ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣಿಸಿದರೆ ಕಠಿಣ ಕ್ರಮ ಎಂದ ಸರ್ಕಾರ: ಆದರೆ ಕಳೆದ ಒಂದೂವರೆ ವರ್ಷದಿಂದ ಬಾಕಿಯೇ ಉಳಿದಿದೆ ಮೀಸಲಾತಿ ಬಿಲ್!
ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ ವಿಚಾರ ಗಂಭೀರ ಸ್ವರೂಪ ಪಡೆದಿದ್ದು, ಕನ್ನಡಿಗರಿಗೆ ಉದ್ಯೋಗ ನಿರಾಕರಿಸುವ ಉದ್ಧಟತನ ಸಹಿಸಲ್ಲ ಎಂದು ಸಚಿವ ಶಿವರಾಜ ತಂಗಡಗಿ ಎಚ್ಚರಿಸಿದ್ದಾರೆ. ಆದರೆ ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸಂಬಂಧ ಜಾರಿಗೆ ತರಲು ಹೊರಟಿದ್ದ ಬಿಲ್ ಒಂದೂವರೆ ವರ್ಷದಿಂದ ಪೆಂಡಿಂಗ್ ಇದೆ ಎನ್ನುವುದು ಕೂಡ ಇಲ್ಲಿ ಮುಖ್ಯ ವಿಚಾರವಾಗಿದೆ.

ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನ ಐಟಿ ಕಂಪನಿಗಳಲ್ಲಿ ಕನ್ನಡಿಗರ ಕಡೆಗಣನೆ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ವಿಷಾದನೀಯ. ಕನ್ನಡ ಮಾತೃಭಾಷೆ ಇರುವವರನ್ನು ಕಡೆಗಣಿಸಲಾಗುತ್ತಿದೆ ಎಂಬ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಕನ್ನಡಿಗರ ಹಕ್ಕು, ಗೌರವ ಮತ್ತು ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಲು ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ನಿನ್ನೆಯಷ್ಟೇ ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದರು. ಇದೇ ವಿಚಾರವಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಕೂಡ ಪ್ರತಿಕ್ರಿಯಿಸಿದ್ದು, ಕನ್ನಡಿಗರ ಸ್ವಾಭಿಮಾನದ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
‘ಕನ್ನಡಿಗರಿಗೆ ಅನ್ಯಾಯವಾದರೆ ಸರ್ಕಾರಕ್ಕೆ ದೂರು ಸಲ್ಲಿಸಿ’
ಕನ್ನಡಿಗರ ಉದ್ಯೋಗದ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧ
ಕನ್ನಡಿಗರ ಸ್ವಾಭಿಮಾನದ ವಿಚಾರದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ
ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಈ ಹೆಗ್ಗಳಿಕೆಯ ಹಿಂದೆ ಕನ್ನಡಿಗರ ಪರಿಶ್ರಮ, ಪ್ರತಿಭೆ, ಬೌದ್ಧಿಕ ಸಾಮರ್ಥ್ಯ ಮತ್ತು ಉದ್ಯಮಶೀಲತೆಯ ಮಹತ್ವದ ಕೊಡುಗೆಯಿದೆ.
ಇಂತಹ ಕನ್ನಡಿಗರ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ. ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ಕಳವಳಕಾರಿ ಸಂಗತಿ.
ಅರ್ಹತೆ ಇಲ್ಲದೆ ಉದ್ಯೋಗ ತಿರಸ್ಕರಿಸುವುದು ಬೇರೆ, ಮಾತೃ ಭಾಷೆ ಕನ್ನಡ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವುದು ಬೇರೆ. ಕನ್ನಡ ಮಾತೃ ಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವ ಉದ್ಧಟತನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ಈ ವಿಷಯವನ್ನು ಗೌರವಾನ್ವಿತ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಯು ಕನ್ನಡಿಗರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡಬಾರದು.
ಕನ್ನಡಿಗರಿಗೆ ನ್ಯಾಯಯುತ ಉದ್ಯೋಗಾವಕಾಶಗಳು ದೊರೆಯಬೇಕು. ಅರ್ಹತೆ, ಕೌಶಲ್ಯ ಮತ್ತು ಪ್ರತಿಭೆಗೆ ತಕ್ಕ ಮನ್ನಣೆ ಸಿಗಬೇಕು. ಕನ್ನಡ ಮಾತೃ ಭಾಷೆ ಎಂಬ ಕಾರಣಕ್ಕೆ ಯಾವುದೇ ಕಂಪೆನಿ ಉದ್ಯೋಗ ನಿರಾಕರಿಸಿದರೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.
ಯಾವುದೇ ಕಂಪೆನಿಯು ನಿಜವಾಗಿಯೂ ಈ ರೀತಿ ನಡೆದುಕೊಂಡರೆ ಸರ್ಕಾರಕ್ಕೆ ದೂರು ಸಲ್ಲಿಸಬಹುದು. ಕನ್ನಡದ ನೆಲದಲ್ಲಿ ಕನ್ನಡಿಗರ ಪ್ರತಿಭೆಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.
