ಭ್ರಷ್ಟಾಚಾರ ಆರೋಪ: ಸಿದ್ದರಾಮಯ್ಯ ಸಂಪುಟದ ಮತ್ತೋರ್ವ ಸಚಿವ ವಿರುದ್ಧ ರಾಜ್ಯಪಾಲರಿಗೆ ದೂರು
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕಂದಾಯ ಸಚಿವ ಕೃಷ್ಣ ಬೈರೇಗೌಡರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದಲ್ಲಿನ ಅಕ್ರಮ ಜಮೀನು ವ್ಯವಹಾರದಲ್ಲಿ ಸಚಿವರ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರ್ಕಾರ ವಿಫಲವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು, ಜನವರಿ 15: ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byre Gowda) ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಈ ಕುರಿತಾಗಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ನೀಡಿದ್ದಾರೆ. ಹಗರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಧಿಕಾರಶಾಹಿ ಆಶಿಸ್ತಿನಂತಹ ಪ್ರಕರಣಗಳಿಗೆ ಕಡಿವಾಣ ಹಾಕಿ ಬಿಗಿ ಕ್ರಮಗಳನ್ನು ಕೈಗೊಳ್ಳದ ಸಚಿವ ಕೃಷ್ಣಬೈರೇಗೌಡ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ದೂರಿಗೆ ಸ್ಪಂದಿಸದೆ ಅಕ್ರಮ, ವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಂಡು ಈ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಕೋರಿದ್ದಾರೆ.
ಇದನ್ನೂ ಓದಿ: ಕೃಷ್ಣ ಬೈರೇಗೌಡ ಭೇಟಿ ವೇಳೆ ಕರ್ತವ್ಯಕ್ಕೆ ಗೈರು, ಓರ್ವ ಅಧಿಕಾರಿ ಸಸ್ಪೆಂಡ್, 11 ಜನರಿಗೆ ನೋಟಿಸ್
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮದ ಸರ್ವೆ ಸಂಖ್ಯೆ: 150 ರಲ್ಲಿ ಚೆನ್ನ ವೀರಯ್ಯ ಎನ್ನುವವರಿಗೆ ಎರಡು ಎಕರೆ ಸಾಗುವಳಿದಾರರಿಗೆ ಸರ್ಕಾರಿ ಜಮೀನನ್ನು ಸಾಗುವಳಿ ಮತ್ತು ಹಂಗಾಮಿ ಸಾಗುವಳಿ ಚೀಟಿಯನ್ನು ಮಂಜೂರು ಮಾಡಲಾಗಿದೆ. ಆದರೆ ಜಮೀನು ವ್ಯವಹಾರ ನಡೆದಿದ್ದು, ಸರ್ವೆ ನಂಬರ್ 150ರಲ್ಲಿರುವ ಜಮೀನು ಪೋಡಿ, ನಕ್ಷೆ ಆಗದೇ ಸಾಗುವಳಿದಾರರು ಅಕ್ರಮವಾಗಿ ಜಮೀನನ್ನು ಪಲ್ಟಿತ್ ಡೆವಲಪರ್ಸ್ ಎಲ್ಎಲ್ಪಿ ಕಂಪನಿಗೆ ಮಾರಾಟ ಮಾಡಿರುವುದಾಗಿ ಆರೋಪಿಸಿದ್ದಾರೆ.
ಸರ್ಕಾರದಿಂದ ಮಂಜೂರಾದ ಜಮೀನನ್ನು ಪೋಡಿ, ದುರಸ್ತಿ ಮಾಡದೇ ತಹಶೀಲ್ದಾರ್, ಉಪವಿಭಾಗಾಧಿಕಾರಿಗಳು ಪಲ್ಟಿತ್ ಡೆವಲಪರ್ಸ್ ಜೊತೆಗೆ ನೇರವಾಗಿ ಭಾಗಿಯಾಗಿ ಭ್ರಷ್ಟಾಚಾರ ಎಸಗಿರುವ ಇವರ ವಿರುದ್ಧ ಕೂಡ ಕಾನೂನು ಕ್ರಮಕೈಗೊಂಡು ಸರ್ಕಾರಿ ಜಮೀನನ್ನು ರಕ್ಷಿಸಬೇಕಿದೆ.
ಇದನ್ನೂ ಓದಿ: ಡೆಹ್ರಾಡೂನ್ನಿಂದ ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತಂದ ಕೃಷ್ಣ ಬೈರೇಗೌಡ
ಈ ಪ್ರಕರಣದಲ್ಲಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿದರೆ ಹುಲಿಕುಂಟೆ ಗ್ರಾಮದ ಮೇಲ್ಕಂಡ ಸರ್ವೆ ನಂಬರ್ ಜಮೀನುಗಳು ಸರ್ಕಾರಿ ಗೋಮಾಳ ಆಗಿದ್ದು, ಈ ಜಮೀನನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಗರಣಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚನೆ ನೀಡುವಂತೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ದಿನೇಶ್ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Wed, 15 January 25