
ಬೆಂಗಳೂರು, ಜುಲೈ 03: ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಹೋಗಿ ಪರಿಶೀಲನೆ ನಡೆಸುವ ಬದಲು, ರಾಮನಗರದ ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದು ನಿನ್ನೆಯಷ್ಟೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕೂಡ ಇಂತಹುದ್ದೇ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡಲಾಗುತ್ತಿದೆ ಎಂದವರು ದೂರಿದ್ದಾರೆ.
ಆಗಸ್ಟ್ ತಿಂಗಳಿನಲ್ಲಿ ಮುಂಗಾರು ಅಧಿವೇಶನ ಮಾಡುತ್ತಾರಂತೆ. ಆದರೆ ಅಧಿವೇಶನ ಮುಂದೂಡಲು ಎಸ್ಐಆರ್ ಕಾರಣ ಅಲ್ಲ. ರೇಟ್ ಫಿಕ್ಸ್ ಆಗದೆ ಸಂಪುಟ ವಿಸ್ತರಣೆ ಡೇಟ್ ಫಿಕ್ಸ್ ಆಗುತ್ತಿಲ್ಲ. ಶಾಸಕರು ಏನು ಮನೆ ಮನೆಗೆ ಹೋಗಿ ಎಸ್ಐಆರ್ ಮಾಡುತ್ತಿದ್ದಾರಾ? ಬದಲಾಗಿ ಕಾಂಗ್ರೆಸ್ ಶಾಸಕರು ಬಿಎಲ್ಒಗಳನ್ನು ದುರ್ಬಳಕೆ ಮಾಡಿಕೊಳ್ತಿದ್ದಾರೆ. ಜಯನಗರದಲ್ಲಿ ಮಸೀದಿ ಒಳಗೆ ಎಸ್ಐಆರ್ ಮಾಡುತ್ತಿದ್ದಾರೆ. ಹಿಂದೂಗಳು ಮಸೀದಿ ಒಳಗೆ ಹೋಗಲು ಸಾಧ್ಯವಾಗದ ರೀತಿ ಆಗಿದೆ. ರಾಜ್ಯ ಸರ್ಕಾರ ಇಲ್ಲಿ ಷಡ್ಯಂತ್ರ ಮಾಡುತ್ತಿದೆ ಎಂದವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ, ಬಾಂಗ್ಲಾದೇಶದಿಂದ ಬಂದವರ ಪೋಷಣೆ; ಕುಮಾರಸ್ವಾಮಿ ಗಂಭೀರ ಆರೋಪ
ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಕೂಡ ನಿನ್ನೆ (ಜುಲೈ 02) ಆಕ್ಷೇಪ ತೆಗೆದಿದ್ದರು. ಕಾಂಗ್ರೆಸ್ ಸರ್ಕಾರ ಚುನಾವಣಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಅಕ್ರಮಗಳಿಗೆ ಪ್ರೇರಣೆ ನೀಡುತ್ತಿದೆ ಎಂದವರು ಗಂಭೀರ ಆರೋಪ ಮಾಡಿದ್ದರು. ಬಾಂಗ್ಲಾದೇಶದಿಂದ ಬಂದವರನ್ನು ಪೋಷಿಸಿ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ರಾಮನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಇಂತಹ ಅಕ್ರಮ ಮತದಾರರಿದ್ದು, ಕಳ್ಳ ಮತದಾರರನ್ನು ಅರ್ಹರನ್ನಾಗಿ ಪರಿವರ್ತಿಸಲು ಯತ್ನಿಸಲಾಗುತ್ತಿದೆ. ಚೌಲ್ಟ್ರಿಗಳಲ್ಲಿ ಜನರನ್ನು ಕೂರಿಸಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂದವರು ಹೇಳಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.