ಬೆಂಗಳೂರಿನಲ್ಲಿ ಮಳೆಗೆ ಮತ್ತಿಬ್ಬರು ಬಲಿ: ನುಗ್ಗಿ ಬಂದ ನೀರು ಖಾಲಿ ಮಾಡುವ ವೇಳೆ ದುರ್ಘಟನೆ
ಬೆಂಗಳೂರಿನಲ್ಲಿ ಮಳೆಯಿಂದ ಮತ್ತಿಬ್ಬರು ಸಾವನ್ನಪ್ಪಿರುವಂತಹ ದುರ್ಘಟನೆ ಬಿಟಿಎಂ ಲೇಔಟ್ನ 2ನೇ ಹಂತದ ಎನ್.ಎಸ್.ಪಾಳ್ಯದ ಮಧುವನ ಅಪಾರ್ಟ್ಮೆಂಟ್ನ ಬೇಸ್ಮೆಂಟ್ನಲ್ಲಿ ನಡೆದಿದೆ. ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಎಲೆಕ್ಟ್ರಿಕ್ ಶಾಕ್ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ಸದ್ಯ ಸ್ಥಳಕ್ಕೆ ಮೈಕೋ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರು, ಮೇ 19: ಎಡೆಬಿಡದೆ ಸುರಿಯುತ್ತಿರುವ ಮಳೆ (rain) ನಗರದಲ್ಲಿ ನೂರೆಂಟು ಅವಾಂತರಗಳನ್ನು ಸೃಷ್ಟಿಸಿದೆ. ಇಂದು ಬೆಳ್ಳಿಗೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದರು (death). ಇದರ ಬೆನ್ನಲ್ಲೇ ಇದೀಗ ಮಳೆಯಿಂದ ಮತ್ತಿಬ್ಬರು ಸಾವನ್ನಪ್ಪಿರುವಂತಹ ಘಟನೆ ಬಿಟಿಎಂ ಲೇಔಟ್ನ 2ನೇ ಹಂತದ ಎನ್.ಎಸ್.ಪಾಳ್ಯದಲ್ಲಿ ನಡೆದಿದೆ. ಮಧುವನ ಅಪಾರ್ಟ್ಮೆಂಟ್ನ ನಿವಾಸಿ 55 ವರ್ಷದ ಮನೋಹರ ಕಾಮತ್ ಮತ್ತು ನೇಪಾಳ ಮೂಲದ 9 ವರ್ಷದ ಬಾಲಕ ದಿನೇಶ್ ಮೃತರು.
ಮಳೆಯಿಂದ ಮಧುವನ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಜಲಾವೃತವಾಗಿತ್ತು. ಮೋಟಾರ್ ಮೂಲಕ ನೀರು ಹೊರಹಾಕಲು ಯತ್ನಿಸುತ್ತಿದ್ದಾಗ ಎಲೆಕ್ಟ್ರಿಕ್ ಶಾಕ್ನಿಂದ ಮನೋಹರ ಕಾಮತ್ ಮತ್ತು ದಿನೇಶ್ ದುರ್ಮರಣ ಹೊಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನ ವರುಣಾರ್ಭಟಕ್ಕೆ ಮೊದಲ ಬಲಿ: ಯಾವ್ಯಾವ ಏರಿಯಾದಲ್ಲಿ ಎಷ್ಟು ಮಳೆ? ಇಲ್ಲಿದೆ ವಿವರ
ಸ್ಥಳಕ್ಕೆ ಮೈಕೋ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವಗಳು ಸೇಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ಮಧುವನ ಅಪಾರ್ಟ್ಮೆಂಟ್ಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ.
ಗೋಡೆ ಕುಸಿದು ಮಹಿಳೆ ಸಾವು
ಪ್ರತಿರಾತ್ರಿ ನಗರವಾಸಿಗಳಿಗೆ ಕಾಡುತ್ತಿರುವ ಮಳೆ ನಿನ್ನೆ ಭಾರಿ ಹೊಡೆತ ಕೊಟ್ಟಿದೆ. ಗುಡುಗು ಸಹಿತ ಮಳೆಗೆ ವೈಟ್‌ಫೀಲ್ಡ್‌ನಲ್ಲಿ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಚನ್ನಸಂದ್ರ ಬಳಿ ಬೃಹತ್ ಕಾಂಪೌಂಡ್ನ ಗೋಡೆ ಕುಸಿದಿದ್ದು, ಕೆಲಸಕ್ಕೆಂದು ಹೋಗುತ್ತಿದ್ದ ಶಶಿಕಲಾ ಎಂಬ ಮಹಿಳೆ ಮೇಲೆ ಬಿದ್ದು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.
ಇದನ್ನೂ ಓದಿ: ಕೆರೆಯಂತಾದ ಬೆಂಗಳೂರು ರಸ್ತೆಗಳು: ಹೊಸೂರು ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್
ಸೊಂಟದೆತ್ತರದ ನೀರಲ್ಲಿ ಬಸ್ಸು ಸಿಲುಕಿಕೊಂಡಿದ್ದರೆ ಒಳಗಡೆ ಓರ್ವ ಗರ್ಭಿಣಿ ಸಿಲುಕಿ ಪರದಾಡಿದ್ದರು. ನಗರದ ಸಿಲ್ಕ್ಬೋರ್ಡ್ನಲ್ಲಿ ಘಟನೆ ನಡೆದಿತ್ತು. ತಡರಾತ್ರಿ ಮಳೆಗೆ ರಸ್ತೆಯಲ್ಲಿ ಸೊಂಟದೆತ್ತರಕ್ಕೆ ನೀರು ನಿಂತಿತ್ತು. ಅದೇ ನೀರಲ್ಲಿ ಬರಲು ಸಾಹಸ ಮಾಡಿದ ಬಿಎಂಟಿಸಿ ಬಸ್ ಏಕಾಏಕಿ ಮಧ್ಯದಲ್ಲಿ ಕೆಟ್ಟು ನಿಂತಿತ್ತು. ಪ್ರಯಾಣಿಕರನ್ನ ಕಿಟಕಿ ಮೂಲಕ ಕೆಳಗಿಳಿಸಲಾಗಿತ್ತು. ಆದರೆ ಓರ್ವ ಗರ್ಭಿಣಿಯೂ ಬಸ್ನಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಜೆಸಿಬಿ ಮೂಲಕ ತಳ್ಳಿ ಬಸ್ನ್ನ ನೀರಿನಿಂದ ಹೊರತಂದು ಗರ್ಭಿಣಿಯನ್ನ ರಕ್ಷಿಸಲಾಯ್ತು.
ಸಿಡಿಲು ಬಡಿದು ವೃದ್ಧ ಸ್ಥಳದಲ್ಲೇ ಸಾವು
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಉಳವರೆ ಗ್ರಾಮದಲ್ಲಿ ಸಿಡಿಲು ಬಡಿದು ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಉಳವರೆ ಗ್ರಾಮದ ತಮ್ಮಣ್ಣಿ ಅನಂತಗೌಡ(65) ಮೃತ ದುರ್ದೈವಿ. ಕಳೆದ ವರ್ಷ ಶಿರೂರು ಭೂಕುಸಿತ ದುರಂತದಲ್ಲಿ ಸ್ವಲ್ಪದರಲ್ಲೇ ಪಾರಾಗಿದ್ದರು. ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:23 pm, Mon, 19 May 25