
ಬೆಂಗಳೂರು, ಸೆಪ್ಟೆಂಬರ್ 13: ಸಚಿವ ಸತೀಶ್ ಜಾರಕಿಹೊಳಿ ಮೇಲೆ ದಾಳಿ ಕೇಸ್ ಸಂಬಂಧ ಇಡಿ ನಿರ್ದೇಶಕ ರಾಹುಲ್ ಖುದ್ದಾಗಿ ಪರಿಶೀಲನೆ ನಡೆಸಲಿದ್ದು, ನಿನ್ನೆಯೇ ದೆಹಲಿಯಿಂದ ಬೆಂಗಳೂರಿಗೆ ಇಡಿಯ ನಿರ್ದೇಶಕರ ನೇತೃತ್ವದ ತಾಂತ್ರಿಕ ಸಮಿತಿ ತಂಡ ಆಗಮಿಸಿದೆ. ಇವರು 2 ದಿನ ಬೆಂಗಳೂರಿನಲ್ಲೇ ಉಳಿಯಲಿದ್ದು, ಹಿರಿಯ ಅಧಿಕಾರಿಗಳಿಂದ ಇಂದು ಮತ್ತು ನಾಳೆ ದಾಖಲೆಗಳ ಪರಿಶೀಲನೆ ನಡೆಯಲಿದೆ. ಜಾರಕಿಹೊಳಿ ಅವರ ನಿವಾಸದಲ್ಲಿ 3.3 ಕೋಟಿ ರೂಪಾಯಿ ನಗದು ಮತ್ತು ವಿದೇಶಿ ಕರೆನ್ಸಿ ಪತ್ತೆಯಾಗಿದ್ದ ಹಿನ್ನೆಲೆ ಯಾವುದೇ ಕ್ಷಣದಲ್ಲಿ ಇಡಿಯಿಂದ ನೋಟಿಸ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಇಡಿ ತನಿಖೆ ನಡೆಸುತ್ತಿರುವ ಪ್ರಕರಣಗಳ ಪರಿಶೀಲನೆ ಸಂಬಂಧ ಸ್ವತಃ ಇಡಿ ನಿರ್ದೇಶಕರೇ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿರೋದೀಗ ಭಾರಿ ಕುತೂಹಲ ಮೂಡಿಸಿದೆ. ಸತೀಶ್ ಜಾರಕೊಹೊಳಿ ಪ್ರಕರಣ ಸಂಬಂಧ ವಿದೇಶಿ ಹೂಡಿಕೆ, ಗಣಿ ಕಂಪನಿಗಳಲ್ಲಿ ಪಾಲುದಾರಿಕೆಯ ಬಗ್ಗೆ ತಾಂತ್ರಿಕ ತಂಡ ಮಾಹಿತಿ ಕಲೆಹಾಕಲಿದೆ. ಫೆಮಾ ಕಾಯ್ದೆ ಉಲ್ಲಂಘನೆ ಸ್ವರೂಪದ ಬಗ್ಗೆಯೂ ಕಡತಗಳ ಪರಿಶೀಲನೆ ನಡೆಯಲಿದೆ. ಇವುಗಳ ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಕಿಕ್ ಬ್ಯಾಕ್, ಗುತ್ತಿಗೆ ಕಂಪನಿಯಿಂದ ಹಣ ಪಡೆದ ಆರೋಪಗಳ ಸಂಬಂಧವೂ ದಾಖಲೆಗಳ ಪರಿಶೀಲನೆ ನಡೆಸಲಿದೆ. ಜೊತೆಗೆ ಕೆಪಿಎಸ್ಸಿ ಹಗರಣ, ಮೂಡಾ ಕೇಸ್ ಮತ್ತು ವಾಲ್ಮೀಕಿ ಪ್ರಕರಣಗಳ ಪ್ರಗತಿಯನ್ನೂ ಸಹ ರಾಹುಲ್ ನವೀನ್ ಖುದ್ದಾಗಿ ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಇಡಿ ಅಧಿಕಾರಿಗಳಿಗೆ ದೂರು ಕೊಟ್ಟವರು ಯಾರೆಂದು ಗೊತ್ತಿದೆ; ಸಿಎಂಗೆ ಹೇಳಿದ್ದೇನೆ ಎಂದ ಸಚಿವ ಸತೀಶ್ ಜಾರಕಿಹೊಳಿ
ಈ ಹಿಂದೆ ವಾಲ್ಮೀಕಿ ನಿಗಮ ಹಗರಣ ಸಂಬಂಧ ರಾಜ್ಯ ಸರ್ಕಾರದ ಎಸ್‌ಐಟಿ ವರದಿಯಲ್ಲಿ ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತಾದರೂ, ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ (CBI) ಮತ್ತು ಜಾರಿ ನಿರ್ದೇಶನಾಲಯ (ED) ನಡೆಸಿದ ಪ್ರತ್ಯೇಕ ತನಿಖೆಗಳಲ್ಲಿ ನಾಗೇಂದ್ರ ಅವರೇ ಈ ಹಗರಣದ ಮುಖ್ಯ ಸೂತ್ರಧಾರಿ ಎಂದು ಆರೋಪಿಸಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಹೀಗಾಗಿ ಸಚಿವ ಸತೀಶ್ ಜಾರಹೊಳಿ ಅವರ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳ ನಡೆ ಭಾರಿ ಕುತೂಹಲ ಮೂಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:35 am, Sun, 13 September 26