AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ಲೀಲ ವಿಡಿಯೋ ಪ್ರಕರಣ: ಪ್ರಜ್ವಲ್ ಬಂಧನ, ಏರ್​​ಪೋರ್ಟ್​​ನಲ್ಲಿ ಹೀಗೆ ನಡೆಯಿತು ಪ್ರಕ್ರಿಯೆ

34 ದಿನಗಳ ಕಾಲ ವಿದೇಶದಲ್ಲಿ ಕುಳಿತು ಚಳ್ಳೇಕಣ್ಣು ತಿನ್ನುಸುತ್ತಿದ್ದ ಪ್ರಜ್ವಲ್ ರೇವಣ್ಣ ಮೇ.30ರ ತಡರಾತ್ರಿ ಅರೆಸ್ಟ್ ಆಗಿದ್ದಾರೆ. ಪ್ರಜ್ವಲ್ ರೇವಣ್ಣ ಅರೆಸ್ಟ್ ಮಾಡಲಿಕ್ಕಾಗಿ ಎಸ್ಐಟಿ ಟೀಂ ಏರ್‌ಪೋರ್ಟ್‌ಗೆ ಬಂದಿತ್ತು. ವಿಮಾನ ನಿಲ್ದಾಣದ ಭದ್ರತಾ ಪಡೆಯಿಂದ ವಿಶೇಷ ಅನುಮತಿ ಪಡೆದು ವಲಸೆ ವಿಭಾಗದ ಬಳಿ ಕಾದು ಕುಳಿತಿತ್ತು. ಪ್ರಜ್ವಲ್‌ ವಿಮಾನದಿಂದ ಕೆಳಗಿಳಿದು ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌, ಕೆಲ ದಾಖಲಾತಿ ಪರಿಶೀಲಿಸಿ ವಶಕ್ಕೆ ತೆಗೆದುಕೊಂಡರು. ಬಳಿಕ ರಾತ್ರಿ 1.20 ಕ್ಕೆ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ಪ್ರಜ್ವಲ್‌ರನ್ನು ಒಪ್ಪಿಸಿದರು.

TV9 Web
| Edited By: |

Updated on:May 31, 2024 | 9:16 AM

Share

ಬೆಂಗಳೂರು, ಮೇ.31: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಬರೋಬ್ಬರಿ 34 ದಿನಗಳ ಬಳಿಕ ಬೆಂಗಳೂರಿಗೆ ಮರಳಿದ್ದು ಅರೆಸ್ಟ್ ಆಗಿದ್ದಾರೆ. ನೋಟಿಸ್ ಮೇಲೆ ನೋಟಿಸ್ ಕೊಟ್ರೂ ಪ್ರಜ್ವಲ್ ಜಗ್ಗಿರಲಿಲ್ಲ. ಲುಕ್‌ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್‌ಗೂ ಕ್ಯಾರೆ ಎಂದಿರಲಿಲ್ಲ. ರಾಜಕೀಯ ಜಂಗೀಕುಸ್ತಿ ನಡೀತಿದ್ರೂ ಪ್ರತ್ಯಕ್ಷವಾಗಿರಲಿಲ್ಲ. ದೇಶಾದ್ಯಂತ ಚರ್ಚೆಯಾಗ್ತಿದ್ರೂ ಸುಳಿವೇ ಇರಲಿಲ್ಲ. ಆದ್ರೀಗ 34 ದಿನ ಕಣ್ಣಾಮುಚ್ಚಾಲೆ ಆಟ ಕೊನೆಗೂ ಅಂತ್ಯವಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಕೊನೆಗೂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದೇವೇಗೌಡರು ಖಡಕ್ ವಾರ್ನಿಂಗ್ ಕೊಟ್ಟ ಒಂದೇ ವಾರದೊಳಗೆ ಪ್ರಜ್ವಲ್ ರೇವಣ್ಣ ಎಸ್ಐಟಿ (SIT) ಮುಂದೆ ವಿಚಾರಣೆಗೆ ಹಾಜರಾಗಲು ಬೆಂಗಳೂರಿಗೆ ಬಂದಿಳಿದಿದ್ದು ಏರ್​​ಪೋರ್ಟ್​​ನಲ್ಲಿ ಪ್ರಜ್ವಲ್ ರೇವಣ್ಣ ಬಂಧನ ಪ್ರಕ್ರಿಯೆ ಹೇಗಿತ್ತು ಎಂಬ ಬಗ್ಗೆ ಇಲ್ಲಿದೆ ವಿವರಣೆ.

