
ಬೆಂಗಳೂರು, ಆಗಸ್ಟ್ 13: ಸ್ವಾತಂತ್ರ್ಯ ದಿನಾಚರಣೆಯಂದು (Independence Day) ವಿಧಾನಸೌಧದ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಕಾರ್ಯಕ್ರಮ ಆಯೋಜನೆಯಾಗಿದ್ದು, ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಈ ಹಬ್ಬಕ್ಕೆ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ವಿಧಾನಸೌಧದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ವಾಹನ ಸಂಚಾರ ಮಾರ್ಗಗಳನ್ನು (traffic diversions) ಮಾರ್ಪಾಡು ಮಾಡಿದ್ದಾರೆ.
ಫ್ರೀಡಂ ಹಬ್ಬ ಕಾರ್ಯಕ್ರಮ ಹಿನ್ನೆಲೆ ಅಂಬೇಡ್ಕರ್ ರಸ್ತೆಯ ಮೂಲಕ ಕೆ.ಆರ್. ಸರ್ಕಲ್ ಕಡೆಗೆ ಹೋಗುವ ಹಾಗೂ ಕೆ.ಆರ್. ಸರ್ಕಲ್‌ನಿಂದ ಅಂಬೇಡ್ಕರ್ ರಸ್ತೆಯ ಮೂಲಕ ಶಿವಾಜಿನಗರ ಮತ್ತು ವಸಂತನಗರ ಕಡೆಗೆ ತೆರಳುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. (ವಿಧಾನಸೌಧ ಮುಂಭಾಗದ ಎರಡು ಬದಿಯ ರಸ್ತೆಗಳನ್ನು ಬಂದ್ ಮಾಡಲಾಗುವುದು).
ಇದನ್ನೂ ಓದಿ: Video: ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಇನ್ನು ಫ್ರೀಡಂ ಹಬ್ಬ ಕಾರ್ಯಕ್ರಮ ವಿಚಾರವಾಗಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘12 ವರ್ಷದ ಮಕ್ಕಳಿದ್ದರೆ ನೋಂದಣಿ ಇರಲಿದೆ. ಇದುವರೆಗೂ 18 ಸಾವಿರ ಜನರು ಆನ್ಲೈನ್ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ಮೂರು ಭಾಗಗಳಾಗಿ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ರಿಂದ 3 ಗಂಟೆ ಒಂದು ಭಾಗ, ಮಧ್ಯಾಹ್ನ 3 ರಿಂದ ಸಂಜೆ 6 ಗಂಟೆವರೆಗೂ ಎರಡನೇ ಭಾಗ ಮತ್ತು ಸಂಜೆ 6ರ ನಂತರ ಮೂರನೇ ಭಾಗ ಎಂದು ವಿಂಗಡನೆ ಮಾಡಲಾಗಿದ್ದು, ಒಂದೊಂದು ಭಾಗದಲ್ಲೂ ಒಂದೊಂದು ಬಗೆಯ ಕಾರ್ಯಕ್ರಮ ಇರಲಿದೆ’ ಎಂದು ಮಾಹಿತಿ ನೀಡಿದರು.
ಇನ್ನು ‘ಭದ್ರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ‘ವಿಧಾನಸೌಧದ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿನ ಸಂಖ್ಯೆ ಇರಲಿದೆ. ಐಪಿಎಲ್ ಪಂದ್ಯ, ಹೊಸ ವರ್ಷದ ಸಂಭ್ರಮಾಚರಣೆ ರೀತಿ ಬಿಗಿ ಬಂದೋಬಸ್ತ್ ಭದ್ರತೆ ಇರಲಿದೆ. ಕ್ಯೂಆರ್ ಕೋಡ್ನಲ್ಲಿ ಇಂತಿಷ್ಟೇ ಸಮಯ ಎಂದು ನಮೂದಿಸಲಾಗಿರುತ್ತೆ. ಆ ಸಮಯದಲ್ಲಿ ಮಾತ್ರ ಅವರಿಗೆ ಅವಕಾಶ ನೀಡಲಾಗುವುದು. 3000ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಆಗಸ್ಟ್ 15 ರಂದು ಬೆಳಗ್ಗೆ ಕೆ.ಆರ್. ವೃತ್ತದಿಂದ ತಿಮ್ಮಯ್ಯ ವೃತ್ತದವರೆಗೂ ಟ್ರಾಫಿಕ್ ನಿರ್ಬಂಧ ಇರಲಿದೆ. ಸಾರ್ವಜನಿಕರು ಪೊಲೀಸರು ಸೂಚಿಸಿದ ನಿಯಮ ಪಾಲಿಸುವಂತೆ ಮನವಿ’ ಮಾಡಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:34 pm, Thu, 13 August 26