ಟ ಅನುಮತಿ ಕಾಣಿಸುತ್ತಿಲ್ಲ.
ಉದ್ಯಾನವನದಲ್ಲಿದ್ದ ಅಭಿವೃದ್ಧಿಪಡಿಸಿದ ಹಸಿರು ಪ್ರದೇಶದ ಶೇ 50ಕ್ಕೂ ಹೆಚ್ಚು ಭಾಗ ಈಗ ಕಳೆದುಹೋಗಿರುವಂತೆ ಕಾಣುತ್ತದೆ ಎಂದು ಅರ್ಜುನ್ ಹೇಳಿದ್ದಾರೆ. ಹಿಂದೆ ಉದ್ಯಾನವನದಲ್ಲಿ ವಾಕಿಂಗ್ ಟ್ರ್ಯಾಕ್, ಅಂಚಿನ ಹಸಿರು ಪ್ರದೇಶ ಹಾಗೂ ಮಧ್ಯಭಾಗದಲ್ಲಿ ಸಾಕಷ್ಟು ಹಸಿರು ವಿಸ್ತೀರ್ಣವಿತ್ತು. ಆದರೆ ಇದೀಗ ಅದರ ದೊಡ್ಡ ಭಾಗವನ್ನು ಕಾಂಕ್ರೀಟ್ ನಿರ್ಮಾಣಗಳು ಮತ್ತು ಇತರ ಗಟ್ಟಿಯಾದ ಮೇಲ್ಮೈಗಳು ಆವರಿಸಿವೆ ಎಂದು ಅವರು ತಿಳಿಸಿದ್ದಾರೆ.
ಸುಮಾರು 2,500 ನಿವಾಸಿಗಳಿಗೆ ಸೇವೆ ನೀಡುತ್ತಿರುವ ಉದ್ಯಾನವನದಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಆಟದ ಪ್ರದೇಶ ಅಥವಾ ಸುರಕ್ಷಿತ ಆಟದ ಉಪಕರಣಗಳಿಲ್ಲ ಎಂದು ಅರ್ಜುನ್ ಆರೋಪಿಸಿದ್ದಾರೆ. ಹಸಿರು ಹಾಗೂ ಮಳೆನೀರು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿರುವ ಪ್ರದೇಶಗಳ ಬದಲಿಗೆ ಕಾಂಕ್ರೀಟ್ ಮತ್ತು ಇತರ ಗಟ್ಟಿಯಾದ ಮೇಲ್ಮೈಗಳು ಹೆಚ್ಚಾಗಿವೆ. ಇದರಿಂದ ಉದ್ಯಾನವನದ ಪರಿಸರ ಮತ್ತು ಸಾರ್ವಜನಿಕ ಬಳಕೆಯ ಉದ್ದೇಶಕ್ಕೆ ಧಕ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಉದ್ಯಾನವನದಲ್ಲಿರುವ ಕಟ್ಟಡವೂ ಹೆಚ್ಚಿನ ಸಮಯ ಬೀಗ ಹಾಕಿರುವ ಸ್ಥಿತಿಯಲ್ಲಿರುತ್ತದೆ. ಕೆಲವೇ ಸಂದರ್ಭಗಳಲ್ಲಿ ಬಳಕೆಯಾಗುವುದರಿಂದ, ಅದು ಪ್ರತಿದಿನ ಸಾರ್ವಜನಿಕರಿಗೆ ಲಭ್ಯವಿರುವ ಸೌಲಭ್ಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಅವರ ಮತ್ತೊಂದು ಆರೋಪವಾಗಿದೆ.

ಬನಶಂಕರಿ 6ನೇ ಹಂತ, 2ನೇ ಬ್ಲಾಕ್ ಉದ್ಯಾನವನದ ಹಳೇ ಫೊಟೊ
ಉದ್ಯಾನವನದಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆಯೂ ಇಲ್ಲ. ಸಾರ್ವಜನಿಕರಿಗೆ ಅಗತ್ಯವಿರುವ ಇತರ ಮೂಲಭೂತ ಸೌಲಭ್ಯಗಳ ಕೊರತೆಯೂ ಇದೆ ಎಂದು ಅರ್ಜುನ್ ಹೇಳಿದ್ದಾರೆ. ಸಣ್ಣ ಪ್ರಮಾಣದ ಈ ಉದ್ಯಾನವನಕ್ಕೆ ಒಂದೇ ಪ್ರವೇಶ ಮತ್ತು ನಿರ್ಗಮನವಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದ ತಾತ್ಕಾಲಿಕ ಅಥವಾ ಶಾಶ್ವತ ನಿರ್ಮಾಣಗಳನ್ನು ಕೈಗೊಳ್ಳುವುದರಿಂದ ಸಾರ್ವಜನಿಕ ಸುರಕ್ಷತೆಗೂ ಪ್ರಶ್ನೆ ಎದುರಾಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 2026ರ ಗಣೇಶೋತ್ಸವದ ಸಂದರ್ಭದಲ್ಲಿ ಉದ್ಯಾನವನದಲ್ಲಿ ಪಾವತಿಸಬೇಕಾದ ಸ್ಟಾಲ್‌ಗಳನ್ನು ಹಾಕುವುದು ಹಾಗೂ ಮತ್ತಷ್ಟು ತಾತ್ಕಾಲಿಕ ಅಥವಾ ಶಾಶ್ವತ ನಿರ್ಮಾಣ, ಮೂಲಸೌಕರ್ಯ ಕಲ್ಪಿಸುವ ಯೋಜನೆಗಳ ಕುರಿತು ಮಾಹಿತಿ ದೊರೆತಿದೆ ಎಂದು ಅರ್ಜುನ್ ತಿಳಿಸಿದ್ದಾರೆ. ಈಗಾಗಲೇ ಸೀಮಿತ ಹಸಿರು ಪ್ರದೇಶ ಹೊಂದಿರುವ ಮತ್ತು ಸುಮಾರು 2,500 ಜನರಿಗೆ ಸೇವೆ ನೀಡುತ್ತಿರುವ ಉದ್ಯಾನವನದಲ್ಲಿ ಇಂತಹ ಚಟುವಟಿಕೆಗಳು ನಡೆಯುವುದರಿಂದ ಸಾರ್ವಜನಿಕ ಬಳಕೆ ಹಾಗೂ ಸುರಕ್ಷತೆ ಬಗ್ಗೆ ಮತ್ತಷ್ಟು ಪ್ರಶ್ನೆಗಳು ಮೂಡುತ್ತವೆ ಎಂದು ಅವರು ಹೇಳಿದ್ದಾರೆ.
