ಸಾರಿಗೆ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಎಫೆಕ್ಟ್: ಪ್ರಯಾಣಿಕರ ಅನುಕೂಲಕ್ಕೆ ‘ಸ್ಮಾರ್ಟ್ ಕಾರ್ಡ್’ ತರಲು ಮುಂದಾದ ಬಿಎಂಟಿಸಿ!
ಸಾರಿಗೆ ಸಚಿವ ಭೈರತಿ ಸುರೇಶ್ ನಡೆಸಿದ ದಿಢೀರ್ ರಿಯಾಲಿಟಿ ಚೆಕ್ ಬೆನ್ನಲ್ಲೇ ಬಿಎಂಟಿಸಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಬಸ್‌ಗಳಲ್ಲಿನ ಚಿಲ್ಲರೆ ಕಿರಿಕಿರಿ ಮತ್ತು ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ನೀಡಲು ನಮ್ಮ ಮೆಟ್ರೋ ಮಾದರಿಯಲ್ಲೇ 'ಸ್ಮಾರ್ಟ್ ಕಾರ್ಡ್' ವ್ಯವಸ್ಥೆ ಜಾರಿಗೆ ಬರಲಿದೆ. ಇಂಟರ್ನೆಟ್ ಇಲ್ಲದಿದ್ದರೂ ಇಟಿಎಂ ಯಂತ್ರದ ಮೇಲೆ ಜಸ್ಟ್ ಟ್ಯಾಪ್ ಮಾಡುವ ಮೂಲಕ ತಕ್ಷಣ ಟಿಕೆಟ್ ಪಡೆಯಬಹುದಾಗಿದೆ.

ಮುಖ್ಯಾಂಶಗಳು
- ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಬೆನ್ನಲ್ಲೇ ಬಿಎಂಟಿಸಿ ಅಲರ್ಟ್
- ಚಿಲ್ಲರೆ ಮತ್ತು ನೆಟ್‌ವರ್ಕ್ ಸಮಸ್ಯೆಗೆ ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ಪರಿಹಾರ
- ಇಂಟರ್ನೆಟ್ ಇಲ್ಲದಿದ್ದರೂ ಇಟಿಎಂ ಯಂತ್ರದಲ್ಲಿ ಜಸ್ಟ್ ಟ್ಯಾಪ್ ಮಾಡಿ ಟಿಕೆಟ್ ಪಡೆಯಬಹುದು.
ಬೆಂಗಳೂರು, ಜುಲೈ 17: ಇತ್ತೀಚೆಗಷ್ಟೆ ಸಾರಿಗೆ ಸಚಿವ ಭೈರತಿ ಸುರೇಶ್ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್ನಿಂದ ಕೆಳಗೆ ಇಳಿಸಿದ್ದ ಕಂಡಕ್ಟರ್ನನ್ನು ಅಮಾನತುಗೊಳಿಸಿಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಸಾರಿಗೆ ಸಂಸ್ಥೆಯಾದ ಬಿಎಂಟಿಸಿ (BMTC) ಪ್ರಯಾಣಿಕರು ಚಿಲ್ಲರೆ ಹಣದ ಕಿರಿಕಿರಿ ಹಾಗೂ ನೆಟ್‌ವರ್ಕ್ ಸಮಸ್ಯೆಯಿಂದ ಟಿಕೆಟ್ ಸಿಗದೆ ಪರದಾಡುವುದನ್ನು ನಿಲ್ಲಿಸಲು ನಮ್ಮ ಮೆಟ್ರೋ ಮಾದರಿಯಲ್ಲೇ ಬಿಎಂಟಿಸಿ ಬಸ್‌ಗಳಲ್ಲೂ ಶೀಘ್ರದಲ್ಲೇ ‘ಸ್ಮಾರ್ಟ್ ಕಾರ್ಡ್’ ವ್ಯವಸ್ಥೆಯನ್ನು ಜಾರಿಗೆ ತರಲು ನಿಗಮವು ಗಂಭೀರ ಚಿಂತನೆ ನಡೆಸಿದೆ.
ಸಚಿವರ ರಿಯಾಲಿಟಿ ಚೆಕ್ ಬೆನ್ನಲ್ಲೇ ಬಿಎಂಟಿಸಿ ಅಲರ್ಟ್!
