ಕರವೇ ಅಭಿಯಾನಕ್ಕೆ ವಿಜಯೇಂದ್ರ ಬೆಂಬಲ: ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಹೇಳಿಕೆ ಬಗ್ಗೆಯೂ ಕಿಡಿ

ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಕುರಿತಾದ ಕರವೇ ಅಭಿಯಾನಕ್ಕೆ ಬೆಂಬಲ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕನ್ನಡಿಗರನ್ನು ವ್ಯಂಗ್ಯ ಮಾಡಿದ ತಮಿಳುನಾಡು ಕೇಡರ್ ಐಪಿಎಸ್ ಅಧಿಕಾರಿ ಧನುಷ್ ಕುಮಾರ್ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ. ಮತ್ತೊಂದೆಡೆ ತಮ್ಮ ಹೇಳಿಕೆಗೆ ಧನುಷ್​​ ಕುಮಾರ್​​ ಸ್ಪಷ್ಟನೆ ನೀಡಿದ್ದು, ನನ್ನ ಜನ್ಮಭೂಮಿ ಕರ್ನಾಟಕ. ಕರ್ಮಭೂಮಿ ತಮಿಳುನಾಡು. ಆದರೆ ನನ್ನ ಉಸಿರಿನಲ್ಲಿ ಎಂದೆಂದಿಗೂ ಕನ್ನಡವೇ ಇದೆ ಎಂದಿದ್ದಾರೆ.

ಕರವೇ ಅಭಿಯಾನಕ್ಕೆ ವಿಜಯೇಂದ್ರ ಬೆಂಬಲ: ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಹೇಳಿಕೆ ಬಗ್ಗೆಯೂ ಕಿಡಿ
ಕರವೇ ಅಭಿಯಾನಕ್ಕೆ ವಿಜಯೇಂದ್ರ ಬೆಂಬಲ
Edited By:

Updated on: Nov 04, 2026 | 7:52 PM

ಬೆಂಗಳೂರು, ನವೆಂಬರ್​​ 04: ಐಟಿ-ಬಿಟಿ ಕಂಪನಿಗಳಿಗೆ ತೆರಳಿ ಕನ್ನಡಿಗ ಉದ್ಯೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ಕರವೇ ಅಭಿಯಾನಕ್ಕೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಬೆಂಬಲ ಸೂಚಿಸಿದ್ದಾರೆ. ಕನ್ನಡ, ಕನ್ನಡಿಗ ಹಾಗೂ ಕರ್ನಾಟಕವನ್ನು ಹೀಯಾಳಿಸುವ ಪರಿಯಲ್ಲಿ ವ್ಯಂಗ ಮಾಡಿರುವ ತಮಿಳುನಾಡು ಮೂಲದ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಉದ್ಧಟತನದ ಪರಮಾವಧಿ. ಕನ್ನಡಿಗರು ಸೌಹಾರ್ದತೆ, ಬಾಂಧವ್ಯ ಬೆಸೆಯುವ ಸಂಸ್ಕೃತಿಗೆ ಹೆಸರಾದ ಶ್ರೀಮಂತ ಪರಂಪರೆ ಹೊಂದಿರುವ ಹೆಮ್ಮೆಯ ಭಾರತೀಯರಾಗಿದ್ದಾರೆ. ನಾಡು, ನುಡಿ, ಜನ ಹಾಗೂ ಜಲ ಸಂರಕ್ಷಣೆಯ ಪ್ರಶ್ನೆ ಬಂದಾಗ ಸ್ವಾಭಿಮಾನದಿಂದ ಧ್ವನಿ ಎತ್ತುತ್ತಾರೆ ಎಂದವರು ತಿಳಿಸಿದ್ದಾರೆ.

‘ಕೂಡಲೇ ಕರ್ನಾಟಕದ ಜನತೆಯ ಕ್ಷಮೆಯಾಚಿಸಲಿ’

