AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರವೇ ಅಭಿಯಾನ ಟೀಕಿಸಿದ ತಮಿಳುನಾಡು ಐಪಿಎಸ್​​ ಅಧಿಕಾರಿ: ಎಸಿಪಿ ಹೇಳಿಕೆಗೆ ಕನ್ನಡಿಗರು ಕೆಂಡ

ಐಟಿ-ಬಿಟಿ ಸಂಸ್ಥೆಗಳಲ್ಲಿ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ನಡೆಸುತ್ತಿರುವ ಅಭಿಯಾನವನ್ನು ತಮಿಳುನಾಡಿನ ಐಪಿಎಸ್ ಅಧಿಕಾರಿ ಬಿ.ಎಸ್. ಧನುಷ್ ಕುಮಾರ್ ವ್ಯಂಗ್ಯವಾಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡಿಗರ ಉದ್ಯೋಗದ ಹಕ್ಕಿನ ಬಗ್ಗೆ ಧ್ವನಿ ಎತ್ತುವುದೇ ತಪ್ಪಾ? ಎಂದು ಹಲವರು ಪ್ರಶ್ನಿಸಿದ್ದು, ಓರ್ವ ಸರ್ಕಾರಿ ಅಧಿಕಾರಿ ಇಂತಹ ಹೇಳಿಕೆಗಳನ್ನು ನೀಡಬಹುದೇ ಎಂದು ಆಕ್ರೋಶ ವ್ಯಕ್ತವಾಗಿದೆ.

ಕರವೇ ಅಭಿಯಾನ ಟೀಕಿಸಿದ ತಮಿಳುನಾಡು ಐಪಿಎಸ್​​ ಅಧಿಕಾರಿ: ಎಸಿಪಿ ಹೇಳಿಕೆಗೆ ಕನ್ನಡಿಗರು ಕೆಂಡ
ಕರವೇ ಅಭಿಯಾನ ಟೀಕಿಸಿದ ತಮಿಳುನಾಡು ಐಪಿಎಸ್​​ ಅಧಿಕಾರಿ
ಅರುಣ್ ಕುಮಾರ್​ ಆರ್​.
| Edited By: |

Updated on: Nov 03, 2026 | 11:42 AM

Share

ಬೆಂಗಳೂರು, ನವೆಂಬರ್​​ 03: ಐಟಿ-ಬಿಟಿ ಕಂಪನಿಗಳಲ್ಲಿ ಕನ್ನಡಿಗರಿಗೆ ಅನ್ಯಾಯ ಆರೋಪ ಕೇಳಿಬಂದ ಬೆನ್ನಲ್ಲೇ ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಬೃಹತ್ ಅಭಿಯಾನ ಆರಂಭಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಅಭಿಯಾನದ ಬಗ್ಗೆ ತಮಿಳುನಾಡು ಐಪಿಎಸ್​​ ಅಧಿಕಾರಿ ಅವಹೇಳನಕಾರಿಯಾಗಿ ಟೀಕೆ ಮಾಡಿರೋದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಂಪನಿಗಳಿಗೆ ತೆರಳಿ ಕನ್ನಡಿಗರಿಗೆ ಉದ್ಯೋಗದಲ್ಲಿ ಎಷ್ಟು ಆದ್ಯತೆ ನೀಡಲಾಗಿದೆ ಎಂಬ ಮಾಹಿತಿ ಸಂಗ್ರಹಿಸುತ್ತಿರುವ ಕರವೇ ಬಗ್ಗೆ ವ್ಯಂಗ್ಯವಾಡಿರುವ ತಮಿಳುನಾಡು ಐಪಿಎಸ್ ಅಧಿಕಾರಿ ಬಿ.ಎಸ್.ಧನುಷ್ ಕುಮಾರ್, ಉದ್ಯೋಗ ಮಾಡುತ್ತಿರುವವರ ಕೆಲಸಕ್ಕೆ ಅಡ್ಡಿಪಡಿಸುತ್ತಿರುವ ನಿರುದ್ಯೋಗಿಗಳು ಎಂದಿದ್ದಾರೆ.

ಕನ್ನಡಿಗರ ಉದ್ಯೋಗದ ಪರವಾಗಿ ನಡೆಯುತ್ತಿರುವ ಅಭಿಯಾನದ ಬಗ್ಗೆ ವೆಲ್ಲೂರು ಸಬ್ ಡಿವಿಷನ್ ಎಸಿಪಿಯ ಈ ಹೇಳಿಕೆಯೀಗ ರಾಜ್ಯದ ಜನತೆತನ್ನು ಮತ್ತಷ್ಟು ಕೆರಳಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಿದ್ದರೆ ಕನ್ನಡಿಗರ ಉದ್ಯೋಗದ ಹಕ್ಕಿನ ಬಗ್ಗೆ ಧ್ವನಿ ಎತ್ತುವುದೇ ತಪ್ಪಾ? ಎಂಬ ಪ್ರಶ್ನೆಗಳು ಸಹ ವ್ಯಕ್ತವಾಗಿವೆ. ಓರ್ವ ಸರ್ಕಾರಿ ಅಧಿಕಾರಿ ಇಂತಹ ಹೇಳಿಕೆಗಳನ್ನು ನೀಡಬಹುದೇ ಎಂದು ಕನ್ನಡಿಗರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಅವಗಣನೆ ಆರೋಪ: ಮತ್ತೆ ಮುನ್ನೆಲೆಗೆ ಬಂದ ಉದ್ಯೋಗ ಮೀಸಲಾತಿ ಕಾನೂನು

ಕರವೇ ಅಭಿಯಾನ ಏನು?

ಕನ್ನಡಿಗರ ಉದ್ಯೋಗದ ಹಕ್ಕಿಗಾಗಿ ಬೃಹತ್ ಅಭಿಯಾನಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಕರೆ ನೀಡಿದ್ದಾರೆ. ನವೆಂಬರ್​​ 1ರಿಂದ 1 ತಿಂಗಳ ಕಾಲ ಐಟಿ-ಬಿಟಿ ಕಂಪನಿಗಳಿಗೆ ನಿಯೋಗ ಭೇಟಿ ನೀಡಲಿದ್ದು, ಕಂಪನಿ ಮುಖ್ಯಸ್ಥರು ಮತ್ತು ಮಾನವ ಸಂಪನ್ಮೂಲ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಪ್ರತಿ ತಂಡದಲ್ಲಿ ಕರವೇ ಸಂಘಟನೆಯ 10 ಮುಖಂಡರು ಇರಲಿದ್ದು, ಐಟಿ-ಬಿಟಿ ಕಂಪನಿಗಳಲ್ಲಿ ಎಷ್ಟು ಕನ್ನಡಿಗರು ಇದ್ದಾರೆಂದು ಮಾಹಿತಿ ಸಂಗ್ರಹಿಸಲಿದ್ದಾರೆ. ಬೇರೆ ಬೇರೆ ಭಾಷೆಯವರು ಎಷ್ಟು ಜನರಿದ್ದಾರೆ ಎಂದೂ ಮಾಹಿತಿ ಕಲೆಹಾಕಲಿದ್ದಾರೆ. ಸಂಗ್ರಹಿಸಿದ ಎಲ್ಲ ವಿವರಗಳನ್ನು ಅಂತಿಮವಾಗಿ ಸಿಎಂ ಡಿಕೆ ಶಿವಕುಮಾರ್​​ ಅವರಿಗೆ ನೀಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಅರುಣ್ ಕುಮಾರ್​ ಆರ್​.
ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More