ಬೆಂಗಳೂರು, (ಅಕ್ಟೋಬರ್ 22): ಕೆಂಗೇರಿ ಕೆರೆಗೆ ಬಿದ್ದು ನಾಪತ್ತೆಯಾಗಿದ್ದ ಅಣ್ಣ-ತಂಗಿಯ ಮೃತದೇಹಗಳು ಪತ್ತೆಯಾಗಿವೆ. ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳು ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆ ನೀರು ತರಲು ಹೋಗಿದ್ದರು. ಆ ವೇಳೆ ಅಣ್ಣ ಶ್ರೀನಿವಾಸ್ (13) ತಂಗಿ ಮಹಾಲಕ್ಷ್ಮೀ (11) ಕೆರೆಗೆ ಬಿದ್ದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಇಂದು(ಅಕ್ಟೋಬರ್ 22) ಬೆಳಗ್ಗೆಯಿಂದಲೇ ರಬ್ಬರ್ ಬೋಟ್ ಮೂಲಕ ಶೋಧ ಕಾರ್ಯ ನಡೆಸಿದ್ದು, ಮೊದಲಿಗೆ ಅಣ್ಣ ಶ್ರೀನಿವಾಸ್ ಮೃತದೇಹ ಸಿಕ್ಕಿದೆ. ಇದೀಗ ಮಹಾಲಕ್ಷ್ಮೀ ಮೃತದೇಹ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳಾದ ಶ್ರೀನಿವಾಸ್ ಮತ್ತು ಲಕ್ಷ್ಮೀ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆಗೆ (Lake) ನೀರು ತರಲು ಹೋಗಿದ್ದರು. ನೀರು ತರಲು ಹೋದವರು ಕೆರೆ ಬಳಿ ಆಟವಾಡುತ್ತಿದ್ದರು. ಆಟವಾಡುತ್ತಾ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿತ್ತು. ಕೆರೆಯ ದಂಡೆ ಮೇಲೆ ಮಕ್ಕಳ ಬಟ್ಟೆ ಮತ್ತು ಬಿಂದಿಗೆ ಪತ್ತೆಯಾಗಿತ್ತು. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೋಲಿಸರು ದೌಡಾಯಿಸಿದ್ದು, ಶೋಧಕಾರ್ಯ ನಡೆಸಿದ್ದರು.
ಇದನ್ನೂ ಓದಿ: ಬೆಂಗಳೂರು: ಆಟವಾಡುತ್ತ ಆಯತಪ್ಪಿ ಕೆಂಗೇರಿ ಕೆರೆಯಲ್ಲಿ ಬಿದ್ದ ಅಣ್ಣ-ತಂಗಿ?
ನಾಗಮ್ಮ ಬಿಬಿಎಂಪಿಯಲ್ಲಿ ಕಸ ವಿಂಗಡಣೆ ಕೆಲಸ ಮಾಡುತ್ತಿದ್ದಾರೆ. ನಾಗಮ್ಮ ತನ್ನ ಇಬ್ಬರು ಮಕ್ಕಳು ಮತ್ತು ಸಹೋದರಿ ಧನಲಕ್ಷ್ಮೀ ಜೊತೆಗೆ ವಾಸವಾಗಿದ್ದಾರೆ. ಇದೀಗ ತನ್ನಿಬ್ಬರು ಮಕ್ಕಳನ್ನು ಕಳೆದುಕೊಂಡಿರುವ ನಾಗಮ್ಮನ ರೋಧನೆ ಮುಗಿಲು ಮುಟ್ಟಿದ್ದು, , ನೆರೆದಿದ್ದ ಜನರ ಕಣ್ಣಾಲಿಗಳಲ್ಲಿ ನೀರು ತರಿಸಿತು.
ಜ್ಞಾನಭಾರತಿ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಕೆಂಗೇರಿ ಪೊಲೀಸ್ ಸಿಬ್ಬಂದಿ, ಸಿವಿಲ್ ಡಿಫೆನ್ಸ್ ಸೇರಿದಂತೆ ಸುಮಾರು 15 ಜನರ ತಂಡ ಶೋಧ ಕಾರ್ಯ ನಡೆಸಿ ಎರಡು ಮೃತದೇಹಗಳನ್ನು ಪತ್ತೆ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