ರೈತರಿಗೆ ಬೇಕಿರುವುದು ನ್ಯಾಯಯುತ ಪರಿಹಾರವೇ ಹೊರತು, ದಾರಿ ತಪ್ಪಿಸುವ ಮಾತುಗಳಲ್ಲ: ವಿಪಕ್ಷಗಳ ಟೀಕೆ ಡಿಸಿಎಂ ಪರಮೇಶ್ವರ್​ ತಿರುಗೇಟು

ಬರ ಪರಿಹಾರ ಮಾರ್ಗಸೂಚಿಗಳ ಕುರಿತು ವಿಪಕ್ಷಗಳ ಟೀಕೆಗೆ ಡಿಸಿಎಂ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ರೈತರಿಗೆ ನ್ಯಾಯಯುತ, ತ್ವರಿತ ಮತ್ತು ಪಾರದರ್ಶಕ ನೆರವು ನೀಡುವುದು ಸರ್ಕಾರದ ಜವಾಬ್ದಾರಿ. ಕೇಂದ್ರದಿಂದ ತುರ್ತಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿದ ಅವರು, ಮಧ್ಯಂತರ ಪರಿಹಾರ ಸೋಮವಾರದಿಂದ ವಿತರಿಸಲಾಗುವುದು ಎಂದು ಹೇಳಿದ್ದಾರೆ.

ರೈತರಿಗೆ ಬೇಕಿರುವುದು ನ್ಯಾಯಯುತ ಪರಿಹಾರವೇ ಹೊರತು, ದಾರಿ ತಪ್ಪಿಸುವ ಮಾತುಗಳಲ್ಲ: ವಿಪಕ್ಷಗಳ ಟೀಕೆ ಡಿಸಿಎಂ ಪರಮೇಶ್ವರ್​ ತಿರುಗೇಟು
ಡಾ.ಜಿ.ಪರಮೇಶ್ವರ್
Edited By:

Updated on: Oct 31, 2026 | 8:28 PM

ಮುಖ್ಯಾಂಶಗಳು

  • ಬರ ಪರಿಹಾರದ ಮಾರ್ಗಸೂಚಿಗೆ ವಿಪಕ್ಷಗಳ ಟೀಕೆ ವಿಚಾರ
  • ವಿಪಕ್ಷಗಳ ಟೀಕೆಗೆ ಡಿಸಿಎಂ ಡಾ.ಜಿ.ಪರಮೇಶ್ವರ್​ ತಿರುಗೇಟು
  • ನೆರವು ತಲುಪಿಸುವುದು ನಮ್ಮ ಸರ್ಕಾರದ ಜವಾಬ್ದಾರಿ ಆಗಿದೆ

ಬೆಂಗಳೂರು, ಅಕ್ಟೋಬರ್​​ 31: ರಾಜ್ಯ ಸರ್ಕಾರ ಇತ್ತೀಚೆಗೆ ರೈತರಿಗೆ 2500 ರೂ. ಬರ ಪರಿಹಾರ ಬಿಡುಗಡೆ ಮಾಡಿದೆ. ಜೊತೆಗೆ ಹತ್ತಾರು ಮಾರ್ಗಸೂಚಿಗಳನ್ನು ವಿಧಿಸಿದೆ. ಸದ್ಯ ರೈತರಿಗೆ ಸರ್ಕಾರದ ಈ ಮಾರ್ಗಸೂಚಿಗಳ ಬಗ್ಗೆ ಟೀಕೆಗಳು ಕೇಳಿಬಂದಿವೆ. ಹೀಗಾಗಿ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಾ.ಜಿ.ಪರಮೇಶ್ವರ್, ‘ರೈತರಿಗೆ ಬೇಕಿರುವುದು ನ್ಯಾಯಯುತ ಪರಿಹಾರವೇ ಹೊರತು, ದಾರಿ ತಪ್ಪಿಸುವ ಮಾತುಗಳಲ್ಲ’ ಎಂದು​ ತಿರುಗೇಟು ನೀಡಿದ್ದಾರೆ.

