18 ತಿಂಗಳು ಬಳ್ಳಾರಿ ರಸ್ತೆ ಬಂದ್‌: ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಸ್ ಸೇರಿ ಭಾರೀ ವಾಹನಗಳಿಗೆ ನಿರ್ಬಂಧ, ಇಲ್ಲಿವೆ ಪರ್ಯಾಯ ಮಾರ್ಗಗಳು

ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಬಳ್ಳಾರಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಮುಂದಿನ ಒಂದೂವರೆ ವರ್ಷಗಳ ಕಾಲ ಭಾರಿ ಟ್ರಾಫಿಕ್ ಬಿಸಿ ತಟ್ಟಲಿದೆ. ಹೌದು.. ಕಾಮಗಾರಿ ಹಿನ್ನೆಲೆಯಲ್ಲಿ ಮೇಕ್ರಿ ಸರ್ಕಲ್ ನಿಂದ ಹೆಬ್ಬಾಳ ರಸ್ತೆಯಲ್ಲಿ ಎಲ್ಲಾ ಮಾದರಿಯ ಮಾದರಿ ಗೂಡ್ಸ್ ವಾಹನಗಳ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿದೆ. ಇದಕ್ಕೆ ಪಾರ್ಯಾಯ ಮಾರ್ಗದ ವಿವರ ಈ ಕೆಳಗಿನಂತಿದೆ ನೋಡಿ.

18 ತಿಂಗಳು ಬಳ್ಳಾರಿ ರಸ್ತೆ ಬಂದ್‌: ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಸ್ ಸೇರಿ ಭಾರೀ ವಾಹನಗಳಿಗೆ ನಿರ್ಬಂಧ, ಇಲ್ಲಿವೆ ಪರ್ಯಾಯ ಮಾರ್ಗಗಳು
Mekhri Circle To Hebbal Road
Edited By:

Updated on: Nov 05, 2026 | 8:15 PM

ಬೆಂಗಳೂರು, ನವೆಂಬರ್ 05: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗೆ ಬಿಡಿಎ ಎಲಿವೇಟೆಡ್ ಕಾರಿಡಾರ್ ಕಾಮಗಾರಿ ಶುರುವಾಗಲಿದೆ. ಹೀಗಾಗಿ ಬಳ್ಳಾರಿ ರಸ್ತೆಯಲ್ಲಿ ನವೆಂಬರ್ 6 ರಿಂದ ಜಾರಿಗೆ ಬರುವಂತೆ ಒಂದುವರೆ ವರ್ಷ ಕಾಲ ಬಳ್ಳಾರಿ ರಸ್ತೆಯಲ್ಲಿ ಭಾರಿ ಸಂಚಾರ ಮಾರ್ಗ ಬದಲಾವಣೆಗಳನ್ನು ಮಾಡಲಾಗಿದೆ. ಬಳ್ಳಾರಿ ರಸ್ತೆಯ ಯುಎಸ್​ಎ ಕ್ವಾರ್ಟರ್ಸ್​​ ಟು ಹೆಬ್ಬಾಳದಿಂದ ಮೇಖ್ರಿ ಸರ್ಕಲ್​ವರೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಕಾಮಗಾರಿ ಕೈಗೆತ್ತಿಕೊಳ್ಳುವುದರಿಂದ  18 ತಿಂಗಳು ವರೆಗೂ ಕೆಎಸ್ಆರ್​​ಟಿಸಿ, ಖಾಸಗಿ ಬಸ್ ಸೇರಿ ಎಲ್ಲಾ ರೀತಿಯ ಗೂಡ್ಸ್​​ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಬಳ್ಳಾರಿ ರಸ್ತೆಯ ಯುಎಎಸ್ (UAS) ಸ್ಟಾಫ್ ಕ್ವಾರ್ಟರ್ಸ್‌ನಿಂದ ಮೆಖ್ರಿ ಸರ್ಕಲ್‌ವರೆಗೆ ನಾಲ್ಕು ಪಥದ ಎಲಿವೇಟೆಡ್ ಕಾರಿಡಾರ್ ನಿರ್ಮಾಣ ಕಾಮಗಾರಿಯು ಮುಂದಿನ 18 ತಿಂಗಳ ಕಾಲ ನಿರಂತರವಾಗಿ ನಡೆಯಲಿದೆ. ಕಾಮಗಾರಿಯ ಹಿನ್ನೆಲೆಯಲ್ಲಿ ಮೆಖ್ರಿ ಸರ್ಕಲ್‌ನಿಂದ ಹೆಬ್ಬಾಳದವರೆಗಿನ ಪ್ರಮುಖ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತಿದ್ದು, ಕೇವಲ ಸರ್ವಿಸ್ ರಸ್ತೆಯಲ್ಲಿ ಮಾತ್ರವೇ ಸೀಮಿತ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಸರ್ವಿಸ್ ರಸ್ತೆಯಲ್ಲಿ ಭಾರೀ ವಾಹನಗಳಿಗೆ ನಿಷೇಧಿಸಲಾಗಿದೆ. ವಾಹನ ದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ.

