ನೈಸ್ ರೋಡ್ ಟೋಲ್ ದರ ಹೆಚ್ಚಳ ಬೆನ್ನಲ್ಲೇ ಬಿಎಂಟಿಸಿ ಬಸ್ ಟಿಕೆಟ್ ದರವೂ ಏರಿಕೆ ಸಾಧ್ಯತೆ

ಬಿಎಂಟಿಸಿ ಈಗಾಗಲೇ ಡೀಸೆಲ್ ದರ ಏರಿಕೆ ಮತ್ತು ಆರ್ಥಿಕ ಸಂಕಷ್ಟದಿಂದ ಶೇ.44ರಷ್ಟು ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿತ್ತು. ಈಗ ನೈಸ್ ರಸ್ತೆ ಮತ್ತು ನವಯುಗ ಟೋಲ್ ದರ ಹೆಚ್ಚಳವಾಗಿರುವುದರಿಂದ, ಟೋಲ್ ಮೂಲಕ ಸಂಚರಿಸುವ ಬಿಎಂಟಿಸಿ ಬಸ್‌ಗಳ ಟಿಕೆಟ್ ದರವೂ ಏರಿಕೆಯಾಗುವ ಸಾಧ್ಯತೆಯಿದೆ.

ನೈಸ್ ರೋಡ್ ಟೋಲ್ ದರ ಹೆಚ್ಚಳ ಬೆನ್ನಲ್ಲೇ ಬಿಎಂಟಿಸಿ ಬಸ್ ಟಿಕೆಟ್ ದರವೂ ಏರಿಕೆ ಸಾಧ್ಯತೆ
ಬಿಎಂಟಿಸಿ ಬಸ್
Image Credit source: tv9 kannada
Edited By:

Updated on: Jul 02, 2026 | 10:25 PM

ಮುಖ್ಯಾಂಶಗಳು

  • ಇಂದಿನಿಂದ ನೈಸ್ ರೋಡ್ ಟೋಲ್ ದರ ಹೆಚ್ಚಳ
  • ನೆಲಮಂಗಲ ಮತ್ತು ನೈಸ್ ಟೋಲ್ ದರ ಏರಿಕೆ ಎಫೆಕ್ಟ್
  • ಬಿಎಂಟಿಸಿ ಬಸ್ ಟಿಕೆಟ್ ದರ 20 ರಿಂದ 25 ರೂ. ಹೆಚ್ಚಳ ಸಾಧ್ಯತೆ!

ಬೆಂಗಳೂರು, ಜುಲೈ 02: ಡೀಸೆಲ್ ದರ ಏರಿಕೆ ಹಾಗೂ ತೀವ್ರ ಆರ್ಥಿಕ ಸಂಕಷ್ಟ ಹಿನ್ನೆಲೆ ಈಗಾಗಲೇ ಬಿಎಂಟಿಸಿ ಶೇ44% ರಷ್ಟು ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಮನವಿ ಮಾಡಿದೆ. ಈ ಬೆನ್ನಲ್ಲೇ ಇದೀಗ ನೈಸ್ ರೋಡ್ ಮತ್ತು ನವಯುಗ ಟೋಲ್ ದರ ಏರಿಕೆ ಹಿನ್ನೆಲೆ ಈ ಟೋಲ್​ಗಳ ಮೂಲಕ ಸಂಚರಿಸುವ ಬಿಎಂಟಿಸಿ ಬಸ್​​​​ಗಳ ಟಿಕೆಟ್ ದರ ಏರಿಕೆ (BMTC Fare Hike) ಆಗುವ ಸಾಧ್ಯತೆಯಿದೆ. 20 ರಿಂದ 25 ರೂ ಹೆಚ್ಚಳವಾಗಲಿದೆ ಎನ್ನಲಾಗುತ್ತಿದ್ದು, ಇದಕ್ಕೆ ಪ್ರಯಾಣಿಕರು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂದಿನಿಂದ ನೈಸ್ ರೋಡ್ ಟೋಲ್ ದರ ಹೆಚ್ಚಳ

ಈಗಾಗಲೇ ಡೀಸೆಲ್ ದರ ಏರಿಕೆ ಮತ್ತು ಆರ್ಥಿಕ ಸಂಕಷ್ಟ ಹಿನ್ನೆಲೆ ಬಿಎಂಟಿಸಿ ಶೇ44% ರಷ್ಟು ಟಿಕೆಟ್ ದರ ಏರಿಕೆಗೆ ಗ್ರೀನ್ ಸಿಗ್ನಲ್ ನೀಡುವಂತೆ ಕಳೆದ ಬಾರಿಯ ಸಿಎಂ ಸಭೆಯಲ್ಲಿ ಮನವಿ ಮಾಡಿತ್ತು. ಈ ಬಗ್ಗೆ ಇಂದಿನ ಕ್ಯಾಬಿನೆಟ್​ನಲ್ಲೂ ಸಾರಿಗೆ ಸಚಿವರು ಟಿಕೆಟ್ ದರ ಏರಿಕೆಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲೇ ಇಂದಿನಿಂದ ನೈಸ್ ರೋಡ್ ಟೋಲ್ ದರ ಏರಿಕೆ ಆಗಿದೆ.

ಇದನ್ನೂ ಓದಿ: ರಾಜ್ಯ ಸಾರಿಗೆ ನೌಕರರ ವೇತನ ಹೆಚ್ಚಿಸಿ ಸರ್ಕಾರ ಆದೇಶ, ಎಷ್ಟು ಹೆಚ್ಚಳ? ಯಾವಾಗಿನಿಂದ ಜಾರಿಗೆ?

ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಸಂಸ್ಥೆ ಶೇ10% ರಷ್ಟು ಟೋಲ್ ದರ ಏರಿಕೆ ಮಾಡಿದೆ. ನೈಸ್ ಸಂಸ್ಥೆ ಕಳೆದ ವರ್ಷ ಜುಲೈನಲ್ಲಿ ಟೋಲ್ ದರ ಹೆಚ್ಚಳ ಮಾಡಿತ್ತು. ನೈಸ್ ರೋಡ್​ನ ಏಳು ಕಾರಿಡಾರ್ ಟೋಲ್ ದರವನ್ನು ಏರಿಕೆ ಮಾಡಲಾಗಿದೆ. ಮೈಸೂರು ಟು ಮಾಗಡಿ, ಮಾಗಡಿ ರೋಡ್ ಟು ತುಮಕೂರು ರೋಡ್, ಹೊಸೂರು ರೋಡ್ ಟು ಬನ್ನೇರುಘಟ್ಟ ರೋಡ್ ಸೇರಿದಂತೆ ಎಲ್ಲಾ ಟೋಲ್​ಗಳಲ್ಲೂ ದರ ಏರಿಕೆ ಮಾಡಲಾಗಿದೆ.

ವಾಹನ ಸವಾರರು ಆಕ್ರೋಶ

ಈ ಹಿಂದೆ ಮೈಸೂರು ರೋಡ್ ಟು ಮಾಗಡಿ ರೋಡ್ ರೋಡ್​ ಸಂಚಾರ ಮಾಡಲು ಬಸ್​ಗೆ 205 ರೂ ಇತ್ತು. ಇದೀಗ 226 ರೂ ಆಗಲಿದೆ, ಕಾರಿಗೆ 70 ರೂ, ಇದೀಗ 77 ರೂ ಮಾಡಲಾಗಿದೆ. ಈ ಹಿಂದೆ ಟ್ರಕ್ಕಿಗೆ 140 ರೂ ಇತ್ತು, ಇದೀಗ 154 ರೂ ಏರಿಕೆ ಮಾಡಲಾಗಿದೆ. ಇನ್ನು ಈ ಬಗ್ಗೆ ಮಾತನಾಡಿರುವ ವಾಹನ ಸವಾರರು, ಯಾವಾಗಲೂ ಟೋಲ್ ದರ ಏರಿಕೆ ಮಾಡುತ್ತಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

20 ರಿಂದ 25 ರೂ ಬಿಎಂಟಿಸಿ ಬಸ್ ಹೆಚ್ಚಳ?

ಇನ್ನು ನೈಸ್​ ರೋಡ್ ಟೋಲ್ ದರ ಏರಿಕೆ ಬೆನ್ನಲ್ಲೇ ಮಾದಾವರ ಮಾರ್ಗದಲ್ಲಿ ಸಂಚರಿಸುವ ಬಿಎಂಟಿಸಿ ಬಸ್ ದರ ಹೆಚ್ಚಳ ಮಾಡುವ ಸಾಧ್ಯತೆಯಿದೆ. 20 ರಿಂದ 25 ರೂ ಹೆಚ್ಚಳವಾಗಲಿದೆ. ಈಗಾಗಲೇ ನೆಲಮಂಗಲ ಟೋಲ್ ದರವು ಹೆಚ್ಚಳ ಮಾಡಲಾಗಿದೆ ಎನ್ನಲಾಗುತ್ತಿದೆ. ಇದೀಗ ನೈಸ್ ರೋಡ್ ಟೋಲ್ ದರವು ಏರಿಕೆ ಆಗಿದೆ. ಎರಡು ಟೋಲ್ ದರ ಏರಿಕೆ ಹಿನ್ನೆಲೆ, ನೆಲಮಂಗಲ ಮತ್ತು ಮಾದಾವರದಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ ಹೋಗುವ ಬಿಎಂಟಿಸಿ ಬಸ್​ ಟಿಕೆಟ್ ದರ ಏರಿಕೆ ಮಾಡಲು ಮುಂದಾಗಿದೆ. ಇದಕ್ಕೂ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ‌.

ಇದನ್ನೂ ಓದಿ: ಬೆಂಗಳೂರು ಸವಾರರಿಗೆ ಮತ್ತೊಂದು ಬಿಗ್ ಶಾಕ್: ಇಂದಿನಿಂದ ನೈಸ್ ರಸ್ತೆ, ಇ-ಸಿಟಿ ಫ್ಲೈಓವರ್ ಟೋಲ್ ದರ ಭಾರಿ ಏರಿಕೆ

ಒಂದೆಡೆ ಡೀಸೆಲ್ ದರ ಏರಿಕೆಯ ನೆಪವೊಡ್ಡಿ ಇಡೀ ಬೆಂಗಳೂರಿನಾದ್ಯಂತ ಬಿಎಂಟಿಸಿ ಟಿಕೆಟ್ ದರ ಏರಿಕೆಗೆ ಸಾರಿಗೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ, ಇತ್ತ ಪ್ರಮುಖ ಹೆದ್ದಾರಿಗಳ ಟೋಲ್ ದರಗಳೂ ದುಬಾರಿಯಾಗಿವೆ. ಇದು ಮುಂದಿನ ದಿನಗಳಲ್ಲಿ ವಾಹನ ಸವಾರರಿಗೆ ಹಾಗೂ ಬಸ್ ಪ್ರಯಾಣಿಕರಿಗೆ ‘ಡಬಲ್ ಶಾಕ್’ ಉಂಟಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us