ಆರ್​​ ಅಶೋಕ್​​ ಮಾಡಿರುವುದು ಆಧಾರರಹಿತ ಆರೋಪಗಳು ಎಂದ ಪರಮೇಶ್ವರ್

ಈ ಕುರಿತಾಗಿ ಡಿಸಿಎಂ ಡಾ.ಜಿ.ಪರಮೇಶ್ವರ್​ ಟ್ವೀಟ್​ ಮಾಡಿದ್ದು, ‘ಬರ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ವಿರೋಧ ಪಕ್ಷದ ನಾಯಕ ಆರ್​​ ಅಶೋಕ್ ಅವರು ಮಾಡಿರುವ ಆರೋಪಗಳು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿವೆ. ಸರ್ಕಾರಿ ಆದೇಶದಲ್ಲಿರುವ 17 ಅಂಶಗಳನ್ನು ರೈತರಿಗೆ ವಿಧಿಸಿರುವ 17 ಅಡ್ಡಿಗಳೆಂಬಂತೆ ವಿರೋಧ ಪಕ್ಷದವರು ಬಿಂಬಿಸುತ್ತಿದ್ದಾರೆ. ವಾಸ್ತವವಾಗಿ ಇವು ಅರ್ಹ ರೈತರಿಗೆ ಪರಿಹಾರ ತಲುಪಿಸುವುದು, ಒಂದೇ ವ್ಯಕ್ತಿಗೆ ಎರಡು ಬಾರಿ ಪರಿಹಾರ ಪಾವತಿಯಾಗದಂತೆ ನೋಡಿಕೊಳ್ಳುವುದು ಹಾಗೂ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದಕ್ಕಾಗಿ ರೂಪಿಸಿರುವ ಆಡಳಿತಾತ್ಮಕ ಕ್ರಮಗಳಾಗಿವೆ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಡಿಸಿಎಂ ಡಾ.ಜಿ.ಪರಮೇಶ್ವರ್​ ಟ್ವೀಟ್

‘ನಮ್ಮ ರೈತರಿಗೆ ನಾನು ಸ್ಪಷ್ಟವಾಗಿ ಹೇಳಬಯಸುವುದೇನೆಂದರೆ, ಬರ ಪರಿಹಾರ ಪಡೆಯಲು ನೀವು ಹೊಸದಾಗಿ ಅರ್ಜಿ ಸಲ್ಲಿಸಬೇಕಿಲ್ಲ. ದಾಖಲೆಗಳನ್ನು ಹಿಡಿದುಕೊಂಡು ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯಬೇಕಿಲ್ಲ. FRUITS, ಡಿಜಿಟಲ್ ಬೆಳೆ ಸಮೀಕ್ಷೆ, ಪರಿಹಾರ ಪೋರ್ಟಲ್ ಹಾಗೂ ಈಗಾಗಲೇ ಲಭ್ಯವಿರುವ ಕಂದಾಯ ದಾಖಲೆಗಳನ್ನು ಸಂಯೋಜಿಸಿ, ಅರ್ಹ ಫಲಾನುಭವಿಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ಗುರುತಿಸಿ, ಅವರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಜಮಾ ಮಾಡುವ ವ್ಯವಸ್ಥೆ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಸೋಮವಾರದ ನಂತರ ಪರಿಹಾರ ವಿತರಣೆ

