AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ ಪರಿಹಾರ ವಿಳಂಬ: ರೈತರಿಗೆ ಸರ್ಕಾರದ ಷರತ್ತುಗಳ ವಿರುದ್ಧ ವಿಪಕ್ಷ ನಾಯಕ ಅಶೋಕ್​ ಕಿಡಿ

ರಾಜ್ಯದಲ್ಲಿ ಬರ ಪರಿಹಾರ ವಿತರಣೆ ವಿಳಂಬ ಖಂಡಿಸಿರುವ ವಿಪಕ್ಷ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲವೇ? ಖಜಾನೆ ಖಾಲಿಯಾಗಿದೆಯೇ? ಧೈರ್ಯವಿದ್ದರೆ ಅದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಷರತ್ತುಗಳ ಜಾಲ ಹೆಣೆದು ರೈತರನ್ನು ಸತಾಯಿಸಬೇಡಿ. ತಂತ್ರಾಂಶದ ಸಮಸ್ಯೆ, ದಾಖಲೆಗಳ ಗೊಂದಲ ಇವೆಲ್ಲವನ್ನೂ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ ಎಂದವರು ಹೇಳಿದ್ದಾರೆ.

ಬರ ಪರಿಹಾರ ವಿಳಂಬ: ರೈತರಿಗೆ ಸರ್ಕಾರದ ಷರತ್ತುಗಳ ವಿರುದ್ಧ ವಿಪಕ್ಷ ನಾಯಕ ಅಶೋಕ್​ ಕಿಡಿ
ರೈತರಿಗೆ ಸರ್ಕಾರದ ಷರತ್ತುಗಳ ವಿರುದ್ಧ ವಿಪಕ್ಷ ನಾಯಕ ಅಶೋಕ್​ ಕಿಡಿ
ಪ್ರಸನ್ನ ಹೆಗಡೆ
|

Updated on: Oct 30, 2026 | 3:49 PM

Share

ಬೆಂಗಳೂರು, ಅಕ್ಟೋಬರ್​​ 30: ರೈತರಿಗೆ ಬರ ಪರಿಹಾರ ವಿಳಂಬ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್​​. ಅಶೋಕ್​​ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂಗಾರು ಕೈಕೊಟ್ಟು ನಾಲ್ಕು ತಿಂಗಳು ಕಳೆದಿವೆ. ಇಷ್ಟು ದಿನ ರೈತರ ಬೆಳೆಹಾನಿಯ ಮಾಹಿತಿ ಸಂಗ್ರಹಿಸದೆ, ಪರಿಹಾರದ ಪಟ್ಟಿ ಸಿದ್ಧಪಡಿಸದೆ ನಿಮ್ಮ ಸರ್ಕಾರ ಏನು ಕತ್ತೆ ಕಾಯುತ್ತಿತ್ತಾ? ರೈತರಿಗೆ ಪರಿಹಾರ ವಿಳಂಬ ಮಾಡಲು ನಿಮ್ಮ ಸರ್ಕಾರಕ್ಕೆ ಇನ್ನೆಷ್ಟು ಕುಂಟು ನೆಪಗಳು ಬೇಕು? ಎಂದು ಸಿಎಂ ಡಿಕೆ ಶಿವಕುಮಾರ್​​ ಅವರನ್ನು ಅಶೋಕ್​​ ಖಾರವಾಗಿ ಪ್ರಶ್ನಿಸಿದ್ದಾರೆ.