ಜರ್ಮನಿಯಿಂದ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ ಪ್ರಜ್ವಲ್

ಲೋಕಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಏಪ್ರಿಲ್ 26ರಂದು ರಾತ್ರೋರಾತ್ರಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಿದ್ದರು. ಆನಂತರ ಪ್ರಜ್ವಲ್ ಯಾವ ದೇಶದಲ್ಲಿ ಇದ್ದಾರೆ ಅನ್ನೋದು ಕನ್ಫರ್ಮ್ ಆಗಿರಲಿಲ್ಲ. ಮೊನ್ನೆ ಮೊನ್ನೆ ಮೇ 27ರಂದು ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ ಪ್ರಜ್ವಲ್ ಮೇ 31ರಂದು ಬೆಂಗಳೂರಿಗೆ ಬಂದು ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗೋದಾಗಿ ತಿಳಿಸಿದ್ದರು. ಇದಾದ ಬೆನ್ನಲ್ಲೇ ಜರ್ಮನಿಯ ಮ್ಯೂನಿಕ್‌ನಿಂದ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿದ್ರು. ಲುಫ್ತಾನ್ಸಾ ಏರ್‌ಲೈನ್ಸ್‌ LH 764 ವಿಮಾನದಲ್ಲಿ ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ಕಾಯ್ದಿರಿಸಿದ್ದರು. ಕಳೆದ 34 ದಿನಗಳಿಂದ ಎಸ್‌ಐಟಿಗೆ ಚಳ್ಳೇಹಣ್ಣು ತಿನ್ನಿಸಿದ್ದ ಪ್ರಜ್ವಲ್ ನಿನ್ನೆ ಮಧ್ಯರಾತ್ರಿ ಬೆಂಗಳೂರಿಗೆ ಬಂದಿಳಿದ್ರು.

ತಡರಾತ್ರಿ 1.20ರ ಸುಮಾರಿಗೆ SITಯಿಂದ ಅರೆಸ್ಟ್

ಭಾರತೀಯ ಕಾಲಮಾನದ ಪ್ರಕಾರ ನಿನ್ನೆ ಸಂಜೆ 4.05ಕ್ಕೆ ಮ್ಯೂನಿಕ್‌ನಿಂದ ಹೊರಟ ಲುಫ್ತಾನ್ಸಾ ಏರ್‌ಲೈನ್ಸ್ ವಿಮಾನ ತಡರಾತ್ರಿ 12.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಯ್ತು. ಪ್ರಜ್ವಲ್ ರೇವಣ್ಣ ಅರೆಸ್ಟ್ ಮಾಡಲಿಕ್ಕಾಗಿ ಏರ್‌ಪೋರ್ಟ್‌ನಲ್ಲಿ ಎಸ್ಐಟಿ ಅಧಿಕಾರಿಗಳ ಟೀಂ ಕಾದು ಕುಳಿತಿತ್ತು. ವಿಮಾನ ನಿಲ್ದಾಣದ ಭದ್ರತಾ ಪಡೆಯಿಂದ ವಿಶೇಷ ಅನುಮತಿ ಪಡೆದು ವಲಸೆ ವಿಭಾಗದ ಬಳಿ ಕಾದು ಕುಳಿತಿದ್ರು. ಪ್ರಜ್ವಲ್‌ ವಿಮಾನದಿಂದ ಕೆಳಗಿಳಿದು ಬರುತ್ತಿದ್ದಂತೆ ಇಮಿಗ್ರೇಷನ್ ಅಧಿಕಾರಿಗಳು ಅವರ ಪಾಸ್‌ಪೋರ್ಟ್‌ ಸೇರಿದಂತೆ ಕೆಲ ದಾಖಲಾತಿಗಳನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡರು. ಬಳಿಕ ರಾತ್ರಿ 1.20 ಕ್ಕೆ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ಪ್ರಜ್ವಲ್‌ರನ್ನು ಒಪ್ಪಿಸಿದರು.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ದೊಡ್ಡ ಪ್ರಮಾಣದ ಶಿಕ್ಷೆ ಆಗಬೇಕು ಎಂದ ಮಾಜಿ ಸಿಎಂ ಬೊಮ್ಮಾಯಿ

