ಬೆಂಗಳೂರಿನ ಈ ಏರಿಯಾದಲ್ಲಿ ನೀರಿದ ಸಮಸ್ಯೆ: ಮನೆ ಬಾಡಿಗೆಗಿಂತ ವಾಟರ್ ಬಿಲ್ ದುಪ್ಪಟ್ಟು, ಜನರು ಆಕ್ರೋಶ
ಬೆಂಗಳೂರು ದಾಸರಹಳ್ಳಿಯ ಸಂಜೀವಿನಿ ನಗರದಲ್ಲಿ ಕಳೆದ ಕೆಲವು ತಿಂಗಳಿಂದ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಲ್ಲದಿದ್ದರೂ ದುಪ್ಪಟ್ಟು ಬಿಲ್ ಬರುತ್ತಿದೆ. ಮನೆ ಬಾಡಿಗೆಗಿಂತ ನೀರಿನ ಬಿಲ್ ಸಾವಿರಾರು ರೂ ದುಪ್ಪಟ್ಟು ಬರುತ್ತಿದೆ ಎಂದು ನಗರದ ನಿವಾಸಿಗಳು ಜಲಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಜೂನ್ 15: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸಂಜೀವಿನಿ ಏರಿಯಾದಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ನೀರು (Water) ಬರುತ್ತಿಲ್ಲ. ಗಾಳಿಗೆ ವಾಟರ್ ಮೀಟರ್ ಮಾತ್ರ ಜೋರಾಗಿ ರನ್ ಆಗ್ತಿದ್ದು, ಬರದ ನೀರಿಗೆ ಪ್ರತಿ ತಿಂಗಳು ಒನ್ ಟು ಡಬಲ್ ಬಿಲ್ ಬರುತ್ತಿದೆ. ಹಾಗಾಗಿ ಬಿಡಬ್ಲ್ಯೂಎಸ್ಎಸ್ಬಿ (BWSSB) ವಿರುದ್ಧ ಏರಿಯಾದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಂಟು ಸಾವಿರ ರೂ ನೀರಿನ ಬಿಲ್
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸಂಜೀವಿನಿ ಏರಿಯಾದಲ್ಲಿ ಸಾವಿರಾರು ಮನೆಗಳಿವೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಸರಿಯಾಗಿ ನೀರು ಬರುತ್ತಿಲ್ಲ. ಆದರೆ ಪ್ರತಿ ತಿಂಗಳು ದುಪ್ಪಟ್ಟು ವಾಟರ್ ಬಿಲ್ ಮಾತ್ರ ಬರುತ್ತಿದೆಯಂತೆ. ಈ ಹಿಂದೆ 700 ರಿಂದ 800 ರೂ ವಾಟರ್ ಬಿಲ್ ಬರುತ್ತಿದ್ದ ಮನೆಗಳಿಗೆ, ಇದೀಗ 3500, ನಾಲ್ಕು ಸಾವಿರ, ಕೆಲವೊಂದು ಮನೆಗೆ ಎಂಟು ಸಾವಿರ ರೂ ಬಿಲ್ ಬರುತ್ತಿದೆ. ಈ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ದೂರು ನೀಡಿದರೂ, ಸರಿ ಮಾಡುತ್ತೇವೆಂದು ಸಮಸ್ಯೆ ಬಗೆಹರಿಸದೆ ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ಮನೆ ಮಾಲೀಕರಾದ ಉಮಾ ಎಂಬುವವರ ಮಾತಾಗಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ 6 ಜಿಲ್ಲೆಗಳಿಗೆ ಮಳೆಯ ರೆಡ್ ಅಲರ್ಟ್, ಉತ್ತರ ಒಳನಾಡಿನಲ್ಲೂ ಮಳೆ ಜೋರು
ಇನ್ನೂ ಈ ಏರಿಯಾದಲ್ಲಿ ಒಂದೋ, ಎರಡೋ ಮನೆಗೆ ಈ ರೀತಿಯ ಒನ್ ಟು ಡಬಲ್ ಬಿಲ್ ಬರುತ್ತಿಲ್ಲ. ನೂರಾರು ಮನೆಗಳಿಗೆ ದುಪ್ಪಟ್ಟು ಬಿಲ್ ಬರುತ್ತಿದೆಯಂತೆ. ನೀರು ಬರದೆ ಇದರೂ ಗಾಳಿಗೆ ವಾಟರ್ ಮೀಟರ್ ತಿರುಗುತಿದೆಯಂತೆ. ನೀರು ಬರುವ ಮುನ್ನ ಮತ್ತು ನೀರು ನಿಂತ ಮೇಲೆ ವಾಟರ್ ಮೀಟರ್ನಲ್ಲಿರುವ ಫ್ಯಾನ್ ಜೋರಾಗಿ ರನ್ ಆಗುತ್ತಿದೆಯಂತೆ. ಹಾಗಾಗಿ ಜಾಸ್ತಿ ಬಿಲ್ ಬರುತ್ತಿದೆ.
ಮೀಟರ್ ರೀಡರ್ ಬಂದಾಗ ನಾವು ಇಷ್ಟೊಂದು ನೀರು ಬಳಕೆ ಮಾಡಿಲ್ಲ ಯಾಕೆ ಇಷ್ಟೊಂದು ಬಿಲ್ ಬರುತ್ತಿದೆ ಎಂದು ಕೇಳಿದರೆ, ನೀವು ನೀರು ಬಳಕೆ ಮಾಡಿರೋದ್ರಿಂದಲೇ ಇಷ್ಟೊಂದು ಮೀಟರ್ ರೀಡಿಂಗ್ ತೋರಿಸುತ್ತಿದೆ ಎನ್ನುತ್ತಿದ್ದಾರಂತೆ. ಸಣ್ಣಪುಟ್ಟ ಮನೆಗೂ ಸಾವಿರಾರು ರೂ ಬಿಲ್ ಬರುತ್ತಿದೆ. ಹಾಗಾಗಿ ನಿವಾಸಿಗಳೆಲ್ಲಾ ಸೇರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಒಟ್ಟಿನಲ್ಲಿ ಕುಡಿಯಲು ನೀರು ಕೊಡದಿದ್ದರೆ, ಈ ಜಲಮಂಡಳಿ ಅಧಿಕಾರಿಗಳು ಕೇವಲ ಗಾಳಿ ಬಿಟ್ಟು ಸಾವಿರಾರು ರೂ ಬಿಲ್ ಹಾಕ್ತಿರೋದಕ್ಕೆ ನಿವಾಸಿಗಳು ಕೆಂಡ ಕಾರುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:56 am, Sun, 15 June 25







