
ಬೆಂಗಳೂರು, ಏಪ್ರಿಲ್ 05: ಮಲ್ಲೇಶ್ವರಂನಲ್ಲಿನ ಪೊಲೀಸ್ ಕ್ವಾಟ್ರಸ್ ಜಾಗ ಕಬಳಿಸಲು ಸ್ಕೆಚ್ ಹಾಕಿದ್ದ ಭೂಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 25 ಸಾವಿರ ಚದರಡಿ ಜಾಗವನ್ನು ಲಪಟಾಯಿಸಲು ಮುಂದಾಗಿದ್ದ ವಂಚಕರು, ಅದಕ್ಕೆ ಬೇಕಾದ ದಾಖಲೆಗಳನ್ನು ಕೂಡ ಸಿದ್ಧಪಡಿಸಿಕೊಂಡಿದ್ದರು. ಪ್ರಕರಣ ಸಂಬಂಧ ಕೃಷ್ಣ ಮೂರ್ತಿ, ಶ್ರೀನಾಥ್ ನಗರಗಡ್ಡೆ ಮತ್ತು ಕೃಷ್ಣ ಎಂಬವರನ್ನು ಅರೆಸ್ಟ್ ಮಾಡಲಾಗಿದ್ದು, ಇದೇ ರೀತಿ ನಗರದ ಹಲವು ಕಡೆ ಸರ್ಕಾರಿ ಜಾಗ ನುಂಗಿರುವ ಬಗ್ಗೆ ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಈ ಬಗ್ಗೆ ಮಲ್ಲೇಶ್ವರಂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಹಳೆಯ ಮಲ್ಲೇಶ್ವರಂ ಪೊಲೀಸ್ ಠಾಣೆ ಹಾಗೂ ಪೊಲೀಸ್ ವಸತಿ ಗೃಹಗಳಿರುವ ಜಾಗಕ್ಕೆ ತನ್ನದೇ ಆದ ಇತಿಹಾಸವಿದೆ. 1913ರ ಮಾಪನ ನಕ್ಷೆಯಲ್ಲಿಯೇ ಈ ಪ್ರದೇಶವನ್ನು ಪೊಲೀಸ್ ವಸತಿಗೃಹ ಎಂದು ಗುರುತಿಸಲಾಗಿದೆ. ಈಗ ಅದೇ ಜಾಗದಲ್ಲಿನ ವಸತಿಗೃಹಗಳಲ್ಲಿ ನಾಲ್ವರು ಇನ್ಸ್‌ಪೆಕ್ಟರ್‌ಗಳ ಕುಟುಂಬಗಳು ವಾಸಿಸುತ್ತಿವೆ. ಆದರೆ ಇತ್ತೀಚೆಗೆ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ಅವರ ಮನೆಗೆ ಬಂದ ವಿದ್ಯುತ್ ಬಿಲ್ ಆರೋಪಿಗಳ ಕಳ್ಳಾಟವನ್ನು ಬಯಲು ಮಾಡಿದೆ. ಮಹಾಲಕ್ಷ್ಮೀ ಎಂಬ ಖಾಸಗಿ ವ್ಯಕ್ತಿಯ ಹೆಸರಲ್ಲಿ ಬಿಲ್ ಬಂದಿರೋದು ಅನುಮಾನಕ್ಕೆ ಕಾರಣವಾಗಿ ವಿಚಾರಣೆಗಿಳಿದಾಗ ಪೊಲೀಸ್ ಕ್ವಾಟ್ರಸ್ ಜಾಗ ಕಬಳಿಸಲು ಖದೀಮರು ಸ್ಕೆಚ್ ಹಾಕಿರೋದು ಗೊತ್ತಾಗಿತ್ತು.
ಇದನ್ನೂ ಓದಿ: ಪೊಲೀಸ್ ಇಲಾಖೆಗೆ ಸೇರಿದ 80 ಕೋಟಿ ರೂ. ಮೌಲ್ಯದ ಆಸ್ತಿ ಕಬಳಿಕೆ! ಬೆಸ್ಕಾಂ ಅಧಿಕಾರಿಗಳು ಸೇರಿ ಹಲವರ ಮೇಲೆ ಎಫ್ಐಆರ್
ಖಾಸಗಿ ಹೆಸರಲ್ಲಿ ವಿದ್ಯುತ್ ಬಿಲ್ ಬಂದಿದ್ದು ಹೇಗೆ ಎಂದು ಸಂಬಂಧಿತ ಕಚೇರಿಗೆ ಭೇಟಿ ನೀಡಿ ವಿಚಾರಿಸಿದಾಗ ದಾಖಲೆಗಳನ್ನು ಅಕ್ರಮವಾಗಿ ಮಹಾಲಕ್ಷ್ಮೀ ಎಂಬವರ ಹೆಸರಿಗೆ ವರ್ಗಾವಣೆ ಮಾಡಿರುವುದು ಬಹಿರಂಗವಾಗಿತ್ತು. ಅಲ್ಲದೆ ಬಿಬಿಎಂಪಿ ಮೂಲಕ ಅಕ್ರಮವಾಗಿ ಇ-ಖಾತಾ ಮಾಡಿಸಿರುವುದು ಹಾಗೂ ಕೃಷ್ಣಮೂರ್ತಿ ಎಂಬಾತನಿಗೆ ಮಾರಾಟ ಮಾಡಲು ಒಪ್ಪಂದ ಪತ್ರ ಕೂಡ ಮಾಡಿರುವ ವಿಚಾರ ಜಾಗದಲ್ಲಿ ಹಾಲಿ ವಾಸವಿದ್ದ ಪೊಲೀಸ್ ಅಧಿಕಾರಿಗಳಿಗೇ ಶಾಕ್ ನೀಡಿತ್ತು. ಇಷ್ಟು ಸಾಲದ್ದಕ್ಕೆ ಈ ನಡುವೆ ಜಾಗ ಖಾಲಿ ಮಾಡಿಸುತ್ತೇನೆ ಎಂದು ಖಾಸಗಿ ವ್ಯಕ್ತಿಯ ಕಡೆಯವರು ಪೊಲೀಸ್ ಅಧಿಕಾರಿಗಳ ಕುಟುಂಬಕ್ಕೇ ಬೆದರಿಕೆ ಹಾಕಿರುವ ಆರೋಪವೂ ಕೇಳಿಬಂದಿತ್ತು. ಈ ಎಲ್ಲ ಘಟನೆಯ ಬಗ್ಗೆ ಪ್ರಸ್ತುತ ಲೋಕಾಯುಕ್ತ ಇನ್ಸ್‌ಪೆಕ್ಟರ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.