‘ಕರ್ನಾಟಕ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ರಾಜ್ಯದ 226 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಕೇಂದ್ರ ಸರ್ಕಾರದ ಆರ್ಥಿಕ ನೆರವಿಗೆ ಕಾಯದೆ, ನಮ್ಮ ಸರ್ಕಾರವು ಅರ್ಹ ರೈತರಿಗೆ ಗರಿಷ್ಠ ರೂ 2,500 ಮಧ್ಯಂತರ ಪರಿಹಾರ ನೀಡಲು 1,250 ಕೋಟಿ ರೂ ಮೀಸಲಿಟ್ಟಿದೆ. ಸೋಮವಾರದ ನಂತರ ಪರಿಹಾರ ವಿತರಣೆ ಆರಂಭವಾಗಲಿದೆ. ಇದು ಪರಿಹಾರದ ಮೊದಲ ಕಂತು ಮಾತ್ರ. ಪರಿಷ್ಕೃತ ನಿಯಮಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಪ್ರತಿ ಹೆಕ್ಟೇರ್‌ಗೆ ರೂ 11,000, ನೀರಾವರಿ ಬೆಳೆಗಳಿಗೆ ರೂ 22,000 ಹಾಗೂ ಬಹುವಾರ್ಷಿಕ ಮತ್ತು ತೋಟಗಾರಿಕೆ ಬೆಳೆಗಳಿಗೆ ರೂ 30,000 ಪರಿಹಾರ ನೀಡಲು ಅವಕಾಶವಿದೆ. ನಿಗದಿತ ಮಿತಿಯೊಳಗೆ ರೈತರಿಗೆ ಸಲ್ಲಬೇಕಾದ ಉಳಿದ ಪರಿಹಾರವನ್ನು ಕೇಂದ್ರದಿಂದ ಅಗತ್ಯ NDRF ಅನುದಾನ ಬಿಡುಗಡೆಯಾದ ಕೂಡಲೇ ವಿತರಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬರ ಪರಿಹಾರ ವಿಳಂಬ: ರೈತರಿಗೆ ಸರ್ಕಾರದ ಷರತ್ತುಗಳ ವಿರುದ್ಧ ವಿಪಕ್ಷ ನಾಯಕ ಅಶೋಕ್​ ಕಿಡಿ

‘ರಾಜ್ಯ ಸರ್ಕಾರ ರೈತರ ನೆರವಿಗೆ ಮುಂದಾಗಿದೆ. ಈಗ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವೂ ಅದೇ ರೀತಿ ಸ್ಪಂದಿಸಬೇಕಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಬದಲು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಿಸಲು ವಿರೋಧ ಪಕ್ಷದವರು ತಮ್ಮ ಪ್ರಭಾವ ಬಳಸಲಿ’ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್​ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  ​

ಈರಣ್ಣಾ ಬಸವಾ

ಈರಣ್ಣಾ ಬಸವಾ.. ಮೂಲತಃ ವಾಣಿಜ್ಯ ನಗರಿ ಹುಬ್ಬಳ್ಳಿಯವರು. ಈರಣ್ಣಾ ಬಿ.ಕಾಮ್ ಪದವೀಧರರಾಗಿದ್ದಾರೆ. ಕಂಟೆಂಟ್ ರೈಟರ್ ಆಗಿ ವೃತ್ತಿಜೀವನ ಆರಂಭಿಸಿದ ನಂತರ ಕನ್ನಡದ ಬೇರೆ ಬೇರೆ ಸುದ್ದಿ ಮಾದ್ಯಮದಲ್ಲಿ ಸುಮಾರು ೬ ವರ್ಷ ಕಾಲ ಡೆಸ್ಕ್ ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸದ್ಯ ಸತತ ಪರಿಶ್ರಮದಿಂದ ಟಿವಿ9 ಕನ್ನಡದಲ್ಲಿ ರಾಜಕೀಯ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹಲವು ಎಕ್ಸ್ ಕ್ಲೂಸಿವ್ ಸುದ್ದಿಗಳನ್ನು ಹೆಕ್ಕಿ ತೆಗೆದಿದ್ದಾರೆ. ಸಿಎಂ, ಡಿಸಿಎಂ ಬೀಟ್ ಜವಾಬ್ದಾರಿ ಇವರ ಮೇಲಿದ್ದು ಜನರಿಗೆ ಸಿಗಬೇಕಾದ ಅಮೂಲ್ಯ ಸುದ್ದಿಗಳನ್ನು ತಲುಪಿಸುವ ಕಾಯಕವನ್ನು ಜವಾಬ್ದಾರಿಯಿಂದ ಮಾಡುತ್ತಿದ್ದಾರೆ. ಬರವಣಿಗೆ, ಕತೆ, ಕವನ ಇವರ ಆಸಕ್ತಿಯ ಕ್ಷೇತ್ರ.

Read More
Loading...
Unable to load recommendations.
Follow Us