‘ಮೋಹನ ದಾಸ್ ಪೈ ಕರ್ನಾಟಕದಲ್ಲಿರುವ ಶಕುನಿಯಂತೆ’: ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿ
ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗ ಪ್ರಮಾಣದ ಮಾಹಿತಿ ನೀಡಲು ಕಂಪನಿಗಳಿಗೆ 1 ವಾರದ ಗಡುವು ನೀಡಲಾಗಿದೆ ಎಂದು ತಿಳಿಸಿರುವ ಕರವೇ ಅಧ್ಯಕ್ಷ ಟಿ.ಎ. ನಾರಾಯಣಗೌಡ, ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ಬಗ್ಗೆ ಕರವೇ ಮುಖಂಡರು ಭೇಟಿ ನೀಡಿ ಮಾಹಿತಿ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಕ್ರಮಕೈಗೊಳ್ಳುವಂತೆ ಸಿಎಂಗೆ ಆಗ್ರಹಿಸಿದ್ದ ಉದ್ಯಮಿ ಮೋಹನ ದಾಸ್ ಪೈ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, ನವೆಂಬರ್ 03: ಮೋಹನ ದಾಸ್ ಪೈ ಸುಮ್ಮನಿರಲ್ಲ ಅಂದ್ರೆ ತಕ್ಕ ಪಾಠ ಕಲಿಸಬೇಕಾಗುತ್ತೆ. ಕರ್ನಾಟಕದಲ್ಲಿದ್ದು ಕನ್ನಡಿಗರನ್ನು ಹಾಳುಮಾಡುವ ಕೆಲಸ ಮಾಡುತ್ತಿದ್ದಾರೆ. ಅವರು ಕರ್ನಾಟಕದಲ್ಲಿ ಇರುವ ಶಕುನಿ ರೀತಿ ಆಗಿದ್ದಾರೆ ಎಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆರೋಪಿಸಿದ್ದಾರೆ. ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗದ ಬಗ್ಗೆ ಕರವೇ ಮುಖಂಡರು ಭೇಟಿ ನೀಡಿ ಮಾಹಿತಿ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಕ್ರಮಕೈಗೊಳ್ಳುವಂತೆ ಸಿಎಂಗೆ ಆಗ್ರಹಿಸಿದ್ದ ಉದ್ಯಮಿ ಮೋಹನ ದಾಸ್ ಪೈ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕರವೇ ಕಾರ್ಯಕರ್ತರು ಶಿಸ್ತಿನಿಂದ ಮಾಹಿತಿ ಪಡೆದು ಬರುತ್ತಿದ್ದಾರೆ ಅಷ್ಟೇ. ಕನ್ನಡಿಗರಿಗೆ ಉದ್ಯೋಗದ ವಿಚಾರ ಪ್ರಸ್ತಾಪಿಸಿದರೆಕ್ಯಾತೆ ತೆಗೆಯುವ ಉದ್ಯಮಿ ಮೋಹನ ದಾಸ್ ಪೈ ಕರ್ನಾಟಕದಲ್ಲಿ ಇರಲು ಯೋಗ್ಯರಲ್ಲ. ಅವರು ಕೂಡಲೇ ಕರ್ನಾಟಕ ಬಿಟ್ಟು ಹೋಗಬೇಕು ಎಂದು ಆಗ್ರಹಿಸಿದ್ದಾರೆ. ತಮಿಳುನಾಡಿನ IPS ಅಧಿಕಾರಿ ಧನುಷ್ ಕುಮಾರ್ ಹೇಳಿಕೆ ವಿರುದ್ಧವೂ ಗರಂ ಆದ ನಾರಾಯಣಗೌಡ, ಚಾಳಿ ಮುಂದುವರಿಸಿದರೆ ತಕ್ಕ ಪಾಠ ಕಲಿಸ್ತೇವೆ ಎಂದು ಎಚ್ಚರಿಸಿದ್ದಾರೆ.
