ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಅವಗಣನೆ ಆರೋಪ: ಮತ್ತೆ ಮುನ್ನೆಲೆಗೆ ಬಂದ ಉದ್ಯೋಗ ಮೀಸಲಾತಿ ಕಾನೂನು
ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದ್ದು, ಆ ಮೂಲಕ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮಸೂದೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ಪ್ರಸ್ತಾವನೆಗೆ ಸರ್ಕಾರದೊಳಗೆ ಯಾವುದೇ ನೇರ ವಿರೋಧ ವ್ಯಕ್ತವಾಗಿಲ್ಲ. ಆದರೆ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇತರ ಇಲಾಖೆಗಳೊಂದಿಗೆ ಚರ್ಚೆ ನಡೆಸುವುದು ಅಗತ್ಯವಾಗಿದೆ ಎಂದವರು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 30: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ ಅವಗಣನೆ ಆರೋಪ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಕಾನೂನು ಜಾರಿಗೆ ತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಕ್ರಿಯ ಪರಿಶೀಲನೆಯಲ್ಲಿರುವ ಈ ಪ್ರಸ್ತಾವನೆಯನ್ನು ಇತರ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮುಂದಕ್ಕೆ ಕೊಂಡೊಯ್ಯಲಾಗುವುದು ಎಂದು ಅವರು ಹೇಳಿದ್ದಾರೆ.
‘ಸೂಕ್ತ ಸಮಯದಲ್ಲಿ ಕಾನೂನು ಜಾರಿ’
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಲಾಡ್, ಈ ಪ್ರಸ್ತಾವನೆಗೆ ಸರ್ಕಾರದೊಳಗೆ ಯಾವುದೇ ನೇರ ವಿರೋಧ ವ್ಯಕ್ತವಾಗಿಲ್ಲ. ಆದರೆ, ಮುಂದಿನ ಕ್ರಮ ಕೈಗೊಳ್ಳುವ ಮೊದಲು ಇತರ ಇಲಾಖೆಗಳೊಂದಿಗೆ ಚರ್ಚೆ ನಡೆಸುವುದು ಅಗತ್ಯವಾಗಿದೆ. ಐಟಿ/ಬಿಟಿ ಇಲಾಖೆಯವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ನನಗೆ ಅನಿಸುವುದಿಲ್ಲ. ಅಂತಹ ಯಾವುದೇ ವಿರೋಧವಿಲ್ಲಎಂದು ಅವರು ತಿಳಿಸಿದ್ದಾರೆ. ಈ ಪ್ರಸ್ತಾವನೆಯನ್ನು ಕೈಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕಳೆದ ಮೂರು ವರ್ಷಗಳಿಂದಲೂ ಈ ವಿಷಯ ಚಾಲ್ತಿಯಲ್ಲಿದೆ. ಸಕ್ರಿಯವಾಗಿ ಪರಿಶೀಲಿಸಲಾಗುತ್ತಿದೆ. ಸೂಕ್ತ ಸಮಯದಲ್ಲಿ ಇದನ್ನು ಜಾರಿಗೆ ತರುತ್ತೇವೆ ಎಂದಿದ್ದಾರೆ.
ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ಮಸೂದೆ ಏನಾಗಿತ್ತು?
ಸಚಿವ ಸಂಪುಟವು ಕರ್ನಾಟಕ ರಾಜ್ಯ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಉದ್ಯೋಗ ಮಸೂದೆ, 2024’ಕ್ಕೆ ಅನುಮೋದನೆ ನೀಡಿದ ಸುಮಾರು 18 ತಿಂಗಳ ಬಳಿಕ ಸರ್ಕಾರ ಮತ್ತೆ ಈ ವಿಷಯವೀಗ ಮುನ್ನೆಲೆಗೆ ಬಂದಿದೆ. ಮೂಲ ಕರಡು ಮಸೂದೆಯಲ್ಲಿ ಖಾಸಗಿ ಸಂಸ್ಥೆಗಳಲ್ಲಿನ ಶೇ. 50ರಷ್ಟು ನಿರ್ವಹಣಾ ಹುದ್ದೆಗಳು ಮತ್ತು ಶೇ. 70ರಿಂದ 75ರಷ್ಟು ನಿರ್ವಹಣೆಯೇತರ ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡುವ ಪ್ರಸ್ತಾವನೆ ಇತ್ತು. ಖಾಸಗಿ ಕೈಗಾರಿಕೆಗಳಲ್ಲಿನ ಗ್ರೂಪ್ ಸಿ ಮತ್ತು ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ. 100ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯೂ ಇದರಲ್ಲಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