Loading...

ಇದನ್ನೂ ಓದಿ: ಲೋಕೋಪಯೋಗಿ ಇಲಾಖೆಯಿಂದ 20,000 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು: ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಅನುಮೋದನೆ

ಪರ್ಯಾಯ ಮಾರ್ಗಗಳು

ಬೆಂಗಳೂರು ವಿಮಾನ ನಿಲ್ದಾಣ, ನಗರದ ಕೇಂದ್ರ ಭಾಗ ಹಾಗೂ ಯಶವಂತಪುರ ಕಡೆಯಿಂದ ಸಂಚರಿಸುವ ವಾಹನ ಸವಾರರಿಗಾಗಿ ಸಂಚಾರಿ ಪೊಲೀಸರು ಬದಲಿ ಮಾರ್ಗಗಳನ್ನು ಅನುಸರಿಸಲು ಸೂಚಿಸಿದ್ದು, ಅದು ಈ ಕೆಳಗಿನಂತಿದೆ.

  • ನಗರದ ಕೇಂದ್ರ ಭಾಗದಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವವರು ಓಲ್ಡ್ ಹೈ ಗ್ರೌಂಡ್ಸ್ ಜಂಕ್ಷನ್ ನಿಂದ ಕಲ್ಪನಾ ಜಂಕ್ಷನ್ ➔ ಓಲ್ಡ್ ಉದಯ ಟಿವಿ ಜಂಕ್ಷನ್ ➔ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ➔ ಟ್ಯಾನರಿ ರಸ್ತೆ ➔ ನಾಗವಾರ ರಸ್ತೆ ಮಾರ್ಗವಾಗಿ ರಿಂಗ್ ರೋಡ್ ತಲುಪಿ ವಿಮಾನ ನಿಲ್ದಾಣಕ್ಕೆ ಸಂಚರಿಸಬೇಕು.
  • ಯಶವಂತಪುರದಿಂದ ವಿಮಾನ ನಿಲ್ದಾಣದ ಕಡೆಗೆ ತೆರಳುವವರು ಮತ್ತಿಕೆರೆ ರಸ್ತೆಯಿಂದ ಬಿಇಎಲ್ (BEL) ವೃತ್ತದಲ್ಲಿ ಬಲಕ್ಕೆ ತಿರುವು ➔ ಹೆಬ್ಬಾಳ/ನಾಗವಾರ ರಿಂಗ್ ರೋಡ್ ಮೂಲಕ ಸಂಚರಿಸಬೇಕು.

ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ ಬರುವವರಿಗೆ

  • ಮಾರ್ಗ 1: ವಿಮಾನ ನಿಲ್ದಾಣದಿಂದ ಬರುವ ವಾಹನಗಳು ಹೆಬ್ಬಾಳದಲ್ಲಿ ಎಡಕ್ಕೆ ತಿರುಗಿ ➔ ನಾಗವಾರ ಜಂಕ್ಷನ್‌ನಲ್ಲಿ ಬಲಕ್ಕೆ ತಿರುವು ➔ ಬಂಬುಬಜಾರ್ ➔ ಕ್ವೀನ್ಸ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.
  • ಮಾರ್ಗ 2: ಹೆಬ್ಬಾಳದಲ್ಲಿ ಬಲಕ್ಕೆ ತಿರುಗಿ ➔ ಹೆಬ್ಬಾಳ್ ರಿಂಗ್ ರಸ್ತೆ ➔ ಕುವೆಂಪು ಸರ್ಕಲ್ ➔ ಗೊರಗುಂಟೆಪಾಳ್ಯ ಜಂಕ್ಷನ್ ➔ ಡಾ. ರಾಜ್‌ಕುಮಾರ್ ರಸ್ತೆ ಮಾರ್ಗವಾಗಿ ನಗರ ಪ್ರವೇಶಿಸಬಹುದು.

ಯಶವಂತಪುರದಿಂದ ನಗರದ ಕೇಂದ್ರ ಭಾಗಕ್ಕೆ ಬರುವ ವಾಹನಗಳಿಗೆ

  • ಯಶವಂತಪುರ ಕಡೆಯಿಂದ ಬರುವ ವಾಹನಗಳು: ಬಿಎಚ್‌ಇಎಲ್ (BHEL) ಜಂಕ್ಷನ್ ➔ ಮಾರಮ್ಮ ಸರ್ಕಲ್ ಬಳಿ ಬಲಕ್ಕೆ ತಿರುವು ➔ ಮಾರ್ಗೋಸಾ ರಸ್ತೆ ಮೂಲಕ ನಗರದ ಕೇಂದ್ರ ಭಾಗವನ್ನು ತಲುಪಬಹುದು.

ಹೆಬ್ಬಾಳದಿಂದ ನಗರದ ಕಡೆಗೆ ಬರುವ ಸಾಮಾನ್ಯ ವಾಹನಗಳಿಗೆ

  • ಹೆಬ್ಬಾಳ ಫ್ಲೈಓವರ್ ಇಳಿದ ಬಳಿಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆಗೆ ತೆರಳಿ ➔ ಸಿಬಿಐ (CBI) ಜಂಕ್ಷನ್ ಮೂಲಕ ಮರಳಿ ಬಳ್ಳಾರಿ ಮುಖ್ಯ ರಸ್ತೆಗೆ ಸಂಪರ್ಕ ಪಡೆಯಬಹುದು.
  • ಹೆಬ್ಬಾಳದಿಂದ ಆನಂದನಗರ, ಆರ್.ಟಿ. ನಗರ ಮತ್ತು ಜಯಮಹಲ್ ಕಡೆಗೆ ತೆರಳುವವರು ಬ್ಯಾಪ್ಟಿಸ್ಟ್ ಆಸ್ಪತ್ರೆ ಮುಂಭಾಗದ ಸರ್ವಿಸ್ ರಸ್ತೆ – ಆನಂದನಗರ ಕ್ರಾಸ್ – ಸಿಬಿಐ ಜಂಕ್ಷನ್ ಮೂಲಕ ಆನಂದನಗರ ಮುಖ್ಯ ರಸ್ತೆ ತಲುಪಬೇಕು.

ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಪೋಲಿಸರ ಮನವಿ

ಮುಂದಿನ 18 ತಿಂಗಳುಗಳ ಕಾಲ ಏರ್‌ಪೋರ್ಟ್ ರಸ್ತೆಯಲ್ಲಿ ಭಾರಿ ಕಾಮಗಾರಿ ನಡೆಯುತ್ತಿರುವುದರಿಂದ, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ನಿಗದಿತ ಸಮಯಕ್ಕಿಂತ ಕನಿಷ್ಠ 1 ರಿಂದ 2 ಗಂಟೆಗಳ ಮುಂಚಿತವಾಗಿ ಹೊರಡುವುದು ಸೂಕ್ತ. ಟ್ರಾಫಿಕ್ ಅಡಚಣೆಯನ್ನು ತಪ್ಪಿಸಲು ಮೇಲೆ ತಿಳಿಸಲಾದ   ಪರ್ಯಾಯ ಮಾರ್ಗಗಳನ್ನೇ ಬಳಸುವಂತೆ ಸಾರ್ವಜನಿಕರಲ್ಲಿ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Thu, 5 November 26

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us