— Shivaraj S Tangadagi (@sstangadagi) October 25, 2026
ಕನ್ನಡಿಗರ ಉದ್ಯೋಗದ ಹಕ್ಕುಗಳ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಭಾರತದ ತಂತ್ರಜ್ಞಾನ ರಾಜಧಾನಿಯಾಗಿ ಗುರುತಿಸಿಕೊಂಡಿರುವುದಕ್ಕೆ ಕನ್ನಡಿಗರ ಪರಿಶ್ರಮ, ಪ್ರತಿಭೆ, ಬೌದ್ಧಿಕ ಸಾಮರ್ಥ್ಯ ಮತ್ತು ಉದ್ಯಮಶೀಲತೆಯ ಮಹತ್ವದ ಕೊಡುಗೆಯಿದೆ. ಇಂತಹ ಕನ್ನಡಿಗರ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ. ಸ್ಥಳೀಯ ಪ್ರತಿಭೆಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿರುವುದು ಕಳವಳಕಾರಿ ಸಂಗತಿ. ಅರ್ಹತೆ ಇಲ್ಲದೆ ಉದ್ಯೋಗ ತಿರಸ್ಕರಿಸುವುದು ಬೇರೆ, ಮಾತೃ ಭಾಷೆ ಕನ್ನಡ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವುದು ಬೇರೆ. ಕನ್ನಡ ಮಾತೃ ಭಾಷೆ ಎಂಬ ಕಾರಣಕ್ಕೆ ಉದ್ಯೋಗ ನಿರಾಕರಿಸುವ ಉದ್ಧಟತನವನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಕೊಡಬೇಕು ನಿಜ, ಮೊದಲು ಶಿಕ್ಷಣ-ಕೌಶಲ ಸುಧಾರಿಸಿ! ಸಿಎಂ ಸಂದೇಶಕ್ಕೆ ಮೋಹನ್ ದಾಸ್ ಪೈ ಪ್ರತಿಕ್ರಿಯೆ
ಈ ವಿಷಯವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಕರ್ನಾಟಕದ ನೆಲದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಸಂಸ್ಥೆಯು ಕನ್ನಡಿಗರ ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಿರ್ಲಕ್ಷ್ಯ ಮಾಡಬಾರದು. ಯಾವುದೇ ಕಂಪೆನಿಯು ನಿಜವಾಗಿಯೂ ಈ ರೀತಿ ನಡೆದುಕೊಂಡರೆ ಸರ್ಕಾರಕ್ಕೆ ದೂರು ಸಲ್ಲಿಸಬಹುದು. ಕನ್ನಡದ ನೆಲದಲ್ಲಿ ಕನ್ನಡಿಗರ ಪ್ರತಿಭೆಗೆ ನ್ಯಾಯ ಒದಗಿಸುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದವರು ತಿಳಿಸಿದ್ದಾರೆ.
ಪೆಂಡಿಂಗ್ ಇರುವ ಮೀಸಲಾತಿ ಬಿಲ್
ಕನ್ನಡಿಗರಿಗೆ ಖಾಸಗಿ ಕಂಪನಿಯಲ್ಲಿ ಕೆಲಸದ ತಾರತಮ್ಯ ವಿಚಾರವಾಗಿ ರಾಜ್ಯ ಸರ್ಕಾರವೇನೋ ಕ್ರಮದ ಭರವಸೆ ನೀಡಿದೆ. ಆದರೆ ಖಾಸಗಿ ಕಂಪನಿಯಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಸಂಬಂಧ ಜಾರಿಗೆ ತರಲು ಹೊರಟಿದ್ದ ಬಿಲ್ ಒಂದೂವರೆ ವರ್ಷದಿಂದ ಪೆಂಡಿಂಗ್ ಇದೆ ಎನ್ನುವುದು ಕೂಡ ಇಲ್ಲಿ ಮುಖ್ಯ ವಿಚಾರವಾಗಿದೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಕನ್ನಡಿಗರಿಗೆ ಶೇ.50ರಷ್ಟು ಉದ್ಯೋಗ ಮೀಸಲಾತಿ ನೀಡುವ ವಿಧೇಯಕವನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಜಾರಿಗೆ ತರಲು ಯತ್ನಿಸಿದ್ದರು. ಆದರೆ ಸಂಪುಟಕ್ಕೆ ಬಂದು ಅಪ್ರೂವ್ ಆಗಿದ್ದ ಉದ್ಯೋಗ ಮೀಸಲಾತಿ ವಿಧೇಯಕವನ್ನು ಬಿಲ್ ಪಾಸ್ ಆಗಬೇಕು ಎನ್ನುವ ಹೊತ್ತಿನಲ್ಲಿ ತಡೆ ಹಿಡಿಯಲಾಯ್ತು. ಇಬ್ಬರು ಪ್ರಭಾವಿ ಸಚಿವರಿಂದಲೇ ಈ ಬಿಲ್ಗೆ ತಡೆ ಎನ್ನುವ ಚರ್ಚೆ ನಡೆದಿತ್ತು. ಹೀಗಾಗಿ ಬಿಲ್ ಜಾರಿ ಸಂಬಂಧ ಲಾಡ್ಗೆ ಸರ್ಕಾರದಿಂದ ಸಪೋರ್ಟ್ ಸಿಕ್ಕಿರಲಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