‘ಉದ್ಯೋಗಿಗಳ ಬಗ್ಗೆ ಮಾಹಿತಿ ನೀಡಲು ವಾರದ ಗಡುವು’
ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ ಕೇಳಿಬಂದ ಬೆನ್ನಲ್ಲೇ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಲ್ಲಿ ಮಾಹಿತಿ ಸಂಗ್ರಹ ಅಭಿಯಾನ ಆರಂಭಿಸಿದ್ದು,ತಮ್ಮ ಕಂಪನಿಗಳಲ್ಲಿ ಎಷ್ಟು ಕನ್ನಡಿಗರಿಗೆ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆ ದಾಖಲೆ ಸಮೇತ ಮಾಹಿತಿ ನೀಡುವಂತೆ ಕಂಪನಿಗಳಿಗೆ ಒಂದು ವಾರದ ಗಡುವು ನೀಡಲಾಗಿದೆ. ಎಲ್ಲಾ ಐಟಿ-ಬಿಟಿ ಕಂಪನಿಗಳು ನೀಡುವ ಮಾಹಿತಿ ಆಧರಿಸಿ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ವರದಿ ಸಲ್ಲಿಸಲಿದೆ ಎಂದು ಎಂದು ನಾರಾಯಣಗೌಡ ತಿಳಿಸಿದ್ದಾರೆ..
ಇದನ್ನೂ ಓದಿ: ಕರವೇ ಅಭಿಯಾನ ಟೀಕಿಸಿದ ತಮಿಳುನಾಡು ಐಪಿಎಸ್ ಅಧಿಕಾರಿ: ಎಸಿಪಿ ಹೇಳಿಕೆಗೆ ಕನ್ನಡಿಗರು ಕೆಂಡ
‘ಇನ್ಫೋಸಿಸ್ನಲ್ಲಿ ಮಾತ್ರ ಕನ್ನಡಿಗರಿಗೆ ಶೇ.60ರಷ್ಟು ಉದ್ಯೋಗ’
ಅದಾಗಲೇ ಕರವೇ 112 ಐಟಿ-ಬಿಟಿ ಕಂಪನಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಈವರೆಗೆ ಸಂಗ್ರಹಿಸಿದ ಮಾಹಿತಿ ಅನ್ವಯ ಕಂಪನಿಗಳಲ್ಲಿ ಶೇ. 20-25 ಕನ್ನಡಿಗರಿಗೆ ಉದ್ಯೋಗ ಸಿಕ್ಕಿದೆ. ಇನ್ಫೋಸಿಸ್ನಲ್ಲಿ ಮಾತ್ರ ಕನ್ನಡಿಗರಿಗೆ ಶೇ.60ರಷ್ಟು ಉದ್ಯೋಗ ನೀಡಲಾಗಿದೆ ಎಂದವರು ತಿಳಿಸಿದ್ದಾರೆ. ಹಲವು ವರ್ಷಗಳಿಂದ ಕನ್ನಡಿಗರಿಗೆ ಉದ್ಯೋಗವೇ ಸಿಗುತ್ತಿಲ್ಲವೆಂದು ಕೂಗು ಕೇಳಿಬರುತ್ತಿದ್ದು, 1984ರಲ್ಲಿ ಅಂದಿನ ಸಿಎಂ ರಾಮಕೃಷ್ಣ ಹೆಗಡೆ ಡಾ.ಸರೋಜಿನಿ ಮಹಿಷಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಆದರೆ ಅಂದಿನ ಭಾಷಾ ಅಲ್ಪಸಂಖ್ಯಾತರು ಆ ವರದಿ ಜಾರಿಗೆ ಬಿಡಲಿಲ್ಲ. ಇತ್ತೀಚೆಗೆ ರೆಸ್ಯೂಮ್ನಲ್ಲಿ ಕನ್ನಡ ಇದ್ದಿದ್ದಕ್ಕೆ ಉದ್ಯೋಗ ಸಿಗುತ್ತಿಲ್ಲ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ಆಗಿರುವ ಹಿನ್ನೆಲೆ ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ಆಂದೋಲನ ಆರಂಭಿಸಿದೆ. ಕನ್ನಡಿಗರಿಗೆ ಎಷ್ಟು ಉದ್ಯೋಗ ಕೊಟ್ಟಿದ್ದೀರೆಂದು ಮಾಹಿತಿ ಕೇಳಲಾಗ್ತಿದೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:55 pm, Tue, 3 November 26




