ಬಿಟ್ ಕಾಯಿನ್ ಹಗರಣ ಕೇಸ್: IPS ಅಧಿಕಾರಿ ಸಂದೀಪ್ ಪಾಟೀಲ್ ವಿಚಾರಣೆ ಮಾಡಿದ SIT
ಬಿಟ್ ಕಾಯಿನ್ ಹಗರಣ ರಾಜ್ಯದ ರಾಜಕೀಯದಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅದೆಷ್ಟರ ಮಟ್ಟಿಗೆ ಅಂದರೆ ಇಡೀ ದೇಶದ ಚಿತ್ತ ಕರ್ನಾಟಕದತ್ತ ನೆಟ್ಟಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ರನ್ನು ಇಂದು ಎಸ್ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಸಂದೀಪ್ ಪಾಟೀಲ್ ಸಿಸಿಬಿ ಜಂಟಿ ಆಯುಕ್ತರಾಗಿದ್ದಾಗ ಕೇಸ್ ದಾಖಲಾಗಿತ್ತು.
ಬೆಂಗಳೂರು, ಫೆಬ್ರವರಿ 21: ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ (Sandeep Patil) ರನ್ನು ಇಂದು ಎಸ್ಐಟಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಪ್ರಕರಣ ಸಂಬಂಧ ಅಧಿಕಾರಿಗೆ ಬುಲಾವ್ ಹಿನ್ನೆಲೆ ಇಂದು ಮಧ್ಯಾಹ್ನ 3.30ರ ಸುಮಾರಿಗೆ ವಿಚಾರಣೆಗಾಗಿ ಸಿಐಡಿ ಕಚೇರಿಗೆ ಹಾಜರಾಗಿದ್ದ ಸಂದೀಪ್ ಪಾಟೀಲ್, ಬಿಟ್ ಕಾಯಿನ್ ಹಗರಣ ಕೇಸ್ ಸಂಬಂಧ ಮಾಹಿತಿ ನೀಡಿ ವಾಪಸ್ ತೆರಳಿದ್ದಾರೆ. ಸಂದೀಪ್ ಪಾಟೀಲ್ ಸಿಸಿಬಿ ಜಂಟಿ ಆಯುಕ್ತರಾಗಿದ್ದಾಗ ಕೇಸ್ ದಾಖಲಾಗಿತ್ತು. ಬಿಟ್ ಕಾಯಿನ್ ಪ್ರಕರಣದ ಹೆಚ್ಚಿನ ತನಿಖೆಯನ್ನು ಸಿಐಡಿ ಎಸ್ಐಟಿ ನಡೆಸುತ್ತಿದ್ದು, ತನಿಖೆಯ ಭಾಗವಾಗಿ ಸಂದೀಪ್ ಪಾಟೀಲ್ ವಿಚಾರಣೆಯನ್ನು ಇಂದು ಮಾಡಲಾಗಿದೆ.
ಬಿಟ್ ಕಾಯಿನ್ ಹಗರಣದ ಸಮಯದಲ್ಲಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಸಂದೀಪ್ ಪಾಟೀಲ್ ಪ್ರಕರಣದ ತನಿಖಾಧಿಕಾರಿಯಾಗಿದ್ದರು. ಕೆಲ ಮಾಹಿತಿ ವಿನಿಮಯಕ್ಕೆ SIT ಅಧಿಕಾರಿಗಳು ಕರೆದಿದ್ದರು. ಸದ್ಯ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.
2023ರ ಜುಲೈನಲ್ಲಿ ಕಾಂಗ್ರೆಸ್ ಸರ್ಕಾರ, SIT ರಚನೆ ಮಾಡಿತ್ತು. ಆಗ ಕಾಟನ್ ಪೇಟೆ ಠಾಣೆಯಲ್ಲಿ ಒಂದು ಕೇಸ್ ದಾಖಲು ಮಾಡಿದ್ದರು. ಆರೋಪಿಗಳ ಹೆಸರು ಪ್ರಸ್ತಾಪಿಸದೇ ತನಿಖೆ ಶುರುಮಾಡಿತ್ತು. ಇಷ್ಟೇ ಅಲ್ಲದೇ ಪ್ರಕರಣದಲ್ಲಿ ಸಂತೋಷ್ ಮತ್ತು ಪ್ರಶಾಂತ್ ಬಾಬು ಎನ್ನುವವರನ್ನು ಬಂಧಿಸಲಾಗಿತ್ತು. ಇಬ್ಬರನ್ನ ಜನವರಿ 31ರ ತನಕ SIT ತಮ್ಮ ವಶಕ್ಕೆ ಪಡೆದಿತ್ತು.
