‘ಕೈ’ ಮನೆಯಲ್ಲಿ ಒಳ ಮೀಸಲಾತಿ ಗದ್ದಲ: ಹೈಕಮಾಂಡ್​​ ತಲುಪಿದ ವಿವಾದ; ಸಚಿವ ಸಂಪುಟ ಸಭೆಯತ್ತ ಎಲ್ಲರ ಚಿತ್ತ

ಒಳ ಮೀಸಲಾತಿ ಜೇನುಗೂಡಿಗೆ ಕೈಹಾಕಿರುವ ಕಾಂಗ್ರೆಸ್ ಸರ್ಕಾರಕ್ಕೆ ಈಗ ಸ್ವಪಕ್ಷೀಯರಿಂದಲೇ ಸಂಕಷ್ಟ ಎದುರಾಗಿದೆ. 56 ಸಾವಿರ ಹುದ್ದೆಗಳ ನೇಮಕಾತಿಗೆ ಒಪ್ಪಿಗೆ ನೀಡಿರುವ ಬೆನ್ನಲ್ಲೇ, ಒಳ ಮೀಸಲಾತಿ ಜಾರಿ ಮಾಡದ ಸರ್ಕಾರದ ನಡೆಯ ವಿರುದ್ಧ ದಲಿತ ಎಡಗೈ ನಾಯಕರು ಕೆಂಡಾಮಂಡಲವಾಗಿದ್ದಾರೆ. ಇಂದು ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಲಿದ್ದು, ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಕೈ ಮನೆಯಲ್ಲಿ ಒಳ ಮೀಸಲಾತಿ ಗದ್ದಲ: ಹೈಕಮಾಂಡ್​​ ತಲುಪಿದ ವಿವಾದ; ಸಚಿವ ಸಂಪುಟ ಸಭೆಯತ್ತ ಎಲ್ಲರ ಚಿತ್ತ
ಒಳ ಮೀಸಲಾತಿ ವಿವಾದ
Image Credit source: Tv9 Kannada
Edited By:

Updated on: Mar 05, 2026 | 5:51 PM

ಬೆಂಗಳೂರು, ಮಾರ್ಚ್​​ 05: ರಾಜ್ಯ ಸರ್ಕಾರ ಇತ್ತೀಚೆಗೆ 56 ಸಾವಿರ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ಐತಿಹಾಸಿಕ ನಿರ್ಧಾರ ಪ್ರಕಟಿಸಿದೆ. ಆದರೆ, ಈ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಬಗ್ಗೆ ಸ್ಪಷ್ಟ ನಿಲುವು ತಾಳದಿದ್ದಕ್ಕೆ ಸ್ವತಃ ಕಾಂಗ್ರೆಸ್‌ನ ದಲಿತ ಎಡಗೈ ಸಚಿವರು ಮತ್ತು ನಾಯಕರು ಅಸಮಾಧಾನ ಹೊರಹಾಕಿದ್ದಾರೆ. ಉದ್ಯೋಗ ಆಕಾಂಕ್ಷಿಗಳ ಪ್ರತಿಭಟನೆಗೆ ಮಣಿದು ನೇಮಕಾತಿ ಮಾಡುತ್ತಿರುವ ಸರ್ಕಾರ, ಒಳ ಮೀಸಲಾತಿ ಕಡೆಗಣಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಪ್ರತಿಭಟನೆಯ ಎಚ್ಚರಿಕೆ

ಒಳ ಮೀಸಲಾತಿ ವಿಚಾರದಲ್ಲಿ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವಿನ ಸಂಘರ್ಷ ಈಗ ಬೀದಿಗೆ ಬಂದಿದ್ದು, ಎಸ್‌ಸಿ ಸಮುದಾಯಕ್ಕೆ ಸಿಗುವ ಶೇ.15 ಮೀಸಲಾತಿಯಲ್ಲಿ ಒಳ ಮೀಸಲಾತಿ ನೀಡಲು ಸಚಿವರಾದ ಮುನಿಯಪ್ಪ, ತಿಮ್ಮಾಪುರ ಮತ್ತು ಎಡಗೈ ನಾಯಕರಾದ ಆಂಜನೇಯ, ಚಂದ್ರಪ್ಪ ಅವರಿಂದ ಒತ್ತಡ ಹೆಚ್ಚಾಗಿದೆ. ಒಂದು ವೇಳೆ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳದಿದ್ದರೆ ಮಾದಿಗ ಒಕ್ಕೂಟವು ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.