ಈ ಉದ್ಯಾನವನದ ಜಾಗ ಕಬ್ಜಾ ವಿಚಾರ ಹೊಸದಲ್ಲ. ಸುಮಾರು ಎಂಟು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಧಾರ್ಮಿಕ ಕಟ್ಟಡ ನಿರ್ಮಿಸುವ ಪ್ರಸ್ತಾವನೆ ಬಂದಿತ್ತು ಎಂದು ಅವರು ತಿಳಿಸಿದ್ದಾರೆ. ನಂತರ ಉದ್ಯಾನವನದೊಳಗಿನ ಇತರ ರಚನೆಗಳಿಗೆ ಸಂಬಂಧಿಸಿದ ವಿಚಾರಗಳೂ ನಡೆದಿವೆ. ಹೀಗಾಗಿ ಉದ್ಯಾನವನದ ಜಾಗದಲ್ಲಿ ಇದುವರೆಗೆ ಯಾವೆಲ್ಲ ನಿರ್ಮಾಣಗಳು ನಡೆದಿವೆ, ಅವುಗಳಿಗೆ ಯಾವ ಅನುಮತಿಗಳು ಅಥವಾ ಮಂಜೂರಾತಿಗಳು ದೊರೆತಿವೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಉದ್ಯಾನವನಗಳ ಸಂರಕ್ಷಣೆ ಕುರಿತ ಚರ್ಚೆ ಕೇವಲ ಭವಿಷ್ಯದಲ್ಲಿ ಉದ್ಯಾನವನದ ಜಾಗವನ್ನು ಬೇರೆ ಉದ್ದೇಶಕ್ಕೆ ಬಳಸುವ ಪ್ರಶ್ನೆಗೆ ಸೀಮಿತವಾಗಬಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಅಧಿಕೃತ ದಾಖಲೆಗಳಲ್ಲಿ ಉದ್ಯಾನವನವೆಂದು ಗುರುತಿಸಲಾಗಿರುವ ಸ್ಥಳವೊಂದು ಕ್ರಮೇಣ ತನ್ನ ಹಸಿರು ಹಾಗೂ ಮನರಂಜನಾ ಉದ್ದೇಶವನ್ನು ಕಳೆದುಕೊಳ್ಳಲು ಹೇಗೆ ಅವಕಾಶವಾಯಿತು ಎಂಬುದನ್ನು ಪರಿಶೀಲಿಸಬೇಕು. ನಿರ್ಮಾಣ ಮತ್ತು ಗಟ್ಟಿಯಾದ ಮೇಲ್ಮೈಗಳಿಗೆ ಯಾವ ಅನುಮತಿಗಳು ಅಥವಾ ಮಂಜೂರಾತಿಗಳನ್ನು ಆಧಾರವಾಗಿ ಬಳಸಲಾಗಿದೆ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕ ಮತ್ತು ವಿರೋಧ ಪಕ್ಷಗಳ ಆಕ್ರೋಶದ ಎಫೆಕ್ಟ್: ರಾಜ್ಯ ಸರ್ಕಾರದಿಂದ ಉದ್ಯಾನವನ ತಿದ್ದುಪಡಿ ಮಸೂದೆ ವಾಪಸ್
ಸಮುದಾಯದ ಹಬ್ಬಗಳ ಆಚರಣೆಯನ್ನು ವಿರೋಧಿಸುವುದು ತಮ್ಮ ಉದ್ದೇಶವಲ್ಲ. ಆದರೆ ಅಧಿಕೃತವಾಗಿ ಉದ್ಯಾನವನವೆಂದು ಗುರುತಿಸಲ್ಪಟ್ಟ ಸಾರ್ವಜನಿಕ ಸ್ಥಳಗಳು ಪ್ರತಿದಿನವೂ ಸಾರ್ವಜನಿಕರ ಬಳಕೆಗೆ ಲಭ್ಯವಿದ್ದು, ಅವುಗಳ ಮೂಲ ಉದ್ದೇಶ ಸಂರಕ್ಷಿಸಲ್ಪಡಬೇಕು ಎಂಬುದು ತಮ್ಮ ಕಾಳಜಿ ಎಂದು ಅರ್ಜುನ್ ಲಕ್ಷ್ಮೀನಾರಸಿಂಹ ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