KIAB ಹಿಂದಿನ ಗೇಟ್‌ಮೂಲಕ ಪ್ರಜ್ವಲ್ ಕರೆದೊಯ್ದ ಎಸ್ಐಟಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಭದ್ರತೆಯೊಂದಿಗೆ ಪ್ರಜ್ವಲ್‌ ರೇವಣ್ಣನ ಬಂಧಿಸಿದ ಎಸ್ಐಟಿ ಅಧಿಕಾರಿಗಳು ಮಾಧ್ಯಮಗಳ ಕಣ್ತಪ್ಪಿಸಿ ಹಿಂದಿನ ಗೇಟ್‌ಮೂಲಕ ಕರೆದೊಯ್ದರು. ನಂತರ ಏರ್‌ಪೋರ್ಟ್‌ನಿಂದ ಬೆಂಗಾವಲು ವಾಹನಗಳೊಂದಿಗೆ ಸೀದಾ ಚಾಲುಕ್ಯ ಸರ್ಕಲ್ ಬಳಿಯಿರುವ ಸಿಐಡಿ ಕಟ್ಟಡದಲ್ಲಿರುವ ಎಸ್ಐಟಿ ಕೇಂದ್ರಕ್ಕೆ ಕರೆದೊಯ್ದರು. ಗ್ರೇ ಕಲರ್‌ನ ಪುಲ್‌ ಓವರ್‌ ರೀತಿಯ ಸ್ವೆಟ್ ಸೂಟ್ ಧರಿಸಿದ್ದ ಪ್ರಜ್ವಲ್‌ರನ್ನು ವಾಹನದಲ್ಲಿ ಮಹಿಳಾ ಸಿಬ್ಬಂದಿ ಮಧ್ಯೆ ಕೂರಿಸಿ ಕರೆತರಲಾಯ್ತು. ಪ್ರಜ್ವಲ್ ಮುಖದಲ್ಲಿ ಯಾವುದೇ ರೀತಿಯ ಅಳುಕು ಇಲ್ಲದೇ ಇದ್ದಂತೆ ಕಂಡುಬಂತು.

ರಾತ್ರಿಯಿಡೀ ಎಸ್ಐಟಿ ಕಚೇರಿಯಲ್ಲೇ ಕಳೆದ ಪ್ರಜ್ವಲ್

ಮಧ್ಯರಾತ್ರಿ 2 ಗಂಟೆ 10 ನಿಮಿಷಕ್ಕೆ ಪ್ರಜ್ವಲ್‌ರನ್ನು ಎಸ್ಐಟಿಗೆ ಕಚೇರಿಗೆ ಕರೆತಂದ ಬಳಿಕ ಕೆಲ ಕಾಲ ವಿಶ್ರಾಂತಿಗೆ ಅವಕಾಶ ಕಲ್ಪಿಸಲಾಗಿತ್ತು. ಎಸ್ಐಟಿ ಕಚೇರಿಯಲ್ಲೇ ಊಟದ ವ್ಯವಸ್ಥೆ ಮಾಡಿದ್ರು. ಬಿಗಿ ಬಂದೋಬಸ್ತ್‌ನಲ್ಲಿ ರಾತ್ರಿಯಿಡೀ ಎಸ್‌ಐಟಿ ಕಚೇರಿಯಲ್ಲೇ ಪ್ರಜ್ವಲ್ ಕಳೆದಿದ್ದು, ಇಂದು ಮುಂದಿನ ಕಾನೂನು ಪ್ರಕ್ರಿಯೆಗಳು ಜರುಗಲಿವೆ.

ಈ ಮಧ್ಯೆ ಕಾಕತಾಳಿಯ ಎಂಬಂತೆ ಡಿಕೆ ಸುರೇಶ್ ಮತ್ತು ಹ್ಯಾರಿಸ್ ಪುತ್ರ ನಲಪಾಡ್ ಪ್ರಜ್ವಲ್ ರೇವಣ್ಣ ಆಗಮಿಸುವ ವೇಳೆ ವಿಮಾನ ನಿಲ್ದಾಣಕ್ಕೆ ಬಂದಿಳಿದ್ರು. ಈ ವೇಳೆ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಪ್ರಜ್ವಲ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಯಾರ ಕೈವಾಡವಿಲ್ಲ. ಸ್ವಯಂಕೃತ ಪ್ರಕರಣವಾಗಿದೆ. ತಪ್ಪು ಮಾಡಿದ್ದರೆ ಕಾನೂನು ತನ್ನ ಕ್ರಮಕೈಗೊಳ್ಳಲಿದೆ ಅಂತೇಳಿದ್ರು.

ಒಟ್ಟಾರೆ, 34 ದಿನಗಳ ಬಳಿಕ ಪ್ರಜ್ವಲ್ ರೇವಣ್ಣ ಕಣ್ಣಾಮುಚ್ಚಾಲೆ ಆಟಕ್ಕೆ ತೆರೆಬಿದ್ದಿದೆ. ಬೆಂಗಳೂರಿಗೆ ಬರ್ತಿದ್ದಂತೆ ಅರೆಸ್ಟ್ ಆಗಿರೋ ಪ್ರಜ್ವಲ್‌ಗೆ ಮುಂದೆ ಎಸ್‌ಐಟಿ ಯಾವ ರೀತಿ ಗ್ರಿಲ್ ಮಾಡಲಿದೆ ಅನ್ನೋದೆ ಕುತೂಹಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:31 am, Fri, 31 May 24