ಇದನ್ನೂ ಓದಿ: ಬೈಟ್ಕಾಯಿನ್ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗ್ತಾರೆ; ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್
ಈ ಹಿಂದೆ ಸಿಸಿಬಿ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ಬಂಧಿಸಿದ್ದರು. ಆರೋಪಿ ರಾಜ್ಯ ಸರ್ಕಾರದ ಇ-ಸಂಗ್ರಹಣಾ ಪೋರ್ಟಲ್ (https://eproc.karnataka.gov.in) ಜಾಲತಾಣ ಹ್ಯಾಕ್ ಮಾಡಿ 46 ಕೋಟಿ ರೂ. ದೋಚಿದ್ದ ಸಂಗತಿ ಪತ್ತೆ ಆಗಿತ್ತು.
ಶ್ರೀಕಿ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಸಿದ್ದ ಬಿಟ್ ಕಾಯಿನ್ ಪ್ರಕರಣಗಳು ಹೊರಬಂದಿದ್ದವು. ಆದರೆ, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಿರಲಿಲ್ಲ. ಸಿಸಿಬಿ ಪೊಲೀಸರು ತರಾತುರಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ನಡೆ ಹಲವು ಅನುಮಾನಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ: ಆರೋಪಿಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿದ ಹೈಕೋರ್ಟ್
ಈ ಹಿಂದೆ, SIT ಅಧಿಕಾರಿಗಳು, ಹ್ಯಾಕರ್ ಶ್ರೀಕಿ, ರಾಬಿನ್ ಖಂಡೇವಾಲ ಸೇರಿ 10 ಜನರನ್ನು ವಿಚಾರಣೆ ಮಾಡಿತ್ತು. ಜೊತೆಗೆ ಪೊಲೀಸ್ ಅಧಿಕಾರಿಗಳಾದ DSP ಶ್ರೀಧರ್ ಪೂಜಾರ್, ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು, ಚಂದ್ರಾದರ್, ಲಕ್ಷ್ಮೀಕಾಂತಯ್ಯ, ಸೈಬರ್ ಎಕ್ಸಪರ್ಟ್ ಸಂತೋಸ್ ವಿರುದ್ಧ ಕೇಸ್ ದಾಖಲು ಮಾಡಿತ್ತು. ಹಂತ ಹಂತವಾಗಿ 8 ಕೇಸ್ ಮಾಡಿದ್ದರು.
ಬಂಧಿತ ಆರೋಪಿಗಳು ಬಿಟ್ ಕಾಯಿನ್ ವರ್ಗಾವಣೆ ಮಾಡಿ ಅಕ್ರಮ ಎಸಗಿದ್ದಾರೆ ಅನ್ನೋದು ಗೊತ್ತಾಗಿತ್ತು. ಜೊತೆಗೆ ಲ್ಯಾಪ್ಟಾಪ್ನಲ್ಲಿ ಟೂಲ್ಸ್ ಬಳಸಿ ನಾಶ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. 6 ತಿಂಗಳಲ್ಲಿ ಕೇವಲ 1 ಲಕ್ಷದ 83 ಸಾವಿರ ರೂ. ಮೌಲ್ಯದ ಬಿಟ್ ಕಾಯಿನ್ ಮಾತ್ರ ಪತ್ತೆ ಮಾಡಿತ್ತು. ಈ ನಡುವೆ, ರಾಜಕೀಯ ಪ್ರೇರಿತವಾಗಿ ಪೊಲೀಸ್ ಅಧಿಕಾರಿಗಳನ್ನ ಬಂಧಿಸಲಾಗಿದೆ ಎಂಬ ಚರ್ಚೆಗಳು ಶುರುವಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:32 pm, Wed, 21 February 24