ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಮಾರ್ಗಸೂಚಿ ಹೊರಡಿಸಿದ ಬೆಸ್ಕಾಂ

ಗಣೇಶೋತ್ಸವಕ್ಕೆ ಬೆಸ್ಕಾಂ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಕಟ್ಟುನಿಟ್ಟಿನ ಸುರಕ್ಷತಾ ಮಾರ್ಗಸೂಚಿ ಪ್ರಕಟಿಸಿದೆ. ಎನ್​ಒಸಿ, ವೈರಿಂಗ್ ಸುರಕ್ಷತೆ, ಇಎಲ್​​ಸಿಬಿ ಕಡ್ಡಾಯ ಮಾಡಲಾಗಿದೆ. ವಿದ್ಯುತ್ ಮೂಲಸೌಕರ್ಯಗಳಿಗೆ ಬ್ಯಾನರ್, ಪೋಸ್ಟರ್ ಕಟ್ಟುವುದು ನಿಷೇಧಿಸಲಾಗಿದೆ. ಇನ್ನು ಗೌರಿ-ಗಣೇಶ ಮೂರ್ತಿ ವಿಸರ್ಜನೆಗಾಗಿ ಜಿಬಿಎ ಬೆಂಗಳೂರಿನ ಸುಮಾರು 42 ಕೆರೆ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿ ವ್ಯವಸ್ಥೆ ಮಾಡಿದೆ.

ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಮಾರ್ಗಸೂಚಿ ಹೊರಡಿಸಿದ ಬೆಸ್ಕಾಂ
ಗಣೇಶೋತ್ಸವ
Image Credit source: tv9 kannada
Edited By:

Updated on: Sep 13, 2026 | 9:04 PM

ಬೆಂಗಳೂರು, ಸೆಪ್ಟೆಂಬರ್​​ 13: ಸೋಮವಾರ ಗಣೇಶೋತ್ಸವ ಹಿನ್ನೆಲೆ ಸಾರ್ವಜನಿಕ ಪೆಂಡಾಲ್‌ಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಕಲ್ಪಿಸಲು ಬೆಸ್ಕಾಂ ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ಥಳೀಯ ಪ್ರಾಧಿಕಾರಗಳಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಅಧಿಕಾರಿಗಳು ಪೆಂಡಾಲ್ ಸ್ಥಳ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ. ಪೆಂಡಾಲ್‌ಗಳಲ್ಲಿ ವೈರಿಂಗ್ ಸಂಪೂರ್ಣ ಸುರಕ್ಷತಾ ನಿಯಮಗಳಂತೆಯೇ ಇರಬೇಕು ಹಾಗೂ ವಿದ್ಯುತ್ ಸಂಪರ್ಕ ನೀಡುವ ಮುನ್ನ ಅರ್ಥ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ ಅಳವಡಿಸುವುದು ಕಡ್ಡಾಯವಾಗಿದೆ.

ವಿದ್ಯುತ್ ಕಂಬಗಳಿಗೆ ಬ್ಯಾನರ್, ಪೋಸ್ಟರ್‌ ಕಟ್ಟುವುದು ನಿಷೇಧ

ಗಣೇಶ ಮೂರ್ತಿ ಮೆರವಣಿಗೆ ಸಾಗುವ ಮಾರ್ಗಗಳಲ್ಲಿನ ವಿದ್ಯುತ್ ತಂತಿಗಳನ್ನು ಮೊದಲೇ ಪರಿಶೀಲಿಸಿ, ಜೋತುಬಿದ್ದ ಅಥವಾ ಸಡಿಲವಾದ ತಂತಿಗಳನ್ನು ತಕ್ಷಣ ಸರಿಪಡಿಸಲು ಸಿಬ್ಬಂದಿಗೆ ನಿರ್ದೇಶಿಸಲಾಗಿದೆ. ವಿದ್ಯುತ್ ಪರಿಕರಗಳ ಬಳಿ ‘ಡೇಂಜರ್ ಝೋನ್’ ಗುರುತು ಹಾಕಬೇಕು, ಪ್ರಿ-ಪೇಯ್ಡ್ ಮೀಟರ್ ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಮೀಟರ್ ಅಳವಡಿಸಿ ಬಳಕೆಯ ಪ್ರಮಾಣವನ್ನು ತಂತ್ರಾಂಶದಲ್ಲಿ ನಮೂದಿಸಬೇಕು.

ಇದನ್ನೂ ಓದಿ: ಗಣೇಶ ಚತುರ್ಥಿ ಆಚರಣೆ: ಮಾರ್ಗಸೂಚಿ ಸಡಿಲಿಕೆಗೆ ಆಗ್ರಹಿಸಿ ಗೃಹ ಸಚಿವರಿಗೆ ಶಾಸಕ ಸಿ.ಕೆ. ರಾಮಮೂರ್ತಿ ಪತ್ರ!

ಇದಲ್ಲದೆ, ಯಾವುದೇ ಕಾರಣಕ್ಕೂ ವಿದ್ಯುತ್ ಕಂಬಗಳು ಹಾಗೂ ಬೆಸ್ಕಾಂ ಮೂಲಸೌಕರ್ಯಗಳಿಗೆ ಬ್ಯಾನರ್, ಪೋಸ್ಟರ್‌ಗಳನ್ನು ಕಟ್ಟುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

42 ಕೆರೆಗಳಲ್ಲಿ ತಾತ್ಕಾಲಿಕ ಕಲ್ಯಾಣಿ: 659 ಮೊಬೈಲ್ ಟ್ಯಾಂಕ್‌ಗಳ ಸಿದ್ಧತೆ

ಇನ್ನು ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆಗೆ ಜಿಬಿಎ ವತಿಯಿಂದ ನಗರದಾದ್ಯಂತ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜಧಾನಿಯ ಸುಮಾರು 42 ಕೆರೆಗಳ ಅಂಗಳದಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ 659 ಮೊಬೈಲ್ ಟ್ಯಾಂಕರ್‌ಗಳ ವ್ಯವಸ್ಥೆ ಮಾಡಲಾಗಿದೆ.

ಯಡಿಯೂರು ಕೆರೆ ಸಜ್ಜು: ಸ್ವಯಂಸೇವಕರಿಂದಲೇ ವಿಸರ್ಜನೆ

ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಪ್ರಸಿದ್ಧ ಯಡಿಯೂರು ಕೆರೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ತಾತ್ಕಾಲಿಕ ಕಲ್ಯಾಣಿಗಳ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸಿ ನೀರು ತುಂಬಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಇನ್ನು ಪರಿಸರ ಸಂರಕ್ಷಣೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ, ಪಾಲಿಕೆ ನೇಮಿಸಿರುವ ನಿಯೋಜಿತ ಸ್ವಯಂಸೇವಕರ ಮೂಲಕವೇ ಗಣೇಶ ಮೂರ್ತಿಗಳ ವಿಸರ್ಜನಾ ಕಾರ್ಯ ನೆರವೇರಿಸಲು ತೀರ್ಮಾನಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More
Loading...
Unable to load recommendations.
Follow Us