ಇದನ್ನೂ ಓದಿ: ಕೆಲವು ಗೊಂದಲಗಳ ಮಧ್ಯೆಯೂ ದಲಿತರ ಒಳ ಮೀಸಲಾತಿ ವಿಧೇಯಕಕ್ಕೆ ರಾಜ್ಯಪಾಲರಿಂದ ಅಂಗೀಕಾರ

ಎಐಸಿಸಿ ಅಂಗಳ ತಲುಪಿದ ಮೀಸಲಾತಿ ಕಿಚ್ಚು!

ಇನ್ನು ಈ ವಿವಾದ ಈಗ ಹೈಕಮಾಂಡ್ ಮಟ್ಟಕ್ಕೂ ತಲುಪಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿರುವ ಎಡಗೈ ಮತ್ತು ಬಲಗೈ ನಾಯಕರು ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದಾರೆ. ವಿಶೇಷವಾಗಿ ದಲಿತ ಬಲಗೈ ನಾಯಕರಾದ ಪರಮೇಶ್ವರ್ ಮತ್ತು ಮಹದೇವಪ್ಪ ಅವರ ವಿರುದ್ಧ ಎಡಗೈ ನಾಯಕರು ಅಸಮಾಧಾನಗೊಂಡಿದ್ದಾರೆ. ಪಕ್ಷದ ಒಳಗೆ ಹೊತ್ತಿಕೊಂಡಿರುವ ಈ ಬೆಂಕಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಎಡಗೈ ನಾಯಕರು ಮೀಸಲಾತಿಗಾಗಿ ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ದಲಿತ ಬಲಗೈ ಸಮುದಾಯದ ಒಕ್ಕೂಟವು ಒಳ ಮೀಸಲಾತಿಗೆ ಒಳಗೊಳಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಜ್ಞಾನಪ್ರಕಾಶ್ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಅವೈಜ್ಞಾನಿಕ ಎಂದು ಕರೆದಿದ್ದಾರೆ. ಕಾನೂನು ಅಡೆತಡೆಗಳು ನಿವಾರಣೆಯಾಗುವವರೆಗೂ ಹಳೆ ಪದ್ಧತಿಯಲ್ಲೇ ನೇಮಕಾತಿ ಮುಂದುವರಿಸುವಂತೆ ಒತ್ತಾಯಿಸಿದ್ದಾರೆ.

ಈ ನಡುವೆ ಸಂಪುಟ ಸಭೆಯಲ್ಲಿ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ ಎಂಬ ಭರವಸೆ ಗೃಹ ಸಚಿವ ಪರಮೇಶ್ವರ್ ಅವರಿಂದ ವ್ಯಕ್ತವಾಗಿದೆ. ಒಳ ಮೀಸಲಾತಿ ಕೊಡಲು ಸರ್ಕಾರ ಈಗಾಗಲೇ ಒಪ್ಪಿಕೊಂಡಿದೆ. ರೋಸ್ಟರ್ ಸಿದ್ಧಪಡಿಸುವಾಗ ಆಗಿರುವ ಗೊಂದಲಗಳ ಬಗ್ಗೆ ಚರ್ಚೆ ಅಗತ್ಯವಿದೆ. ಎಸ್‌ಸಿ ಸಮುದಾಯಕ್ಕೆ ಶೇ. 17 ಮತ್ತು ಅಲೆಮಾರಿಗಳಿಗೆ ಶೇ.1ರಷ್ಟು ನೀಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದವರು ತಿಳಿಸಿದ್ದಾರೆ. ಒಟ್ಟಿನಲ್ಲಿ ಇಂದಿನ ಸಚಿವ ಸಂಪುಟ ಸಭೆಯ ನಿರ್ಧಾರದ ಮೇಲೆ ರಾಜ್ಯದ ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಮತ್ತು ದಲಿತ ಸಮುದಾಯಗಳ ಭವಿಷ್ಯ ಅಡಗಿದೆ. ಸರ್ಕಾರ ಸಮತೋಲನದ ನಿರ್ಧಾರ ತೆಗೆದುಕೊಳ್ಳುತ್ತಾ ಅಥವಾ ಈ ವಿವಾದ ಮತ್ತಷ್ಟು ಉಲ್ಬಣಗೊಳ್ಳುತ್ತಾ ಎಂಬುದು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:50 pm, Thu, 5 March 26

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us