ಕಳೆದ ಶನಿವಾರದಂದು ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಸಾಮಾನ್ಯ ಪ್ರಯಾಣಿಕರಂತೆ ಮುಖಕ್ಕೆ ಮಾಸ್ಕ್ ಧರಿಸಿ ಬೆಂಗಳೂರಿನ ಹೆಬ್ಬಾಳ, ಮಾನ್ಯತಾ ಟೆಕ್ ಪಾರ್ಕ್ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸುಮಾರು 10ಕ್ಕೂ ಹೆಚ್ಚು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದರು. ಈ ವೇಳೆ ಚಿಲ್ಲರೆ ಹಣದ ಸಮಸ್ಯೆಯಿಂದಾಗಿ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸುವುದು ಹಾಗೂ ಕಂಡಕ್ಟರ್‌ಗಳ ಬಳಿ ಒಂದೇ ಎಲೆಕ್ಟ್ರಾನಿಕ್ ಟಿಕೆಟಿಂಗ್ ಮಿಷನ್ (ETM) ಇರುವುದರಿಂದ ಪ್ರತಿಯೊಬ್ಬರಿಗೂ ಟಿಕೆಟ್ ನೀಡಲು ವಿಳಂಬವಾಗುತ್ತಿರುವುದು ಸಚಿವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ, ಬಸ್‌ನಲ್ಲಿ ಒಂದೇ ಇಟಿಎಂ ಮಿಷನ್ ಇರುವುದರಿಂದ ಟಿಕೆಟ್ ವಿತರಣೆ ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಚಿಲ್ಲರೆ ಸಮಸ್ಯೆಗೆ ಮುಕ್ತಿ ನೀಡಲು ಶೀಘ್ರದಲ್ಲೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು ಎಂದು ತಿಳಿಸಿದ್ದಾರೆ.
ಇಂಟರ್ನೆಟ್ ಇಲ್ಲದಿದ್ದರೂ ಕೆಲಸ ಮಾಡಲಿದೆ ‘ಸ್ಮಾರ್ಟ್ ಕಾರ್ಡ್’
ಮೆಟ್ರೋ ಕಾರ್ಡ್ ಮಾದರಿಯಲ್ಲೇ ಈ ಸ್ಮಾರ್ಟ್ ಕಾರ್ಡ್ ಕೆಲಸ ಮಾಡಲಿದ್ದು, ಪ್ರಯಾಣಿಕರು ಮೊದಲಿಗೆ ಇದನ್ನು ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಬಸ್ ಹತ್ತಿದ ಬಳಿಕ ಕಂಡಕ್ಟರ್ ಬಳಿ ಹೋಗಬೇಕಾಗುವ ಮಾರ್ಗವನ್ನು ತಿಳಿಸಿದರೆ, ಕಂಡಕ್ಟರ್ ತಮ್ಮ ಇಟಿಎಂ ಮಿಷನ್‌ನಲ್ಲಿ ಅದನ್ನು ನಮೂದಿಸುತ್ತಾರೆ. ನಂತರ ಪ್ರಯಾಣಿಕರು ತಮ್ಮ ಸ್ಮಾರ್ಟ್ ಕಾರ್ಡ್ ಅನ್ನು ಇಟಿಎಂ ಯಂತ್ರದ ಮೇಲೆ ಕೇವಲ ಟ್ಯಾಪ್ ಮಾಡಿದರೆ ಸಾಕು, ತಕ್ಷಣವೇ ಹಣ ಕಡಿತಗೊಂಡು ಟಿಕೆಟ್ ಕೈಸೇರುತ್ತದೆ.
ಇದನ್ನೂ ಓದಿ ಸಚಿವ ಭೈರತಿ ಸುರೇಶ್ ರಿಯಾಲಿಟಿ ಚೆಕ್ ಬೆನ್ನಲ್ಲೇ ಚಾಲಕ-ನಿರ್ವಾಹಕರಿಗೆ ಬಿಎಂಟಿಸಿಯಿಂದ ಖಡಕ್ ಸೂಚನೆ
ಈ ತಂತ್ರಜ್ಞಾನಕ್ಕೆ ಯಾವುದೇ ಇಂಟರ್ನೆಟ್ ಅಥವಾ ನೆಟ್‌ವರ್ಕ್ ಅಗತ್ಯವಿಲ್ಲದ ಕಾರಣ ಸಿಗ್ನಲ್ ಇಲ್ಲದ ಪ್ರದೇಶಗಳಲ್ಲೂ ಇದು ಸರಾಗವಾಗಿ ಕಾರ್ಯನಿರ್ವಹಿಸಲಿದೆ. ಆನ್‌ಲೈನ್ ಯುಪಿಐ ಪಾವತಿಗೆ ತಗಲುವ ಸಮಯವೂ ಇದರಿಂದ ಉಳಿತಾಯವಾಗಲಿದೆ. ಈ ನೂತನ ಸ್ಮಾರ್ಟ್ ಕಾರ್ಡ್ ಜಾರಿಯ ನಿರ್ಧಾರಕ್ಕೆ ಬಿಎಂಟಿಸಿ ನಿತ್ಯ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು, ನಿತ್ಯದ ಜಂಜಾಟಕ್ಕೆ ಶೀಘ್ರವೇ ಮುಕ್ತಿ ಸಿಗಲೆಂದು ಆಶಿಸಿದ್ದಾರೆ. ಒಟ್ಟಿನಲ್ಲಿ ಸಚಿವರ ರಿಯಾಲಿಟಿ ಚೆಕ್ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡಿಜಿಟಲ್ ಪಾವತಿಯ ಹೊಸ ಆಯಾಮಕ್ಕೆ ಬಿಎಂಟಿಸಿ ಸಜ್ಜಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




