ಪ್ರವಾಸೋದ್ಯಮಕ್ಕೆ ತಟ್ಟಿದ ಬಿಸಿ; ವಯನಾಡು ದುರಂತದ ನಂತರ ಪ್ರೈವೇಟ್ ಟ್ರಾವೆಲ್ಸ್ ಏಜೆನ್ಸಿಗಳಿಗೆ ಭಾರೀ ನಷ್ಟ
ಮಾನ್ಸೂನ್‌ನಲ್ಲಿ ದೇವರನಾಡು ಕೇರಳ ಅತ್ಯಂತ ವೈಭವಯುತವಾಗಿ ಹಚ್ಚ ಹಸಿರಿನ ಪ್ರಕೃತಿಯ ತಾಣಗಳು ಕಂಗೊಳಿಸುತ್ತವೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ತನ್ನ ನೈಜ ಸೌಂದರ್ಯದಿಂದ ಬೆಂಗಳೂರಿನ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ ಮೊನ್ನೆ ನಡೆದ ವಯನಾಡು ಭೂ ಕುಸಿತ ಬೆಂಗಳೂರು ಜನರನ್ನ ಭಯಗೊಳಿಸಿದ್ದು ಕೇರಳ ಪ್ರವಾಸ ಅಂದ್ರೆ ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಕರ್ನಾಟಕದ ಟೂರಿಸಂಗೆ ಬಿಗ್ ಶಾಕ್ ಸಿಕ್ಕಿದೆ.
ಬೆಂಗಳೂರು, ಆಗಸ್ಟ್.04: ಮಳೆಗಾಲದಲ್ಲಿ ದೇವರ ನಾಡು ಕೇರಳ ಸೌಂದರ್ಯ ಸವಿಯಬೇಕೇ ಬೆಂಗಳೂರು ವಯನಾಡ್- ಮುನ್ನಾರ್-ಕೊಚ್ಚಿ- ಅತಿರಪಲ್ಲಿ ಪ್ರವಾಸ ಎಂಜಾಯ್ ಮಾಡೋಬೇಕು ಅಂತಾ ರಾಜಧಾನಿ ಬೆಂಗಳೂರಿನ ಜನರು ಪ್ರತಿ ವರ್ಷ ಪ್ಲಾನ್ ಮಾಡ್ತಾರೆ. ಆದರೆ ಈ ವರ್ಷ ವಯನಾಡು ಭೂ ಕುಸಿತ ಹಿನ್ನಲೆ ಪ್ರವಾಸೋದ್ಯಮ ದಿಢೀರ್ ಕುಸಿತ ಕಂಡಿದೆ. ರಾಜಧಾನಿಯಿಂದ ಕೇರಳ ವಯನಾಡು ಮುನ್ನಾರ್ ಪ್ರವಾಸಕ್ಕೆ ಬುಕ್ಕಿಂಗ್ ಆಗಿದ್ದ ಸಂಪೂರ್ಣ ಟಿಕೆಟ್ಗಳು ಕ್ಯಾನ್ಸಲ್ ಆಗಿದ್ದು ಪ್ರವಾಸೋದ್ಯಮ ಹಾಗೂ ಖಾಸಗಿ ಟೂರಿಸ್ಟ್ ಮಾಲೀಕರು ಮತ್ತು ಬಸ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ತಂದಿದೆ.
ಟೂರಿಸ್ಟ್ ಮಾಲೀಕರಿಗೆ ಆರ್ಥಿಕ ಸಂಕಷ್ಟ ತಂದಿಟ್ಟ ವಯನಾಡು ಭೂ ಕುಸಿತ
ಮಳೆಗಾಲದಲ್ಲಿ ಅತಿ ಹೆಚ್ಚು ಜನರು ವಯನಾಡು ಟ್ರಿಪ್ಗೆ ಬುಕ್ಕಿಂಗ್ ಮಾಡ್ತಾರೆ. ವಯನಾಡು ಜೊತೆಗೆ ಮುನ್ನಾರ್-ಕೊಚ್ಚಿ- ಅತಿರಪಲ್ಲಿ ಊಟಿ ಪ್ರವಾಸ್ ಪ್ಲಾನ್ ಮಾಡ್ತಾರೆ. ಆದರೆ ಭೂ ಕುಸಿತದ ಬಳಿಕ ಎಲ್ಲ ಬುಕ್ಕಿಂಗ್ ಕ್ಯಾನ್ಸಲ್ ಆಗಿದ್ದು ಶೇ 90% ಕೇರಳ ಬುಕ್ಕಿಂಗ್ ಎಲ್ಲವೂ ರದ್ದಾಗಿದೆ. ಇನ್ನು ಮಳೆಗಾಲದಲ್ಲಿ ವಯನಾಡು ಸೇರಿದ್ದಂತೆ ಕೇರಳ ಪ್ರವಾಸಿ ತಾಣಗಳಿಗೆ ಹೆಚ್ಚು ಬುಕ್ಕಿಂಗ್ ಬರುತ್ತೆ ಅಂತಾ ಮೊದಲೆ 90 ದಿನಗಳಿಗೆ 4 ಲಕ್ಷ ಕೇರಳ ಹಾಗೂ ಕರ್ನಾಟಕ ಟ್ಯಾಕ್ಸ್ ಕಟ್ಟಿ ಪರ್ಮಿಟ್ ಪಡೆದಿದ್ದ ಬಸ್ ಮಾಲೀಕರಿಗೆ ಈಗ ಸಂಕಷ್ಟ ತಂದಿದೆ. ಯಾಕಂದ್ರೆ ಎಲ್ಲ ಬುಕ್ಕಿಂಗ್ ಕ್ಯಾನ್ಸಲ್ ನಿಂದ ಕಟ್ಟಿದ್ದ ಎಲ್ಲ ಟ್ಯಾಕ್ಸ್ ಹಣ ನಷ್ಟ ಆಗಿದೆ ಎಂದು ಶ್ರೀ ಶಕ್ತಿ ಟ್ರಾವಲ್ಸ್ ಮಾಲೀಕ ಚಂದ್ರು ಸಮಸ್ಯೆ ಹೇಳಿಕೊಂಡಿದ್ದಾರೆ.
