
ಬೆಂಗಳೂರು, ಜೂನ್ 14: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹೊಸ ಅರ್ಹತಾ ಮಾನದಂಡಗಳು ಬಹಿರಂಗಗೊಂಡಿವೆ. ಈ ಯೋಜನೆಯಡಿ, ಕುಟುಂಬದ ಯಜಮಾನಿ ಮಹಿಳೆಯರಿಗೆ ಹಣ ಸಿಗಲಿದ್ದು, ಅಂತ್ಯೋದಯ, ಬಿಪಿಎಲ್ ಅಥವಾ ಎಪಿಎಲ್ ಪಡಿತರ ಚೀಟಿಗಳಲ್ಲಿ ಯಜಮಾನಿ ಎಂದು ನಮೂದಾಗಿರುವ ಮಹಿಳೆಯರು ಮಾತ್ರ ಈ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಆಹ್ವಾನ; ಸಿಎಂ ಡಿಕೆಶಿ ಮಾಹಿತಿ
ಯೋಜನೆಯ ಲಾಭ ಪಡೆಯಲು ಕೆಲವು ನಿರ್ಬಂಧಗಳನ್ನು ಸಹ ವಿಧಿಸಲಾಗಿದೆ. ಕುಟುಂಬದ ಯಜಮಾನಿ ಅಥವಾ ಅವರ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅವರು ಈ ಯೋಜನೆಗೆ ಅನರ್ಹರಾಗುತ್ತಾರೆ. ಅದೇ ರೀತಿ, ಯಜಮಾನಿ ಅಥವಾ ಅವರ ಪತಿ ಜಿಎಸ್‌ಟಿ ಪಾವತಿದಾರರಾಗಿದ್ದರೂ ಸಹ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲ.
ಇನ್ನು ಗ್ಯಾರಂಟಿ ಪರಿಷ್ಕರಣೆ ವಿಚಾರವಾಗಿ ವಿಪಕ್ಷಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಟೀಕೆ ನಡೆಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮರು ಅರ್ಜಿ ಸ್ವೀಕಾರ ಒಳ್ಳೆಯ ಉದ್ದೇಶವೇ ಇರಬಹುದು. ಆದರೆ ಆ ನೆಪದಲ್ಲಿ ನಿಜವಾದ ಫಲಾನುಭವಿಗಳಿಗೆ ತೊಂದರೆ ಆಗಬಾರದು. 2 ಯೋಜನೆಗಳಲ್ಲಿ ಲೋಪದೋಷಗಳಿವೆ ಎಂದು ಸರ್ಕಾರ ಹೇಳಿದೆ. ಈ ಹಿಂದೆ ಏನೂ ಯೋಚಿಸದೆ ಗ್ಯಾರಂಟಿ ಯೋಜನೆ ಘೋಷಿಸಿದ್ದರು. ಈಗ ಅದರ ಹೊಡೆತದಿಂದ ನ್ಯೂನತೆಗಳು ಗೊತ್ತಾಗಿವೆ. ಹಾಗಾಗಿ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಎರಡು ತಿಂಗಳ ಗೃಹಲಕ್ಷ್ಮೀ ಹಣ ಬಾಕಿ ಬಗ್ಗೆ ಸರ್ಕಾರ ಚಕಾರ ಎತ್ತಿಲ್ಲ. 5 ಸಾವಿರ ಕೋಟಿ ಲೆಕ್ಕದ ಬಗ್ಗೆ ಸರ್ಕಾರ ಜಾಣ ಮೌನಕ್ಕೆ ಜಾರಿದೆ ಎಂದವರು ಕಿಡಿ ಕಾರಿದ್ದಾರೆ. ಮತ್ತೊಂದೆಡೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಗೃಹಲಕ್ಷ್ಮಿ ಈಗ ಚುನಾವಣಾ ಲಕ್ಷ್ಮೀ ಆಗಿದೆ. ಗೃಹಲಕ್ಷ್ಮಿ ಯೋಜನೆಯನ್ನು 4-5 ತಿಂಗಳುಗಳ ಕಾಲ ತಡೆಹಿಡಿದು, ಚುನಾವಣೆ ಬಂದಾಗ ಚುನಾವಣಾ ಲಕ್ಷ್ಮಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:19 pm, Sun, 14 June 26