ಕರ್ನಾಟಕದ ನೆಲ, ಜಲ ಹಾಗೂ ಇತರ ಮೂಲಭೂತ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮ‌ ಸ್ಥಾಪನೆ ಮಾಡಿ ಆದಾಯ ಗಳಿಸುವ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವಂತೆ ಹೋರಾಟ ನಡೆಸುವ ಕನ್ನಡ ಪರ ಸಂಘಟನೆಗಳ ಕಾಳಜಿಯನ್ನು ವ್ಯಂಗ್ಯ ಮಾಡಿದರೆ, ಅದು ಅವರ ಅಸಹಿಷ್ಣುತೆಯನ್ನು ಸಂಕೇತಿಸುತ್ತದೆ. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಅಧಿಕಾರಿಯೊಬ್ಬರು ಕನ್ನಡಿಗರನ್ನು ಕೆಣಕುವ ಕುಚೋದ್ಯದ ಪೋಸ್ಟ್ ಮಾಡಿರುವುದು ಇವರ ಸಂಕುಚಿತ ಮನೋಭಾವವನ್ನು ಸಾಕ್ಷೀಕರಿಸುತ್ತದೆ. ತಮಿಳುನಾಡಿನಲ್ಲಿ ತಮಿಳು- ತಮಿಳಿಗ ಹೇಗೆ ಆದ್ಯತೆಯೋ, ಕರ್ನಾಟಕದಲ್ಲಿ ಕನ್ನಡ- ಕನ್ನಡಿಗನೂ ಆದ್ಯತೆಯಾಗುವುದು ಸಹಜ. ಬಿ.ಎಸ್. ಧನುಷ್ ಕುಮಾರ್ ಅವರ ನಡೆ ಭಾಷಾ ಸಹೋದರತ್ವ ಹಾಗೂ ಬಾಂಧವ್ಯದಲ್ಲಿ ಬಿರುಕು ಮೂಡಿಸುವ ವಿಕೃತ ಮನೋಭಾವವನ್ನು ತೋರಿಸುತ್ತಿದೆ. ಕನ್ನಡಿಗರ ಶಕ್ತಿ ಹಾಗೂ ಪ್ರತಿಭಾ ಸಾಮರ್ಥ್ಯವನ್ನು ಅಪಮಾನಿಸಿರುವ ಐಪಿಎಸ್ ಅಧಿಕಾರಿ ಕೂಡಲೇ ಕರ್ನಾಟಕದ ಜನತೆಯ ಕ್ಷಮೆಯಾಚಿಸಲಿ. ತಮಿಳುನಾಡು ಸರ್ಕಾರ ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲಿ ಎಂದವರು ಆಗ್ರಹಿಸಿದ್ದಾರೆ.

Loading...

ಇದನ್ನೂ ಓದಿ: ‘ಮೋಹನ ದಾಸ್ ಪೈ ಕರ್ನಾಟಕದಲ್ಲಿರುವ ಶಕುನಿಯಂತೆ’: ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿ

‘ನನ್ನ ಉಸಿರಿನಲ್ಲಿ ಎಂದೆಂದಿಗೂ ಕನ್ನಡವೇ ಇದೆ’

ಉದ್ಯೋಗಿಗಳ ಕೆಲಸಕ್ಕೆ ಅಡ್ಡಿಪಡಿಸುತ್ತಿರುವವರು ನಿರುದ್ಯೋಗಿಗಳು ಎಂದು ಕರವೇ ಅಭಿಯಾನದ ಕುರಿತು ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಐಪಿಎಸ್​ ಅಧಿಕಾರಿ ಧನುಷ್​ ಕುಮಾರ್​, ನನ್ನ ಜನ್ಮಭೂಮಿ ಕರ್ನಾಟಕ. ಕರ್ಮಭೂಮಿ ತಮಿಳುನಾಡು. ಆದರೆ ನನ್ನ ಉಸಿರಿನಲ್ಲಿ ಎಂದೆಂದಿಗೂ ಕನ್ನಡವೇ ಇದೆ. ಕನ್ನಡ, ಕನ್ನಡಿಗರು, ಬೆಂಗಳೂರಿನ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬಾರದು. ಆ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್​ ಮಾಡಿದ್ದೆ. ಕನ್ನಡ ಸಾಹಿತ್ಯ ಮೂಲಕ UPSC ಪರೀಕ್ಷೆಯಲ್ಲಿ 501ನೇ ರ‍್ಯಾಂಕ್ ಪಡೆದು ಐಪಿಎಸ್​ ಅಧಿಕಾರಿಯಾದ ಹೆಮ್ಮೆ ನನ್ನದು. ನನ್ನ ಮನೆಯಲ್ಲಿರುವ ಏಕೈಕ ಫೋಟೋ ಡಾ.ರಾಜ್‌ಕುಮಾರ್ ಅವರದ್ದು. ನನ್ನ ಕನ್ನಡ ಪ್ರೀತಿ ಯಾರ ವಿರುದ್ಧವೂ ಅಲ್ಲ, ಕನ್ನಡವೇ ನನ್ನ ಅಸ್ಮಿತೆ ಎಂದವರು ಸ್ಪಷ್ಟನೆ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us