ಲೋಕೋಪಯೋಗಿ ಇಲಾಖೆಯಿಂದ 20,000 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಪುಟ ಅಸ್ತು: ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೂ ಅನುಮೋದನೆ
ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ರೋಬೋಟಿಕ್ ಸರ್ಜರಿ ಉಪಕರಣ ಖರೀದಿ, ಲೋಕೋಪಯೋಗಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳ ಅಡಿ ಒಟ್ಟು 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿ ಮತ್ತು ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಕ್ಯಾಬಿನೆಟ್ ಸಭೆಯ ಪ್ರಮುಖ ನಿರ್ಧಾರಗಳು ಇಲ್ಲಿವೆ.

ಬೆಂಗಳೂರು, ನವೆಂಬರ್ 05: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವೈದ್ಯಕೀಯ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಸಚಿವ ಈಶ್ವರ್ ಖಂಡ್ರೆ, ಲೋಕೋಪಯೋಗಿ ಇಲಾಖೆ ವತಿಯಿಂದ ವಿವಿಧ ಯೋಜನೆಗಳಡಿ ಒಟ್ಟು 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯಲಿವೆ. ರಾಜ್ಯ ಹೆದ್ದಾರಿಗಳು, ಜಿಲ್ಲಾ ಪ್ರಮುಖ ರಸ್ತೆಗಳು ಸೇತುವೆಗಳ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ವತಿಯಿಂದ 10 ಪ್ಯಾಕೇಜ್ಗಳಲ್ಲಿ ಬೆಂಗಳೂರು ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ 3,409.02 ಕೋಟಿ ರೂಪಾಯಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ರೋಬೋಟಿಕ್ ಸರ್ಜರಿ ಉಪಕರಣ ಖರೀದಿ
ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ಹಾಗೂ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗೆ ಒಟ್ಟು 40 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ರೋಬೋಟಿಕ್ ಸರ್ಜರಿ ಉಪಕರಣ ಖರೀದಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿ ಸಂಸ್ಥೆಗೆ ತಲಾ 20 ಕೋಟಿ ರೂಪಾಯಿ ವೆಚ್ಚದಲ್ಲಿ ಉಪಕರಣ ಖರೀದಿ ನಡೆಯಲಿದೆ. ಈ ಪೈಕಿ 5 ಕೋಟಿ ರೂಪಾಯಿ ಆಯಾ ಸಂಸ್ಥೆಗಳ ಆಂತರಿಕ ಸಂಪನ್ಮೂಲದಿಂದ ಮತ್ತು ಉಳಿದ 15 ಕೋಟಿ ರೂಪಾಯಿ ಸರ್ಕಾರದ ಅನುದಾನದ ಮೂಲಕ ಭರಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ: ‘ಎಸ್ಐಆರ್ ಇಲ್ಲದಿದ್ದರೆ ಅವರಪ್ಪನ ಆಣೆ ಬಿಜೆಪಿ ಗೆಲ್ಲಲ್ಲ’: ಮಾಜಿ ಸಿಎಂ ಸಿದ್ದರಾಮಯ್ಯ
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಕೆರೆಯಿಂದ ಹಲಗಲ್ ಲದ್ದಿ ಮದ್ದಿಹಳ್ಳಿ, ಖಂಡೇನಹಳ್ಳಿ, ಬೇತೂರು, ಮತ್ತು ಇತರ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಕಾಮಗಾರಿಯನ್ನು 35 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಚಳ್ಳಕೆರೆ ನಗರಸಭೆ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಸಂಕೀರ್ಣದ ಕಾಮಗಾರಿಯನ್ನು 35.04 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.
ಉಡುಪಿ ಜಿಲ್ಲೆಯ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಬಹುಮಹಡಿ ಪಾರ್ಕಿಂಗ್ ಸೌಲಭ್ಯಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಅನ್ವಯ ಬಂದರಿನಲ್ಲಿ 1,800 ಚದರ ಮೀಟರ್ ವಿಸ್ತೀರ್ಣದ ಜಾಗದಲ್ಲಿ PPP ಮಾದರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಆಗಲಿದೆ. ಒಟ್ಟು 26 ಕೋಟಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳ ಮತ್ತು ಬಳ್ಳಾರಿ ಜಿಲ್ಲೆಯ ಕಂಪ್ಲಿ ಹೋಬಳಿಯ ಹರಳಹಳ್ಳಿಯಲ್ಲಿ ನೂತನ ಕೈಗಾರಿಕಾ ವಸಾಹತುಗಳನ್ನು ನಿರ್ಮಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆಯವ್ಯಯ ಘೋಷಣೆಯಂತೆ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಸಂಪನ್ಮೂಲದಿಂದ ಈ ವಸಾಹತುಗಳ ನಿರ್ಮಾಣ ಕಾರ್ಯ ನಡೆಯಲಿದೆ.
ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕಕ್ಕೆ ಸಂಪುಟ ಅನುಮೋದನೆ
ಸನ್ನತಿ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ 2026ಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಐತಿಹಾಸಿಕ ಹಾಗೂ ಪುರಾತತ್ವ ಮಹತ್ವವುಳ್ಳ ಪ್ರಾಚೀನ ಬೌದ್ಧ ಕೇಂದ್ರವಾಗಿರುವ ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಸನ್ನತಿ ಅಭಿವೃದ್ಧಿಗಾಗಿ ಈ ಪ್ರಾಧಿಕಾರ ರಚಿಸಲಾಗುತ್ತಿದೆ. ದೇಶ ವಿದೇಶಗಳಿಂದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಈ ಕೇಂದ್ರದ ಅಭಿವೃದ್ಧಿಗಾಗಿ ವಿಧೇಯಕ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಸಚಿವ ಖಂಡ್ರೆ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:24 pm, Thu, 5 November 26