‘ನಿಮ್ಮ ಹೊಣೆಗೇಡಿತನಕ್ಕೆ ಸಾಕ್ಷಿ’

ಈಗ ಫ್ರೂಟ್ಸ್ ತಂತ್ರಾಂಶ, ಆಧಾರ್ ಲಿಂಕ್, ಬ್ಯಾಂಕ್ ಖಾತೆ, ಆರ್‌ಟಿಸಿ ಎಂದು ಹತ್ತಾರು ಷರತ್ತುಗಳನ್ನು ಮುಂದಿಟ್ಟು ರೈತರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸಲು ಹೊರಟಿದ್ದೀರಿ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ ಪರಿಹಾರ ಕೊಡುವ ಬದಲು ಮತ್ತಷ್ಟು ಕಿರುಕುಳ ಕೊಟ್ಟು, ವಿಳಂಬ ಮಾಡಿ ಕಡೆಗೆ ಪರಿಹಾರವನ್ನೇ ಕೊಡದಿರುವುದೇ ನಿಮ್ಮ ಅಸಲಿ ಉದ್ದೇಶವೇ? ಈ ಹಿಂದೆ ಬರ ಪರಿಹಾರ, ಬೆಳೆಹಾನಿ ಪರಿಹಾರ ವಿತರಣೆಯಲ್ಲಿನ ಎಡವಟ್ಟುಗಳಿಂದಲೂ ಪಾಠ ಕಲಿಯದ ನಿಮ್ಮ ಕಾಂಗ್ರೆಸ್​​ ಸರ್ಕಾರ, ಈ ಬಾರಿಯೂ ಅದೇ ತಪ್ಪುಗಳನ್ನು ಪುನರಾವರ್ತಿಸಲು ಹೊರಟಿದೆ. ತಂತ್ರಾಂಶದ ಸಮಸ್ಯೆ, ದಾಖಲೆಗಳ ಗೊಂದಲ ಇವೆಲ್ಲವನ್ನೂ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ರೈತರ ತಲೆಗೆ ಕಟ್ಟುವುದು ನಿಮ್ಮ ಹೊಣೆಗೇಡಿತನಕ್ಕೆ ಸಾಕ್ಷಿ ಎಂದವರು ಆರೋಪಿಸಿದ್ದಾರೆ.

ಇದನ್ನೂ ಓದಿ: ‘ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು’: ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್​​ ಖರ್ಗೆ ಕಿಡಿ

‘ಖಜಾನೆ ಖಾಲಿಯಾಗಿದೆಯೇ?’

ರೈತರಿಗೆ ಪರಿಹಾರ ನೀಡುವ ಇಚ್ಛಾಶಕ್ತಿ ಇಲ್ಲವೇ? ಖಜಾನೆ ಖಾಲಿಯಾಗಿದೆಯೇ? ಧೈರ್ಯವಿದ್ದರೆ ಅದನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳಿ. ಅದನ್ನು ಬಿಟ್ಟು ಷರತ್ತುಗಳ ಜಾಲ ಹೆಣೆದು ರೈತರನ್ನು ಸತಾಯಿಸಬೇಡಿ. ತಕ್ಷಣವೇ ಅರ್ಹ ರೈತರ ಪಟ್ಟಿಯನ್ನು ಅಂತಿಮಗೊಳಿಸಬೇಕು ಮತ್ತು FRUITS ತಂತ್ರಾಂಶ ಅಥವಾ ಆಧಾರ್ ಲಿಂಕ್‌ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರ್ಕಾರವೇ ಬಗೆಹರಿಸಬೇಕು. ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ಪರಿಹಾರದ ಹಣವನ್ನು ವಿಳಂಬವಿಲ್ಲದೆ ಜಮೆ ಮಾಡಬೇಕು. ರೈತರ ಬೆವರು, ಶ್ರಮ ಮತ್ತು ಬೆಳೆ ನಷ್ಟಕ್ಕೆ ಪರಿಹಾರ ಕೇಳುವುದು ಭಿಕ್ಷೆಯಲ್ಲ; ಅದು ಅವರ ಹಕ್ಕು. ಅಧಿಕಾರದ ಅಮಲಿನಲ್ಲಿ ರೈತರ ನೋವನ್ನು ಮರೆಯಬೇಡಿ. ರೈತರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸಿ. ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ರೈತರ ಕ್ಷಮೆ ಕೇಳಿ ರಾಜೀನಾಮೆ ಕೊಟ್ಟು ಮನೆಗೆ ನಡೀರಿ ಎಂದು ಅಶೋಕ್​​ ಹೇಳಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More