ಕರ್ನಾಟಕದಲ್ಲಿಯೂ ಕುಸಿತ ಕಂಡ ಪ್ರವಾಸೋದ್ಯಮ
ಕಳೆದ ಒಂದು ವಾರದಿಂದ ರಾಜ್ಯದಲ್ಲಿಯೂ ವ್ಯಾಪಕ ಮಳೆ ಹಿನ್ನಲೆ ಬಹುತೇಕ ಪ್ರವಾಸಿ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಚಿಕ್ಕಮಗಳೂರು, ಮಡಿಕೇರಿ, ಮಂಗಳೂರು ಟೂರ್ ಬುಕ್ಕಿಂಗ್ ರದ್ದಾಗಿದ್ದು ಟ್ಯಾಕ್ಸಿ ಮಾಲೀಕರಿಗೂ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ: ಬೆಂಗಳೂರಿಗರನ್ನು ಕರೆಯಲು ಬರುತ್ತಿರುವ ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವ ಇಬ್ರಾಹಿಂ
ಟ್ಯಾಕ್ಸಿ ಮಾಲೀಕರು ಅಷ್ಟೇ ಅಲ್ಲದೆ ವ್ಯಾಪಕ ಮಳೆ ಅತಿವೃಷ್ಠಿ ಟ್ಯಾಕ್ಸಿ ಚಾಲಕರ ಆದಾಯಕ್ಕೂ ಕುತ್ತು ತಂದಿದೆ. ಕಳೆದ ಹದಿನೈದು ದಿನದಿಂದ ಯಾವುದೇ ಬುಕ್ಕಿಂಗ್ ಇಲ್ಲದೆ ಟ್ಯಾಕ್ಸಿ, ಕಾರ್ ಗಳನ್ನ ಹೊರಗಡೆಯೇ ತಗೆದಿಲ್ಲ ಎಂದು ಚಾಲಕ ಮುತ್ತುರಾಜ್ ತಿಳಿಸಿದ್ದಾರೆ.
ಒಟ್ನಲ್ಲಿ ಗಾಡ್ಸ್ ಓನ್ ಕಂಟ್ರಿಯ ಆಹ್ಲಾದಕರವಾದ ಕಡಲತೀರಗಳು, ಹಿನ್ನೀರಿನಿಂದ ಕೂಡಿದ ಸೊಗಸಾದ ಗಿರಿಧಾಮಗಳಿಗೆ ಹೆಚ್ಚಾಗಿ ನವ ಜೋಡಿಗಳಿಗೆ, ಸ್ನೇಹಿತರ ಜೊತೆ ಪ್ರವಾಸ ಮಾಡಲು ಅಥವಾ ಕುಟುಂಬದ ಜೊತೆ ಆನಂದಮಯವಾಗಿ ಸಮಯ ಕಳೆಯಲು ಬೆಂಗಳೂರು ಜನರು ಕೇರಳದ ರಮಣೀಯ ಪ್ರವಾಸಿ ತಾಣಗಳನ್ನ ಆಯ್ಕೆ ಮಾಡಿಕೊಂಡು ಎಂಜಾಯ್ ಮಾಡ್ತೀದ್ರು. ಆದರೆ ಈಗ ವಯನಾಡು ದುರಂತ, ಕೇರಳ ಅಂದ್ರೆ ಭಯ ಪಡುವಂತೆ ಮಾಡಿದ್ದು ಆದಷ್ಟು ಬೇಗ ಎಲ್ಲವೂ ಸುವ್ಯವಸ್ಥಿತ ಸ್ಥಿತಿಗೆ ಬರಬೇಕು ಎಂಬುದು ನಮ್ಮ ಕಳಕಳಿ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡು