ಗಣೇಶ ಚತುರ್ಥಿ: ಸೆಪ್ಟೆಂಬರ್ 07 ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ
ಗಣೇಶ ಹಬ್ಬ ಪ್ರಯುಕ್ತ ಬೆಂಗಳೂರು ನಗರದಲ್ಲಿ ತಯಾರಿ ಜೋರಾಗಿ ನಡೆದಿದೆ. ಬೆಸ್ಕಾಂ, ಪೊಲೀಸ್ ಇಲಾಖೆ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿವೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ, ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 06: ಗಣೇಶ ಚತುರ್ಥಿ (Ganesh Chaturthi) ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಗಣೇಶ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಶನಿವಾರ (ಸೆ.07) ರಂದು ಪ್ರಾಣಿವಧೆ ಮತ್ತು ಮಾಂಸ ಮಾರಟವನ್ನು ಬಿಬಿಎಂಪಿ ನಿಷೇಧಿಸಿದೆ. ಈ ಕುರಿತು ಬಿಬಿಎಂಪಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಸೆ.07ರ ಶನಿವಾರ ಗಣೇಶ ಚರುರ್ಥಿ ಹಬ್ಬದ ಪ್ರಯುಕ್ತ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರುವಂತಿಲ್ಲ. ಈ ಕುರಿತು ಬಿಬಿಎಂಪಿ ಜಂಟಿ ನಿರ್ದೇಶಕರು (ಪಶುಪಾಲನೆ) ಸುತ್ತೋಲೆ ಹೊರಡಿಸಿದ್ದಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿ ಕೂಡ ನೀಡಲಾಗಿದೆ.
ಬಿಬಿಎಂಪಿ ಟ್ವೀಟ್
ದಿನಾಂಕ: 07-09-2024ರ ಶನಿವಾರದಂದು “ಗಣೇಶ ಚತುರ್ಥಿ ಹಬ್ಬದ ” ಪ್ರಯುಕ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಾರಾಟ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.#meatprohibited pic.twitter.com/xBhwASXVnj
— Bruhat Bengaluru Mahanagara Palike (@Bbmpcares) September 4, 2024
ಗಣೇಶ ಹಬ್ಬಕ್ಕೆ ಬೆಸ್ಕಾಂ ಮಾರ್ಗಸೂಚಿ
ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ, ವಿಸರ್ಜನೆ, ಮೆರವಣಿಗೆ ವೇಳೆ ವಿದ್ಯುತ್ ಅವಘಡಗಳ ಬಗ್ಗೆ ಎಚ್ಚರವಹಿಸುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕೆಲ ಮಾರ್ಗ ಸೂಚನೆಗಳನ್ನು ಬಿಡುಗಡೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬೆಸ್ಕಾಂ, ವಿದ್ಯುತ್ ಅವಘಡಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಸುರಕ್ಷತೆಗೆ ಆದ್ಯತೆ ನೀಡಿ. ಜಾಗರೂಕರಾಗಿರಿ, ಯಾವುದೇ ವಿದ್ಯುತ್ ಅವಘಡಗಳಿಗೆ ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ. ಒಟ್ಟಾಗಿ, ನಾವು ಈ ಹಬ್ಬವನ್ನು ಸುರಕ್ಷಿತವಾಗಿ ಮತ್ತು ಸ್ಮರಣೀಯವಾಗಿಸೋಣ ಎಂದು ಬೆಸ್ಕಾಂ ತಿಳಿಸಿದೆ.
ಇದನ್ನೂ ಓದಿ: ಗಣೇಶ ಹಬ್ಬ ಪ್ರಯುಕ್ತ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ಬಂದ್, ವಾಹನ ನಿಲುಗಡೆ ನಿಷೇಧ
ಮಾರ್ಗಸೂಚಿಗಳು ಹೀಗಿವೆ
- ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್ ಲೈಟ್ ಹಾಕುವಾಗ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರವಹಿಸಬೇಕು.
- ಸೀರಿಯಲ್ ಲೈಟ್ ತಂತಿ ಸಮರ್ಪಕ ಇನ್ಸುಲೇಟ್ ಆಗಿರಬೇಕು. ವಿದ್ಯುತ್ ಕಂಬದಿಂದ ಸಂಪರ್ಕ ಪಡೆಯಬಾರದು.
- ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರದು.
- ಮೆರವಣಿಗೆ ವೇಳೆ ರಸ್ತೆ ಬದಿ ವಿದ್ಯುತ್ ತಂತಿಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸಬೇಡಿ.
- ಮೆರವಣಿಗೆ ಮಾರ್ಗವನ್ನು ಮುಂಚಿತವಾಗಿ ಎಸಿ ಗಮನಕ್ಕೆ ತನ್ನಿ.
- ತುಂಡಾದ ವೈರ್, ವಿದ್ಯುತ್ ಕಿಡಿ ಗಮನಕ್ಕೆ ಬಂದರೆ, ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಿ. ವಿದ್ಯುತ್ ಪರಿಕರಗಳಿರುವ ಸ್ಥಳಗಳಲ್ಲಿ ‘ಡೇಂಜರ್ ಜೋನ್’ ಎಂದು ಸೂಚಿಸಬೇಕು ಅಂತ ಬೆಸ್ಕಾಂ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Fri, 6 September 24