
ಬೆಂಗಳೂರು, ಅಕ್ಟೋಬರ್ 12: ನಗರದಲ್ಲಿ ಶೀಘ್ರದಲ್ಲೇ ಲೋಕಾರ್ಪಣೆಯಾಗಲಿರುವ ಪಿಂಕ್ ಲೈನ್ ಮೆಟ್ರೋ ನಿಲ್ದಾಣಗಳಿಗೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಮತ್ತಷ್ಟು ಸುಲಭಗೊಳಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹತ್ವದ ಯೋಜನೆ ರೂಪಿಸಿದೆ. ಪ್ರಯಾಣಿಕರ ಕೊನೆಯ ಮೈಲಿ ಸಂಪರ್ಕವನ್ನು ಅತ್ಯಂತ ಸರಾಗಗೊಳಿಸುವ ನಿಟ್ಟಿನಲ್ಲಿ, ಪಿಂಕ್ ಲೈನ್‌ನ ಪ್ರಮುಖ 5 ಮೆಟ್ರೋ ನಿಲ್ದಾಣಗಳನ್ನು ಜೋಡಿಸುವ ಸಲುವಾಗಿ ಪ್ರತ್ಯೇಕವಾಗಿ 30 ಡೆಡಿಕೇಟೆಡ್ ಫೀಡರ್ ಬಸ್ ಸೇವೆಗಳನ್ನು ಆರಂಭಿಸಲು ಬಿಎಂಟಿಸಿ ಮುಂದಾಗಿದೆ.
ಈ ಹೊಸ ಯೋಜನೆಯಡಿ ಹುಳಿಮಾವು, ತಾವರೆಕೆರೆ, ಜಯದೇವ ಆಸ್ಪತ್ರೆ ಹಾಗೂ ಜೆ.ಪಿ. ನಗರ 4ನೇ ಹಂತ ಸೇರಿದಂತೆ ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಸುತ್ತಮುತ್ತಲಿನ ವಸತಿ ಪ್ರದೇಶಗಳು ಮತ್ತು ಪ್ರಮುಖ ಕೇಂದ್ರಗಳೊಂದಿಗೆ ಸಂಪರ್ಕಿಸಲು ಒಟ್ಟು 5 ಹೊಸ ಫೀಡರ್ ಮಾರ್ಗಗಳನ್ನು ಪ್ರಸ್ತಾಪಿಸಲಾಗಿದೆ. ಪ್ರತಿದಿನ ಸುಮಾರು 415 ಟ್ರಿಪ್‌ಗಳನ್ನು ಕಾರ್ಯಾಚರಣೆಗೊಳಿಸಲು ನಿರ್ಧರಿಸಲಾಗಿದ್ದು, ದಟ್ಟಣೆಯ ಅವಧಿಯಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಪ್ರಯಾಣಿಕರಿಗೆ ಬಸ್ ಸೌಲಭ್ಯ ಲಭ್ಯವಿರಲಿದೆ. ಕಿರಿದಾದ ರಸ್ತೆಗಳಲ್ಲೂ ಸುಲಭವಾಗಿ ಸಂಚರಿಸಲು ಅನುಕೂಲವಾಗುವಂತೆ ಕಾಂಪ್ಯಾಕ್ಟ್ ಗಾತ್ರದ ಮಿನಿ ಬಸ್‌ಗಳನ್ನು ನಿಯೋಜಿಸಲು ಚಿಂತಿಸಲಾಗಿದೆ.
ಇದನ್ನೂ ಓದಿ ನಮ್ಮ ಮೆಟ್ರೋ ಪಿಂಕ್ ಲೈನ್‌ನ ಸಿಎಂಆರ್ಎಸ್ ಪರಿಶೀಲನೆ ಪೂರ್ಣ: 7.5 ಕಿ.ಮೀ ಎಲಿವೇಟೆಡ್ ಮಾರ್ಗದಲ್ಲಿ ತಪಾಸಣೆ
ಜೊತೆಗೆ, ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ ಹಾಗೂ ಬಿಎಂಟಿಸಿ ಜಂಟಿಯಾಗಿ ಎಪಿಐ ಆಧಾರಿತ ರಿಯಲ್ ಟೈಮ್ ಬಸ್ ಆಗಮನದ ಮಾಹಿತಿ ವ್ಯವಸ್ಥೆಯನ್ನು ಪಿಂಕ್ ಲೈನ್ ನಿಲ್ದಾಣಗಳಲ್ಲಿ ಪ್ರದರ್ಶಿಸಲು ಯೋಜನೆ ರೂಪಿಸುತ್ತಿವೆ. ಇದರಿಂದ ಮೆಟ್ರೋದಿಂದ ಇಳಿಯುವ ಪ್ರಯಾಣಿಕರು ತಕ್ಷಣವೇ ಫೀಡರ್ ಬಸ್ ಸಮಯವನ್ನು ತಿಳಿದುಕೊಂಡು ತಮ್ಮ ಮುಂದಿನ ಪ್ರಯಾಣವನ್ನು ಸುಲಭವಾಗಿ ಯೋಜಿಸಬಹುದಾಗಿದೆ. ಈಗಾಗಲೇ ಗ್ರೀನ್, ಪರ್ಪಲ್ ಹಾಗೂ ಎಲ್ಲೋ ಲೈನ್ ಮೆಟ್ರೋ ಮಾರ್ಗಗಳಲ್ಲೂ ಫೀಡರ್ ಬಸ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಪಿಂಕ್ ಲೈನ್ ಆರಂಭದೊಂದಿಗೆ ಸಾರ್ವಜನಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Mon, 12 October 26